Tuesday, 30 December 2014


     ದಿಕ್ಕು ತೋರಿದ ಮಾನವೀಯತೆ. 
   ಅಮೇರಿಕಾದ  ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಗ್ಯಾರೇಜಿನಲ್ಲಿ ಒಂದು ಹಳೆ ಕಾರು ಇದೆಯಂತೆ. ಅದನ್ನು ಅವರು ಉಪಯೋಗಿಸುತ್ತಿಲ್ಲ, ಅಲ್ಲದೆ ಹಿಂಬದಿಯ ಗಾಜು ಒಡೆದಿದೆ. ಅಮೇರಿಕಾದ ಮಾಜಿ ಅಧ್ಯಕ್ಷರೊಬ್ಬರು ಗಾಜು ಒಡೆದ ಕಾರನ್ನು ಯಾಕೆ ಹಾಗೆ ಉಳಿಸಿಕೊಂಡಿದ್ದಾರೆ  ಎಂಬುದು ಸಹಜ ಕುತೂಹಲ. ಅವರು ಹೀಗೆ ಹೇಳುತ್ತಾರೆ ,  'ಈ ಕಾರು ನನಗೆ ಮಾನವೀಯತೆಯ ಅರ್ಥವನ್ನು ಸ್ಪಷ್ಟಪಡಿಸಿತು, ಸಮಾಜ ಸೇವೆಯ ಬಗೆಯನ್ನು ಮತ್ತು ಬದ್ಧತೆಯನ್ನು  ತಿಳಿಸಿತು. '  ಏನದು  ಆ ಕಾರಿನ ಹಿಂದಿರುವ ಕಥೆ?   ಅಮೇರಿಕಾದ ಒಂದು ಹೆದ್ದಾರಿ. ನಮ್ಮ ದೇಶದ ಹಾಗಲ್ಲ.ಅಲ್ಲಿ  ಜನರ ಓಡಾಟ ಇಲ್ಲವೇ ಇಲ್ಲ ಎಂಬಷ್ಟು ವಿರಳ. ಆದರೆ ಒಂದರ ಹಿಂದೆ ಒಂದೆಂಬಂತೆ ಕಾರುಗಳು  ಮಾತ್ರ  ವೇಗವಾಗಿ ಸಾಗುತ್ತಿರುತ್ತವೆ. ಹೆದ್ದಾರಿಯ ಪಕ್ಕದಲ್ಲಿ ಒಬ್ಬ ಹುಡುಗ ನಿಂತುಕೊಂಡು ಸಾಗುತ್ತಿದ್ದ ಕಾರುಗಳಿಗೆಲ್ಲಾ  ಕೈ ಅಡ್ಡಹಾಕಿ ನಿಲ್ಲಿಸುವಂತೆ ಕೇಳುತ್ತಿದ್ದ . ಆದರೆ ಯಾರೊಬ್ಬರೂ ಇವನ ಕೋರಿಕೆಯನ್ನು ಗಮನಿಸಿಯೂ ಗಮನಿಸದಂತೆ ತಮ್ಮ ಪಾಡಿಗೆ ತಾವು ಸಾಗುತ್ತಲೇ ಇದ್ದರು. ಹೀಗೆ ಅವನು  ತುಂಬಾ ಹೊತ್ತು  ಪ್ರಯತ್ನಿಸಿದ. ಕೊನೆಯಲ್ಲಿ  ಹುಡುಗನ ತಾಳ್ಮೆ  ಕೆಟ್ಟಿತು. ಪಕ್ಕದಲ್ಲಿ ಬಿದ್ದಿದ್ದ  ಮುಷ್ಟಿಗಾತ್ರದ  ಒಂದು ಕಲ್ಲನ್ನು ತೆಗೆದುಕೊಂಡು ಕಾರೊಂದಕ್ಕೆ ಹಿಂಬದಿಯಿಂದ ಹೊಡೆದೇಬಿಟ್ಟ. ಕಾರಿನ ಹಿಂಗಾಜು ಒಡೆಯಿತು. ಸ್ವಲ್ಪ ದೂರ ಹೋಗಿ ನಿಂತಿತು. ಕಾರಿಂದ ಇಳಿದುಬಂದ ವ್ಯಕ್ತಿ ಕೋಪದಿಂದ ಹುಡುಗನಿಗೆ ಗದರಿದ, 'ಯಾಕೆ ಕಲ್ಲು ಹೊಡೆದೆ?'  ಎಂದು .  ಹುಡುಗ ಸ್ವಲ್ಪವೂ ಅಂಜದೆ , ಅಳುಕದೆ ಹೇಳಿದ,  'ಸರ್, ತುಂಬಾ ಹೊತ್ತಿನಿಂದ ಕಾಯುತ್ತಿದ್ದೇನೆ. ಕೈ ಅಡ್ಡಹಾಕಿ ಎಷ್ಟೇ ಕೇಳಿಕೊಂಡರೂ  ಒಬ್ಬನೇ ಒಬ್ಬ  ಕಾರನ್ನು ನಿಲ್ಲಿಸುತ್ತಿಲ್ಲ.'  ಆ ವ್ಯಕ್ತಿ ಸಿಟ್ಟಿನಿಂದ ಕೇಳಿದ 'ಹಾಗಂತ ಕಾರಿಗೆ ಕಲ್ಲುಹೊಡೆಯೋದೆ? ಅಷ್ಟಕ್ಕೂ ನಿನಗೆ ಏನು ಬೇಕಾಗಿತ್ತು?'  ಹುಡುಗ ಶಾಂತನಾಗಿ  'ಬನ್ನಿ' ಎಂದು ಹೇಳಿ ಅವರನ್ನು ಪಕ್ಕದ ಉದ್ಯಾನವನಕ್ಕೆ ಕರೆದುಕೊಂಡು ಹೋದ.  ಅಲ್ಲೊಬ್ಬ  ವೃದ್ಧರು ನೆಲದ ಮೇಲೆ ಬಿದ್ದಿದ್ದರು,  ಅವರ ಪಕ್ಕದಲ್ಲಿ  ಗಾಲಿಕುರ್ಚಿಯೊಂದು ನಿಂತಿತ್ತು.  ಹುಡುಗ '  ಸರ್, ನನ್ನೊಬ್ಬನಿಂದ  ಇವರನ್ನು ಎತ್ತಿ ಗಾಲಿ  ಕುರ್ಚಿಯ ಮೇಲೆ ಕುಳ್ಳಿರಿಸಲು  ಆಗುತ್ತಿಲ್ಲ ನೀವು ಸ್ವಲ್ಪ ಸಹಾಯ ಮಾಡಿ' ಎಂದನು.  ಈ  ಸಂದರ್ಭವನ್ನು ನೋಡಿ ಕಾರಿಂದಿಳಿದುಬಂದ ವ್ಯಕ್ತಿಯ ಕೋಪ ಅರ್ಧ ಇಳಿಯಿತು.  ಇಬ್ಬರೂ ಸೇರಿ ವೃದ್ಧರನ್ನು ಕುರ್ಚಿಯ ಮೇಲೆ ಕುಳ್ಳಿರಿಸಿದರು.  