ದಿಕ್ಕು ತೋರಿದ ಮಾನವೀಯತೆ.
ಅಮೇರಿಕಾದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಗ್ಯಾರೇಜಿನಲ್ಲಿ ಒಂದು ಹಳೆ ಕಾರು ಇದೆಯಂತೆ. ಅದನ್ನು ಅವರು ಉಪಯೋಗಿಸುತ್ತಿಲ್ಲ, ಅಲ್ಲದೆ ಹಿಂಬದಿಯ ಗಾಜು ಒಡೆದಿದೆ. ಅಮೇರಿಕಾದ ಮಾಜಿ ಅಧ್ಯಕ್ಷರೊಬ್ಬರು ಗಾಜು ಒಡೆದ ಕಾರನ್ನು ಯಾಕೆ ಹಾಗೆ ಉಳಿಸಿಕೊಂಡಿದ್ದಾರೆ ಎಂಬುದು ಸಹಜ ಕುತೂಹಲ. ಅವರು ಹೀಗೆ ಹೇಳುತ್ತಾರೆ , 'ಈ ಕಾರು ನನಗೆ ಮಾನವೀಯತೆಯ ಅರ್ಥವನ್ನು ಸ್ಪಷ್ಟಪಡಿಸಿತು, ಸಮಾಜ ಸೇವೆಯ ಬಗೆಯನ್ನು ಮತ್ತು ಬದ್ಧತೆಯನ್ನು ತಿಳಿಸಿತು. ' ಏನದು ಆ ಕಾರಿನ ಹಿಂದಿರುವ ಕಥೆ? ಅಮೇರಿಕಾದ ಒಂದು ಹೆದ್ದಾರಿ. ನಮ್ಮ ದೇಶದ ಹಾಗಲ್ಲ.ಅಲ್ಲಿ ಜನರ ಓಡಾಟ ಇಲ್ಲವೇ ಇಲ್ಲ ಎಂಬಷ್ಟು ವಿರಳ. ಆದರೆ ಒಂದರ ಹಿಂದೆ ಒಂದೆಂಬಂತೆ ಕಾರುಗಳು ಮಾತ್ರ ವೇಗವಾಗಿ ಸಾಗುತ್ತಿರುತ್ತವೆ. ಹೆದ್ದಾರಿಯ ಪಕ್ಕದಲ್ಲಿ ಒಬ್ಬ ಹುಡುಗ ನಿಂತುಕೊಂಡು ಸಾಗುತ್ತಿದ್ದ ಕಾರುಗಳಿಗೆಲ್ಲಾ ಕೈ ಅಡ್ಡಹಾಕಿ ನಿಲ್ಲಿಸುವಂತೆ ಕೇಳುತ್ತಿದ್ದ . ಆದರೆ ಯಾರೊಬ್ಬರೂ ಇವನ ಕೋರಿಕೆಯನ್ನು ಗಮನಿಸಿಯೂ ಗಮನಿಸದಂತೆ ತಮ್ಮ ಪಾಡಿಗೆ ತಾವು ಸಾಗುತ್ತಲೇ ಇದ್ದರು. ಹೀಗೆ ಅವನು ತುಂಬಾ ಹೊತ್ತು ಪ್ರಯತ್ನಿಸಿದ. ಕೊನೆಯಲ್ಲಿ ಹುಡುಗನ ತಾಳ್ಮೆ ಕೆಟ್ಟಿತು. ಪಕ್ಕದಲ್ಲಿ ಬಿದ್ದಿದ್ದ ಮುಷ್ಟಿಗಾತ್ರದ ಒಂದು ಕಲ್ಲನ್ನು ತೆಗೆದುಕೊಂಡು ಕಾರೊಂದಕ್ಕೆ ಹಿಂಬದಿಯಿಂದ ಹೊಡೆದೇಬಿಟ್ಟ. ಕಾರಿನ ಹಿಂಗಾಜು ಒಡೆಯಿತು. ಸ್ವಲ್ಪ ದೂರ ಹೋಗಿ ನಿಂತಿತು. ಕಾರಿಂದ ಇಳಿದುಬಂದ ವ್ಯಕ್ತಿ ಕೋಪದಿಂದ ಹುಡುಗನಿಗೆ ಗದರಿದ, 'ಯಾಕೆ ಕಲ್ಲು ಹೊಡೆದೆ?' ಎಂದು . ಹುಡುಗ ಸ್ವಲ್ಪವೂ ಅಂಜದೆ , ಅಳುಕದೆ ಹೇಳಿದ, 'ಸರ್, ತುಂಬಾ ಹೊತ್ತಿನಿಂದ ಕಾಯುತ್ತಿದ್ದೇನೆ. ಕೈ ಅಡ್ಡಹಾಕಿ ಎಷ್ಟೇ ಕೇಳಿಕೊಂಡರೂ ಒಬ್ಬನೇ ಒಬ್ಬ ಕಾರನ್ನು ನಿಲ್ಲಿಸುತ್ತಿಲ್ಲ.' ಆ ವ್ಯಕ್ತಿ ಸಿಟ್ಟಿನಿಂದ ಕೇಳಿದ 'ಹಾಗಂತ ಕಾರಿಗೆ ಕಲ್ಲುಹೊಡೆಯೋದೆ? ಅಷ್ಟಕ್ಕೂ ನಿನಗೆ ಏನು ಬೇಕಾಗಿತ್ತು?' ಹುಡುಗ ಶಾಂತನಾಗಿ 'ಬನ್ನಿ' ಎಂದು ಹೇಳಿ ಅವರನ್ನು ಪಕ್ಕದ ಉದ್ಯಾನವನಕ್ಕೆ ಕರೆದುಕೊಂಡು ಹೋದ. ಅಲ್ಲೊಬ್ಬ ವೃದ್ಧರು ನೆಲದ ಮೇಲೆ ಬಿದ್ದಿದ್ದರು, ಅವರ ಪಕ್ಕದಲ್ಲಿ ಗಾಲಿಕುರ್ಚಿಯೊಂದು ನಿಂತಿತ್ತು. ಹುಡುಗ ' ಸರ್, ನನ್ನೊಬ್ಬನಿಂದ ಇವರನ್ನು ಎತ್ತಿ ಗಾಲಿ ಕುರ್ಚಿಯ ಮೇಲೆ ಕುಳ್ಳಿರಿಸಲು ಆಗುತ್ತಿಲ್ಲ ನೀವು ಸ್ವಲ್ಪ ಸಹಾಯ ಮಾಡಿ' ಎಂದನು. ಈ ಸಂದರ್ಭವನ್ನು ನೋಡಿ ಕಾರಿಂದಿಳಿದುಬಂದ ವ್ಯಕ್ತಿಯ ಕೋಪ ಅರ್ಧ ಇಳಿಯಿತು. ಇಬ್ಬರೂ ಸೇರಿ ವೃದ್ಧರನ್ನು ಕುರ್ಚಿಯ ಮೇಲೆ ಕುಳ್ಳಿರಿಸಿದರು. ಆ ವೃದ್ಧರು ಧನ್ಯವಾದವನ್ನು ಹೇಳಿ ಗಾಲಿ ಕುರ್ಚಿಯನ್ನು ಚಲಾಯಿಸುತ್ತಾ ಮುಂದೆ ಹೋದರು. ಆದರೆ ಕಾರಿಗೆ ಕಲ್ಲನ್ನು ಹೊಡೆದು ನಿಲ್ಲಿಸಿದ ಹುಡುಗನ ಉದ್ಧಟತನದ ಕುರಿತು ಅಸಮಾಧಾನ, ಮತ್ತು ಸಿಟ್ಟು ಹಾಗೇ ಇತ್ತು. ಅವರು ಸಿಡಿಮಿಡಿಗೊಳ್ಳುತ್ತಾ ಹುಡುಗನನ್ನು ಕುರಿತು ಹೀಗೆ ಹೇಳಿದರು, 'ಹೀಗೆ ವಯಸ್ಸಾದವರನ್ನು , ಕೈಲಾಗದವರನ್ನು ವಾಯುವಿಹಾರಕ್ಕೆ ಕರೆದುಕೊಂಡು ಬರಬಾರದು ತಿಳಿಯಿತೇನಪ್ಪ, ಕೈಲಾಗದವರು ಮನೆಯಲ್ಲೇ ಇದ್ದಾರೆ ಏನಾಗುತ್ತದೆ? ಎಲ್ಲರಿಗೂ ತೊಂದರೆ' ಎಂದರು. ಹುಡುಗ ಅಷ್ಟೇ ಸ್ಪಷ್ಟವಾಗಿ, ದಿಟ್ಟವಾಗಿ ಉತ್ತರಿಸಿದ, 'ಸರ್, ಅವರು ನನ್ನ ಅಜ್ಜನಲ್ಲ, ಅವರು ಯಾರೂ ಅಂತ ನನಗೆ ಗೊತ್ತಿಲ್ಲ, ಅಲ್ಲದೆ ಅವರಿಂದ ನನಗೆ ಏನೂ ಆಗಬೇಕಾದದ್ದಿಲ್ಲ.' ಹುಡುಗ ಹೀಗೆ ಹೇಳಿ ಮುಂದೆ ಹೊರಟು ಹೋದ. ಹುಡುಗನ ಮಾತುಕೇಳಿ ಕಾರಿನವನ ಕೋಪ ಪೂರ್ತಿ ಇಳಿಯಿತು, ಅಲ್ಲದೆ ನಾಚಿಕೆಯೂ ಆಯಿತು. ಹುಡುಗನ ಮಾತು ಚಾಟಿಯೇಟಿನಂತೆ ಒಳಮನಸ್ಸನ್ನು ಬಡಿದೆಬ್ಬಿಸಿತು. ತಾನು ಆ ಹುಡುಗನ ಬಗ್ಗೆ ತಪ್ಪು ತಿಳಿದುಕೊಂಡೆನಲ್ಲ ಎಂದು ಅನಿಸಿತು. 