ಆ ವೃದ್ಧರು  ಧನ್ಯವಾದವನ್ನು ಹೇಳಿ ಗಾಲಿ ಕುರ್ಚಿಯನ್ನು ಚಲಾಯಿಸುತ್ತಾ ಮುಂದೆ ಹೋದರು.  ಆದರೆ ಕಾರಿಗೆ ಕಲ್ಲನ್ನು ಹೊಡೆದು ನಿಲ್ಲಿಸಿದ ಹುಡುಗನ ಉದ್ಧಟತನದ ಕುರಿತು  ಅಸಮಾಧಾನ, ಮತ್ತು ಸಿಟ್ಟು ಹಾಗೇ ಇತ್ತು. ಅವರು ಸಿಡಿಮಿಡಿಗೊಳ್ಳುತ್ತಾ ಹುಡುಗನನ್ನು  ಕುರಿತು    ಹೀಗೆ ಹೇಳಿದರು, 'ಹೀಗೆ ವಯಸ್ಸಾದವರನ್ನು , ಕೈಲಾಗದವರನ್ನು ವಾಯುವಿಹಾರಕ್ಕೆ ಕರೆದುಕೊಂಡು ಬರಬಾರದು ತಿಳಿಯಿತೇನಪ್ಪ,   ಕೈಲಾಗದವರು ಮನೆಯಲ್ಲೇ ಇದ್ದಾರೆ ಏನಾಗುತ್ತದೆ? ಎಲ್ಲರಿಗೂ ತೊಂದರೆ'   ಎಂದರು. ಹುಡುಗ ಅಷ್ಟೇ ಸ್ಪಷ್ಟವಾಗಿ, ದಿಟ್ಟವಾಗಿ ಉತ್ತರಿಸಿದ, 'ಸರ್, ಅವರು ನನ್ನ ಅಜ್ಜನಲ್ಲ, ಅವರು ಯಾರೂ ಅಂತ ನನಗೆ ಗೊತ್ತಿಲ್ಲ, ಅಲ್ಲದೆ ಅವರಿಂದ ನನಗೆ ಏನೂ ಆಗಬೇಕಾದದ್ದಿಲ್ಲ.'  ಹುಡುಗ ಹೀಗೆ ಹೇಳಿ ಮುಂದೆ ಹೊರಟು  ಹೋದ. ಹುಡುಗನ ಮಾತುಕೇಳಿ ಕಾರಿನವನ ಕೋಪ ಪೂರ್ತಿ ಇಳಿಯಿತು, ಅಲ್ಲದೆ ನಾಚಿಕೆಯೂ ಆಯಿತು. ಹುಡುಗನ ಮಾತು ಚಾಟಿಯೇಟಿನಂತೆ ಒಳಮನಸ್ಸನ್ನು ಬಡಿದೆಬ್ಬಿಸಿತು.   ತಾನು ಆ ಹುಡುಗನ ಬಗ್ಗೆ ತಪ್ಪು ತಿಳಿದುಕೊಂಡೆನಲ್ಲ ಎಂದು ಅನಿಸಿತು. 'ಮಾನವೀಯತೆ ಎಂದರೆ ಇದೇ ಅಲ್ಲವೇ? , ಪ್ರತಿಫಲಾಪೇಕ್ಷೆಯಿಲ್ಲದೆ  ಅಗತ್ಯವಿದ್ದವರಿಗೆ ಸಹಾಯಮಾಡುವುದೆ ನಿಜವಾದ ಮಾನವೀಯತೆ.   ಅಂದು ಆ ಕಾರಿಂದ ಇಳಿದು  ಹುಡುಗನಿಗೆ ಮುಖಾಮುಖಿಯಾದವನೇ  ರೊನಾಲ್ಡ್ ರೇಗನ್ - ಅಮೇರಿಕಾದ ಮಾಜಿ ಅಧ್ಯಕ್ಷ. ಸಾಮಾನ್ಯವಾಗಿ ಒಬ್ಬ ಚಿಕ್ಕ ಹುಡುಗ ವಯಸ್ಸಾದವರಿಗೆ ಸಹಾಯಮಾಡುವುದು  ವಿಶೇಷವೇ . ಅದು ಆ ಹುಡುಗನ ಸಂಸ್ಕಾರ ಎಂದಿಟ್ಟುಕೊಂಡರೂ  ತನಗೆ ಏನೂ ಸಂಬಂಧವಿಲ್ಲದ ಆ  ವೃದ್ಧರಿಗೆ ಸಹಾಯಮಾಡ ಹೊರಟಿದ್ದು  ಅವನ ಹಿರಿಮೆ. ಅಲ್ಲದೆ  ಸಹಾಯ ಮಾಡಲು ಮುಂದಾದಾಗ ಉಂಟಾದ ತೊಂದರೆಯನ್ನು ನಿವಾರಿಸಿಕೊಂಡ ರೀತಿ ಅದು ಅವನ  ದಿಟ್ಟತನ. ಬದ್ಧತೆ ಮತ್ತು ಧೈರ್ಯ ಒಟ್ಟೊಟ್ಟಿಗೆ ಎಲ್ಲರಲ್ಲೂ ಇರಲಾರದು. ಮಾನವೀಯ ಗುಣಗಳಿರಬಹುದು, ಮಾನವೀಯ ಯೋಜನೆಗಳಿರಬಹುದು  ಅದನ್ನು ಜಾರಿಗೊಳಿಸುವುದು ಅಷ್ಟು ಸುಲಭವಲ್ಲ.  ಅಮೇರಿಕಾದ ಅಧ್ಯಕ್ಷರಾಗುವುದಕ್ಕಿಂತ ಮುಂಚೆ ನಡೆದ ಈ ಘಟನೆಯಿಂದ ಅವರು ಸಾಕಷ್ಟು ಪ್ರಭಾವಿತರಾಗಿದ್ದರು. ಒಂದು ದೇಶದ ನಾಯಕನಾಗುವವನಿಗೆ  ಅಂದು ಆ ಹುಡುಗ ಮಾದರಿಯಾಗಿದ್ದ.  ತಾನು ಮಾಡಬೇಕಾದ ಒಳ್ಳೆಯ ಕಾರ್ಯಕ್ಕೆ  ಏನೇ ತೊಂದರೆಗಳಿದ್ದರೂ ಅದನ್ನು ನಿವಾರಿಸಿಕೊಂಡು ಮಾಡಿಮುಗಿಸುವುದು  ಶ್ರೇಷ್ಠ ನಾಯಕತ್ವದ ಲಕ್ಷಣ , ಮಾನವೀಯತೆ,   ಸ್ಪಷ್ಟ ನಿಲುವು, ತೀರ್ಮಾನಿಸಿದ ಕೆಲಸವನ್ನು ಮಾಡಲೇಬೇಕೆಂಬ ಬದ್ಧತೆ, ಮತ್ತು ಧೈರ್ಯ ಇವೆಲ್ಲ ನಿಶ್ಚಿತವಾಗಿಯೂ ಅಪರೂಪದ ಗುಣಗಳು . ಒಟ್ಟಿಗೆ ಒಬ್ಬನಲ್ಲೇ ಇರುವ ನಾಯಕ ಸಿಕ್ಕರೆ ಅದು ನಮ್ಮ ಭಾಗ್ಯ.  











  















Friday, 26 December 2014

ಭಾವಗೀತೆಗಳು
         ೧  ಬೇರು 
 ಮರೆತು ಹೋದವೆ   ಮರಗಳ ಬೇರು
ಬಗೆಬಗೆ ಹೂವರಳಿರಲು
ಹಸಿರಿನ ಚಿಗುರೆಲೆ ಬೆಳಕಲಿ ಮಿಂದು
ಗಾಳಿಗೆ ಮೈಯೊಡ್ದಿರಲು //
ಹಣ್ಣಿನ ರುಚಿಯು ಜಗಕೇ ಮೆಚ್ಚು
ಬೇರಿನ ಕಷ್ಟವು ಗೊತ್ತೇ?
ಹನಿಹನಿ ನೀರನು ಅರಸುತ  ತಂದು
ಮರವನ್ನು ತಂಪಲಿ ಇಟ್ಟೆ .//
ಬೇರಿದು ಮರಗಳ ಕಾಲಿನ ಹಾಗೆ
ಊರಿದೆ ಮಣ್ಣಲಿ ದೃಢವಾಗಿ
ಮಳೆಗಾಳಿಗೆ ಮರ ಅಂಜದೆ ನಿಂತಿದೆ
ಬಲವಿದೆ ಮಣ್ಣಲಿ ಮರೆಯಾಗಿ //
ಕಾಣದ ಜಗದ ಹಿಂದಿದೆ ಸತ್ಯ
ಬೆಳಕಿಗೆ ಬಾರದ ಮನಸು
ಹೂವರಳಿಸಿ ನೀಡುತ ಜಗಕೆ
ಧನ್ಯವು  ತಾಯಿಯ ಮನಸು//
     
          ೨ ನಿನ್ನೆದುರು 
ಹಾಡಲಾರೆವು ಮೊದಲು ನಿನ್ನೆದುರು ನಾವು
ಗಿಳಿ ಕೋಗಿಲೆಯ ಕೊರಳು ಮಧುರವಿರಲು.
ಪಂಚಮಕೆ ಕೋಗಿಲೆ ಷಡ್ಜಕ್ಕೆ ಜಾತಕ
ಸಪ್ತಸ್ವರ ಮೊದಲಿಗೆ ನಿಗದಿಯಿರಲು //
ಈಜಲಾರೆವು ಮೀನಿನಂತೆ ನಾವು
ಹೆಜ್ಜೆ ಮೂಡಿಸದೊಂದು ಜಾಣ್ಮೆಯಿರಲು
ಮೇಘ ಮೂಡಲು ನೃತ್ಯಾಂಗಣವು ನೆಲವು
ಗೆಜ್ಜೆಯಿಲ್ಲದೆ ಹೆಜ್ಜೆ ಹಾಕಿ ನವಿಲು.//
ಅನಂತ ಆಕಾಶ ತೆರಕೊಂಡ ಮನಸು
ರೆಕ್ಕೆ ಮೂಡೀತೇ ಕನಸಿಗೆ?
ನಾವೇ ನೇಯ್ದ ಬಲೆಗೆ ಸಿಲುಕಿದೆ ಕಾಲು
ಬಲವಿದೆಯೇ ಬಡವನ ಮನಸಿಗೆ? //