'ಮಾನವೀಯತೆ ಎಂದರೆ ಇದೇ ಅಲ್ಲವೇ? , ಪ್ರತಿಫಲಾಪೇಕ್ಷೆಯಿಲ್ಲದೆ ಅಗತ್ಯವಿದ್ದವರಿಗೆ ಸಹಾಯಮಾಡುವುದೆ ನಿಜವಾದ ಮಾನವೀಯತೆ. ಅಂದು ಆ ಕಾರಿಂದ ಇಳಿದು ಹುಡುಗನಿಗೆ ಮುಖಾಮುಖಿಯಾದವನೇ ರೊನಾಲ್ಡ್ ರೇಗನ್ - ಅಮೇರಿಕಾದ ಮಾಜಿ ಅಧ್ಯಕ್ಷ. ಸಾಮಾನ್ಯವಾಗಿ ಒಬ್ಬ ಚಿಕ್ಕ ಹುಡುಗ ವಯಸ್ಸಾದವರಿಗೆ ಸಹಾಯಮಾಡುವುದು ವಿಶೇಷವೇ . ಅದು ಆ ಹುಡುಗನ ಸಂಸ್ಕಾರ ಎಂದಿಟ್ಟುಕೊಂಡರೂ ತನಗೆ ಏನೂ ಸಂಬಂಧವಿಲ್ಲದ ಆ ವೃದ್ಧರಿಗೆ ಸಹಾಯಮಾಡ ಹೊರಟಿದ್ದು ಅವನ ಹಿರಿಮೆ. ಅಲ್ಲದೆ ಸಹಾಯ ಮಾಡಲು ಮುಂದಾದಾಗ ಉಂಟಾದ ತೊಂದರೆಯನ್ನು ನಿವಾರಿಸಿಕೊಂಡ ರೀತಿ ಅದು ಅವನ ದಿಟ್ಟತನ. ಬದ್ಧತೆ ಮತ್ತು ಧೈರ್ಯ ಒಟ್ಟೊಟ್ಟಿಗೆ ಎಲ್ಲರಲ್ಲೂ ಇರಲಾರದು. ಮಾನವೀಯ ಗುಣಗಳಿರಬಹುದು, ಮಾನವೀಯ ಯೋಜನೆಗಳಿರಬಹುದು ಅದನ್ನು ಜಾರಿಗೊಳಿಸುವುದು ಅಷ್ಟು ಸುಲಭವಲ್ಲ. ಅಮೇರಿಕಾದ ಅಧ್ಯಕ್ಷರಾಗುವುದಕ್ಕಿಂತ ಮುಂಚೆ ನಡೆದ ಈ ಘಟನೆಯಿಂದ ಅವರು ಸಾಕಷ್ಟು ಪ್ರಭಾವಿತರಾಗಿದ್ದರು. ಒಂದು ದೇಶದ ನಾಯಕನಾಗುವವನಿಗೆ ಅಂದು ಆ ಹುಡುಗ ಮಾದರಿಯಾಗಿದ್ದ. ತಾನು ಮಾಡಬೇಕಾದ ಒಳ್ಳೆಯ ಕಾರ್ಯಕ್ಕೆ ಏನೇ ತೊಂದರೆಗಳಿದ್ದರೂ ಅದನ್ನು ನಿವಾರಿಸಿಕೊಂಡು ಮಾಡಿಮುಗಿಸುವುದು ಶ್ರೇಷ್ಠ ನಾಯಕತ್ವದ ಲಕ್ಷಣ , ಮಾನವೀಯತೆ, ಸ್ಪಷ್ಟ ನಿಲುವು, ತೀರ್ಮಾನಿಸಿದ ಕೆಲಸವನ್ನು ಮಾಡಲೇಬೇಕೆಂಬ ಬದ್ಧತೆ, ಮತ್ತು ಧೈರ್ಯ ಇವೆಲ್ಲ ನಿಶ್ಚಿತವಾಗಿಯೂ ಅಪರೂಪದ ಗುಣಗಳು . ಒಟ್ಟಿಗೆ ಒಬ್ಬನಲ್ಲೇ ಇರುವ ನಾಯಕ ಸಿಕ್ಕರೆ ಅದು ನಮ್ಮ ಭಾಗ್ಯ.
No comments:
Post a Comment