 ೩ ಮೇಲೆ ಆಗಸ ನೀಲಿ . . 
ಮೇಲೆ ಆಗಸ ನೀಲಿ ಹುಟ್ಟಿಸಿದ ಭ್ರಮೆಯೇ?
ಮುಟ್ಟಲಾಗದು ಕೈಯ ಬೆರಳಿನಿಂದ
ನೋಟಕ್ಕೆ ಸಂಧಿಸಿ ಕೈಗಳನು ಬಂಧಿಸಿ
ದೂರದಲಿ ನಿಂತಿದೆ ಗರ್ವದಿಂದ //
ಉರಿಯುವನು ರವಿಯು ಕೋಟಿ  ಮೈಲಿಗಳಾಚೆ
ಜೀವ ಹಣತೆಯ ಮಿಣುಕು ಈ ಇಳೆಯಲಿ
ಉಳಿದಾರೆ ಅವನ ಬಳಿಸಾರೆ ಹೊರಡೆ
ಬೆಳಕ ಮೀವ ಧನ್ಯತೆಯುಳಿಯಲಿ //
ಅಗಣಿತದ ಉಡುಗಣಕೆ ಆಗಸವೇ ತಾಣ
ಎಣಿಸಬಹುದಾವ ಗುಣಕದಲ್ಲಿ?
ಕರಗಬಹುದು ನಮ್ಮಹಮಿಕೆಯ ಮಂಜು
ರಾತ್ರಿ ನೀರವ ನಭದ ನೋಟದಲ್ಲಿ.//

  4.ಮುಗಿಯದ ಹಾಡು
ಮುಗಿಯದೆಂದಿಗು ಹಾಡು  ನದಿಗಳದು ನೋಡು
ಹರಿಯುತ್ತಲಿದೆ ಯುಗದ ಆದಿಯಿಂದ
ಮನೆಯೊಂದು ಸಿಗಬಹುದೇ ವಿರಮಿಸಲು ಅಲ್ಲಿ
ಬಿಡುಗಡೆಯ ಪಯಣದ ಹಾದಿಯಿಂದ?//
ನಿಲ್ಲದೆ ಸಾಗಿದೆ ಗ್ರಹತಾರೆಗಳ ಆಟ
 ಬಿಟ್ಟ ಬುಗರಿಯ ತೆರದಿ ನಭದಿ.
ಗೊತ್ತುಗುರಿಯಾವುದೋ ? ಗತಿಶೀಲ ಬ್ರಹ್ಮಾಂಡ
ಬಾರದಳವಿಗೆ ನರನು ಸೋತ ಕ್ಷಣದಿ. //
ಹುಟ್ಟು ಸಾವಿಗೆ ಹೊರತಾದ ಕಾಲದ ಪಯಣ
ತೆಕ್ಕೆಗೊಳಪಟ್ಟಿದೆ ಜೀವ ಸೃಷ್ಟಿ.
ಮುಗಿಯದ ಹಾಡು  ಅವನದೆಂದರೆ ಸರಿಯೋ
ಹಸುಳೆಯಂದದಿ ಚಪ್ಪಾಳೆ ತಟ್ಟಿ.//

               5  ಎನಗಿರಲಿ 
ರವಿಯು ಜಗಕಿರಲಿ ಎನಗೆ ಕಿರುಹಣತೆಯೆ ಸಾಕು
ಎನ್ನ ಕಾಲ್ಬುಡವನ್ನು ಬೆಳಗಲು
ನಾಲ್ಕಾರು ಹೆಜ್ಜೆಗಳ ಕಿರುಪಯಣ ನನ್ನದು
ರಾತ್ರಿ ಹಗಲಿಗೆ ಬಂದು ಕೂಡಲು .//
ಹುಣ್ಣಿಮೆಯ ತಂಗದಿರ ತಂಪನ್ನು ನೀಡುವನು
ಚೆಲ್ಲುವನು  ಹಾಲಂತ ಬೆಳದಿಂಗಳು.
ಹಸುಕಂದ ಎನ್ನ ಮನೆಯಂಗಳದಿ ಓಡಾಡೆ
ಸ್ವರ್ಗ ಸುಖ ಮನದುಂಬಿ ಬರಲು //
ದೂರದಾಗಸದಲ್ಲಿ ಹರಡಿಬಿದ್ದಿವೆ ಹೊಳೆವ
ಅಗಣಿತದ ಕೋಟಿ ತಾರೆಗಳು
ಪ್ರಶ್ನೆ ಕೇಳುತ ಕೈಕಾಲಬಳಿ ಸುಳಿವ
ಪುಟ್ಟ ಮಕ್ಕಳ ದಿಟ್ಟ ಕಂಗಳು.//

    ೬. ಮರದ ಬಯಕೆ 
ಎತ್ತರೆತ್ತರ ಬೆಳೆದು ಮುಟ್ಟಲಾಗದು ಬಾನು
ಕನಸೊಂದ ತುಂಬಿತು ಬೀಜದೊಳಗೆ
ಹಸಿರಿಂದ ನೆಲವ ಮುಚ್ಚಿದ ಹಾಗೆ ಬಾನಿಗೂ
ಪಸರಿಸುವ ಹುಚ್ಚು ಮರದೊಳಗೆ
ಹಕ್ಕಿಯಾಸರೆ ಪಡೆದು ಮರದ ಕನಸನು ಹೊತ್ತು
ಬಾನಿನ ತುಂಬೆಲ್ಲ ಹಾರಾಡಿತು
ಮುಟ್ಟಲಾಗದೆ ಸೋತು ಮರಳಿ ಗೂಡಿಗೆ ಬಂತು
ಅಳೆಯಲಾಗದು  ಅನಂತವನು ಎಂದಿತು
ಆಳ ಆಳಕೆ ಇಳಿದು ಪಾತಾಳ ತುಳಿವ
ಬಯಕೆ ಬೇರಾಗಿ ಇಳಿಯಿತೇ ಕೆಳಗೆ?
ನೀರಸೆಲೆ ಪಾತಾಳವದೆ ಎಂದು ತಿಳಿದು
ಹೊತ್ತು ತಂದಿತೆ ರೆಂಬೆ ಕೊಂಬೆಗಳಿಗೆ?

   ೭.  ಬಾಲ್ಯದ ನೆನಪು. 
ಕಳೆದು ಹೋಗಿದೆ ಬಾಲ್ಯ, ನಮ್ಮ ಅಂದಿನ ಸುಖವು
ಮರಳಿಬಾರದು ಇನ್ನು ಎಂದೆಂದಿಗೂ
ಕಾಲಧರ್ಮದ  ಹೆಸರಲಿ ವಂಚಿಸಿದೆ ಪ್ರಕೃತಿ
ಆದರೂ ಉಳಿಸಿದೆ ಸವಿ ನೆನಪನು. //
ನಾ ನಡೆದ ಕಲ್ಲು ಮುಳ್ಳಿನ ಹಾದಿ ಬದಿಯಲಿ
ಅರಳಿದ್ದವಂದು ಬಗೆಬಗೆಯ ಹೂವು
ಇಂದು ಸುಗಮದ ಹಾದಿ ಪಕ್ಕದಲಿ ನೋಡೆ
ಒಟ್ಟಾಗಿ ಎತ್ತರಕೆ ಬೆಳೆದ ಮಹಲು.//
ಕೌತುಕದ ಕಣ್ಣಿಗಂದು ನೋಡುವ ತವಕ
ಬೆರಗು ಬೆಲ್ಲದ ಜೊತೆ ಬೇವಿಗೂ
ಮೊಗ್ಗು ಹೂವಾಗರಳೆ ಎಲ್ಲಿದ್ದವೋ ಏನೋ
ದುಂಬಿಗಳ ಮೆರವಣಿಗೆ ಅಲ್ಲಿಗೂ//

 ೮. ಸಣ್ಣವನು ನಾನೆಂದು ... 
ಸಣ್ಣವನು ನಾನೆಂದು ಗೊಣಗದಿರು ಮನವೇ
ಗುಣಗಳಡಗಿದೆ ಸಣ್ಣ ಬೀಜದೊಳಗೆ
ಮಣ್ಣಕಣಗಳೆ  ಸೇರಿ ಆಗಿದೆ ಗಿರಿಬೆಟ್ಟ
ನೀರಹನಿಗಳ ಮೊತ್ತ ಶರಧಿಯೊಳಗೆ.//
ಬಾನಿನೆತ್ತರ ಬೆಳೆವ ಮರದೆದುರು ಹುಲ್ಲು
ಕಡ್ಡಿ ಕ್ರಿಮಿಕೀಟಗಳು ನೆಲದ ಬಳಿಗೆ
ಮಣ್ಣಿಗುಣಿಸನು ಬಿಡದೆ ಈವ ಅಕ್ಷಯಪಾತ್ರೆ
ಬರಿನೆಲದಿ ಮೂಡೀತೆ ಹಸಿರು ಮೊಳಕೆ?//
ಹೆಜ್ಜೆಯನು ಹಾಕದೆ ಗೆಜ್ಜೆ ರಿಂಗಣಿಸದೆ
ರಂಗದೊಳು ಮೂಡೀತೆ ನಾಟ್ಯಕಲೆಯು?
ಭಾವಭಂಗಿಗೆ ಕಣ್ಣೋಟ ಹಿರಿದಾದರೂ
ಕಾಲಕಸುವೆ ಕುಣಿವ ಕಳೆಯ ನೆಲೆಯು //
ನಾಂದಿಹಾಡುವ ಹೆಜ್ಜೆ ದೂರದೂರಿಗೆ ಪಯಣ
ಕಿರಿದೆಂದು ಕುಳಿತರೆ ತಲುಪಬಹುದೇ?
ಅಕ್ಕರದ ಕಿರುಗಾತ್ರ ಲೆಕ್ಕಿಸದೆ ಹೋದರೆ
ಕಾವ್ಯ ಹೊತ್ತಗೆರೂಪ ಪಡೆಯಬಹುದೇ?//

   ೯. ತೆರೆದುಕೊಳ್ಳದೆ .... 
ನಿನ್ನೊಳಗಿಳಿಯದೆ ಬಾನಿನ ಹರಹು
ಅರಿಯಲಾರೆ ನೀನದನು
ದೂರಕೆ ನಿಂತರೆ ದೂರವೆ ಉಳಿವುದು
ತೆರೆದೆದೆಯಾಗದೆ ನೀನು//
 ಅರಳಿದ ಹೂವಿನ ಬಗೆಬಗೆ ಬಣ್ಣ
ನೀಡಿದೆ ಕಣ್ಣಿಗೆ ತಂಪು
ಅರಳದೆ ನಿನ್ನೆದೆ ಮೊಗ್ಗಾಗಿರಲು
ಉಳಿಯದು ನಿನ್ನೊಳಗಿಂಪು//
ಹಕ್ಕಿಯ ಹಾಗೆ ಬಿಚ್ಚು ರೆಕ್ಕೆಯನು
ಹಾರಿ ತೇಲಿ ಹೋಗು
ದಿಕ್ಕುಗಳಿಲ್ಲದ ಆಗಸದೊಳು ನೀ
ಸೇರಿ ಕಾಣದಾಗು//
ಮೀನಂತಾಗದೆ ಅರಿಯಲಾರೆ ನೀ
ನೀರಿನ ಒಳಗಣ ಚೆಲುವ
ನಾನಳಿದಾ ಕ್ಷಣ ತಿಳಿವಿಗೆ ನಾಂದಿ
ಹರಿಸಬೇಕು ಒಲವ//

    ೧೦.  ನಿನ್ನ ಸನಿಹದಿ..  
ಅಂತರವನುಳಿಸಿ ಒಲುಮೆ ಬೆಳೆಯುವುದೆಂತು
ಬಾ ಬಳಿಗೆ ಹೆಚ್ಚಲ್ಲ ಮಾತೆರಡೆ ಸಾಕು
ಹರಡುವುದು ಹೂನವಿರು ಭಾವದ ಶ್ರೀಗಂಧ
ನಿನ್ನ ಸನಿಹದಿ ಕೆಲ ಕ್ಷಣಗಳಿರಬೇಕು //
ದೂರದಲಿ ನಿಂತು ಆಗಸದೆಡೆಗೆ ಕೈ ಮಾಡಿ
ಹೊಳೆವ ತಾರೆಯ ಮೀನುಗ ತೋರಬೇಡ
ಬಳಿಬಂದು ನಿಲ್ಲಲು ನಿನ್ನ ಕಣ್ಣಿನ ಹೊಳಪು
ಉಡುಗಣಕು ಮಿಗಿಲೆಂದು ಮರೆಯಬೇಡ //
ಬಾನಾಡಿಗಳ ಹಾಗೆ ಎತ್ತರೆತ್ತರ ಏರಿ
ಆಗಸದಿ ತೇಲುವುದು ದೂರದಾ ಮಾತು
ಜೋಕಾಲಿಯಲಿ ಕೂತು ಸಂತಸದಿ ನಿನ್ನೆದುರು
ಹಿಂದೆ ಮುಂದೆಂದೆರಡು ಜೀಕಾಟ ಸಾಕು//

 ೧೧. ಹೆಮ್ಮರದ ನೆರಳು 
ಹೆಮ್ಮೆ ಪಡದಿರು ಓ ಹೆಮ್ಮರವೇ ನೀನು
ಬೆಳೆದಿರುವೆನೆಂದು ಬೆಳೆಬೆಳೆದಿರುವೆನೆಂದು
ಮರೆಯದಿರು ನೀ ಬೀಜವಾಗಿರುವಂದು
ಯಾವ ಪುಣ್ಯದ ಕೈಗಳು ನಿನ್ನ
ಮಣ್ಣ ತೆಕ್ಕೆಗೆ ಒಪ್ಪಿಸಿದವಂದು //
ಮೇಲು ಮಣ್ಣಿನ ತೆಳು ಪದರ ಹಾಸಿ
ಬೊಗಸೆ ನೀರನು ಹನಿಸಿ
ನಿನ್ನೊಳಗಿದ್ದ ಮೊಳಕೆಯ ಹಸಿ ಮಾಡಿದವು
ತಡೆದವದ ಮಳೆಗೆ ಕೊಳೆತುಹೋಗದಂತೆ
ಹಿಡಿದು ಅದ ಸೆಳೆತಕ್ಕೆ  ಕೊಚ್ಚಿಹೋಗದಂತೆ.
ಅಂದು ನೀ ಶುದ್ಧ ಪರಾವಲಂಬಿ
ಪುಟ್ಟ  ಪರಪುಟ್ಟ
ನೀರ ಸೆಲೆ ಹುಡುಕುವ ಬೇರುಗಳೇ ಇಲ್ಲ
 ಬೆಳಕಿಗೆ ಮೈ ಒಡ್ಡಲು  ಎಲೆಗಳೇ ಇಲ್ಲ.
ಬಿಸಿಲುರಿಗೆ ಬಾಡದಿರಲೆಂದು ತರಗೆಲೆಗಳೆ
ಮರೆಯ ಮಾಡಿ ಮೇಲ್ಬರುವಂತೆ ಮಾಡಿದವು
ಅಕ್ಕ ಪಕ್ಕದ ಹುಲ್ಲು ಗಿಡಗಂಟಿ
ದಾರಿ ನೀಡಿ ಆಗಸವ ತೋರಿದವು
ಬೆಳೆ ಎತ್ತರಕೆ ಬೆಳೆ
ಮೇಲೆ ನೀಲಾಕಾಶ
ಮಿತಿಯಿಲ್ಲವದಕೆ
ನಿನ್ನಂತರಂಗಕೆ ಮಂಗಳವ ಕೋರಿದವು
ನಿನ್ನೊಳಗಿನ ಕನಸಿಗೆ  ನೀರ ಹನಿಸಿದವು .
ಇಂದು ನೀ ಗಟ್ಟಿ ಬೆಳೆದಿರುವೆ
ದಟ್ಟನೆಯ ನೆರಳ ಹರಡಿರುವೆ
 ಆ ತಂಪಿನಲಿ ಬೀಜ ಮೊಳಕೆಯೊಡೆದು
ಸಸಿಯಾಗಬಹುದು ಹಸಿಯಾಗಿರಬಹುದು
ಯೋಚಿಸಿ ನೋಡು
ನಿನ್ನ ನೇರಳೆ ಅವಕೆ ಮಿತ್ರ
ನಿನ್ನ ನೇರಳೆ ಅವಕೆ ಶತ್ರು
ಇನ್ನೊಂದು ಹೆಮ್ಮರ ಬೆಳೆಯಲಾರದು
ನಿನ್ನ ಮಗ್ಗುಲಲಿ
ನೆನಪಿಡು, ಹೆಮ್ಮರ ಉರುಳುವುದು ಒಂದು ದಿನ
ಬಿರುಗಾಳಿ ಬೀಸುವುದು ಸಹಜ ಧರ್ಮ.
ನೀ ಹಿಡಿದು ನಿಂತಿರುವೆ ಮಣ್ಣ ಮೇಲ್ಪದರ
ನೆಚ್ಚದಿರು, ಬದಲಾವಣೆ ನೆಲದ ಮರ್ಮ.
ಕಾಯುವವು ಹೆಮ್ಮರದ ಬಯಕೆಯಲಿ ಸಸಿಗಳು
ಮುಸಿ ಮುಸಿ ನಗುವವು ಹಸಿರ ಹುಲ್ಲುಗಳು.
 ೧೨.  ಹೀಗೇಕೆ.....?  
ಕಟ್ಟಿ ಗೂಡನು ಮರದಿ
ಹೆಕ್ಕಿ ಕಾಳನು ನೆಲದಿ
ಹಕ್ಕಿ ಹಾರುವುದೇಕೆ ಆಗಸದಲಿ?
ಕತ್ತಲೆಯು ತುಂಬಿರುವ
ದಾರಿಯನು ಬೆಳಗದೆ
ಚುಕ್ಕಿ ಹರಡಿದೆಯೇಕೆ ದೂರದಲ್ಲಿ?
ಬತ್ತಿ ತಾನುರಿದುರಿದು
ಸುತ್ತ ಕತ್ತಲೆ ಹರಿದು
ಉಳಿಸಿಹುದು ಏಕದನು ಕಾಲ್ಬುಡದಲಿ?
ಕಾಯಿ ಹಣ್ಣಾಗುತಲಿ
ಬಣ್ಣದಲಿ ಹೊಳೆಯುವುದು
ಕಾಯ ಹಣ್ಣಾಗೆ ಸುಕ್ಕೇಕೆ ಮುಖದಿ?
ಉಕ್ಕಿ ಹೆಚ್ಚಾಗಲು ಸಹಜ
ಪಕ್ಕದಲಿ ಚೆಲ್ಲುವುದು
ಬಿಕ್ಕಲೇಕೆ ಚಿಂತೆ  ಎದೆಭಾರದಿ?
ಅರೆಜ್ಞಾನಿ ತಿಳಿದಂತೆ
ಮಾತನಾಡುತಲಿರುವ
ಅರಿವು ಹೆಚ್ಚಾಗೆ ಮಾತೇಕೆ ಸೋಲುವುದು?
ಬುದ್ಧಿ ಅರಿಯದೆ ಇರಲು
ಭಾವಕದು ಗೋಚರ
ಭಾವ ಬಿಂಬಿಸಲೇಕೆ ಭಾಷೆ ಸೋಲುವುದು?
ಕನಸಲ್ಲಿ ಮೂಡದ
ಒಂದನುಮಾನ ನಿಜದಲ್ಲಿ
ನಿಜವೇಕೆ ಕನಸಂತೆ ಮನಮುಟ್ಟದು?

        ೧೩.  ಏಕೆ ಹೇಳಿ?
  ಪಡೆಯಲಾರೆ ನೀನು ಬಯಸಿದುತ್ತರವ
ಹೂವೇಕೆ ಅರಳುವುದು ಎಂದು ಕೇಳಿ
ಬಣ್ಣಬಣ್ಣದಿ  ಅರಳಿ ಕಣ್ಣಿಗಂದವನೀಡಿ
ತಣ್ಣಗಿರುವವು  ಏಕೆ ಎಂದು ಕೇಳಿ //
ಬರಿದೆ ಬರುವನೆ ಸೂರ್ಯ ಜಗವ ಬೆಳಗಲು ತಾ
ತಿರುಗಿ ಪಡೆಯುವುದೇನು ಎಂದು ಕೇಳಿ
ಹರಡಿ ಹಾಲ್ಬೆಳದಿಂಗಳನು ತಂಗದಿರ
ಇರುಳ ತಮವನು ಕಳೆವನೇಕೆ ಹೇಳಿ //
ಹುಟ್ಟಿ ಕಿರುತೊರೆಯಾಗಿ ಹರಿವೆ ನದಿಯಾಗಿ
ಹಾದಿ ಹಸಿರನುಗೊಳಿಸಿ ನೀ ಪಡೆವುದೇನು?
ಕೂಡಿ ಕಳೆಯುವ ಲೆಕ್ಕ ಪ್ರಕೃತಿಯಲಿ ಇಲ್ಲ
ಕಳೆದುಹೋಗಿಹನೊಂದು  ಭ್ರಮೆಯಲ್ಲಿ ನರನು. //

   ೧೪ . ಕರೆದರೆ ಬರಬಹುದೇ?
ಒಳಗೆ ಕರೆವೆನು ಆ ಸೂರ್ಯಚಂದ್ರನನು
ಇರಬಹುದೇ ಎನ್ನೆದೆಯು ಬಾನಗಲಕೆ ?
ಅರಳೆಂದು ಬೇಡುವೆನು ಹೂಗಿಡಗಳನ್ನು
ಬರಬಹುದೆ ದುಂಬಿಗಳು  ಎದೆತೋಟಕೆ ?//
ಕೊಳವಾಗದೆ ಒಳಗೆ ಅರಳುವುದೆ ಕಮಲ?
ಇರಲಡಿಗೆ ಗೊಚ್ಚೆ  ಮೇಲೆ ತಿಳಿ ಭಾವ
ಉರಿಯದೆ ಧೂಪ ಹರಡದೆಂದಿಗು  ಗಂಧ
 ಅರಳಲಾರದು ಎದೆ ಮಿಡಿಯದೆ ನೋವ. //
ಹುಲ್ಲಿರಲಿ, ಹೂವಿನೆಸಳಿರಲಿ ಬೆಳಗಿನಲಿ
ಮಂಜುಕರಗದೆ  ಮೂಡದೊಂದು ಇಬ್ಬನಿ ಅಲ್ಲಿ
ನನ್ನ ಹಮ್ಮಿನ ಭಾವ ನಿನ್ನ ಕಿರಣಕೆ ಕರಗಿ
ದಂದು ನಾ ನಿನ್ನ ಕರೆವೆನು ಅಲ್ಲಿ ಎದೆಯಲ್ಲಿ //
         ೧೫.  ಹಿರಿಮೆ ನಿಂತನೀರು 
  ಮತ್ತೆ ಬರುವೆನು ಎಂದು  ಹೇಳಿ ಹೊರಟಿತು ತೊರೆಯು
ಗಿರಿಯಿಂದ ಇಳಿದಿಳಿದು ಬಯಲಿಗೆ.
ಹರಿದಂತೆ ಹಾದಿಬದಿ ಹಸಿರ ಉಕ್ಕಿಸಿ ಹೂವ
ಅರಳಿಸಿ ನಗು ತಂತು ಬದುಕಿಗೆ.//
ದಾರಿ ಹೇಗೇ ಇರಲಿ, ಏರು ತಗ್ಗೇ ಬರಲಿ,
ಕಲ್ಲ ಕೊರಕಿನಲಿ ನಡುವೆ ಸಾಗಿ.
ಗುರಿಯೊಂದೆ, ಸಾಗರವ ಸೇರುವದೆ  ಹಂಬಲ
ದಣಿವರಿಯದೆ ಪಯಣದಲ್ಲಿ //
ಸೇರಿ ಸಾಗರನ ಎದೆಹರವಿನಲಿ ಒಂದಾಗಿ
ಗುರಿಸೇರಿದ ಧನ್ಯ ಮನಸು.
ಆಗಸಕೆ ಎದೆತೆರೆದು ತೆರಕೊಂಡ ವೈಶಾಲ್ಯ
ಸಾಕಾರಗೊಂಡ ಕನಸು.//
ಅದೇ ಆಳ, ಅದೇ ಅಗಲ ಹಿರಿಮೆ ನಿಂತನೀರು
ಚಲನೆಯೇ  ಇಲ್ಲದಿರಲೇನು ಚಂದ?
ಅರಿವಾಗದಂತೆ ಆವಿಯಾಗಿ ನೀರು
 ಮೇಲಕೇರಿತು ಬಿಡಿಸಿ ಬಂಧ.//
ತವರೂರ ಬಾಗಿಲಿಗೆ ಮರಳಿ ಬಂದ ನೀರೆ
ತಿರುತಿರುಗಿ ಕರಿದಾಗಿ ಮೋಡವಾಗಿ
ಹಸಿರು ಚಾಮರ ಬೀಸಿ ಕರೆಯೆ ಗಿರಿರಾಜ
ಕಪ್ಪು ಕರಗಿತು ಪ್ರೀತಿ ಧಾರೆಯಾಗಿ. //
-ಗಣೇಶ ಹೆಗಡೆ  ಜನವಿಗಾಳಿಬೀಡು
೧೬. ನೀರಂತೆ ಮಾಡೆನ್ನ ತಂದೆ,
ನೀರಂತೆ ಮಾಡೆನ್ನ ತಂದೆ, ಹರಿಯುತ್ತಲಿರುವೆ,
ಬೆರೆಯುತ್ತಲಿರುವೆ ಭೋರ್ಗರೆಯುತ್ತಲಿರುವೆ
ಇಳಿಯುತ್ತಲಿರುವೆ, ಇಂಗುತ್ತಲಿರುವೆ,
ಹಂಗತೊರೆದು ಮತ್ತೆಲ್ಲೋ ಸಾಗುತ್ತಲಿರುವೆ.//
ಆಗಸದ ಎದುರು ನೀಲಿಯಾಗುವೆ ನಾನು.
ರವಿಕಿರಣಕೆ ಹೊಳೆವ ಮುತ್ತು ನಾನು.
ನಿರಾಕಾರನಾಗುವೆ, ನಿರ್ಗುಣನು ಆಗುವೆ.
ಬಣ್ಣ ಬೆಡಗಿಲ್ಲದ ನಿರ್ಮೋಹಿಯಾಗುವೆ ನಾನು//
ಹಸಿರಾಗುವೆ ನಾನು, ಉಸಿರಾಗುವೆ ನಾನು,
ಬಸಿರೊಳಗನ ಜೀವ ರಕ್ಷಕ ಜಲವಾಗುವೆ.
ಹೆಸರ ಬಯಸದೆ ಹರಿಹರಿದು ಲೋಕದ
ಕೆಸರತೊಳೆದು ಪುನೀತನಾಗುವೆ ನಾನು//
ಎದೆಭಾರವ ಕಳೆವ ಕಣ್ಣಹನಿ  ನಾನು 
ಋಣಭಾರದಿ ಭಾವತರ್ಪಣವು  ನಾನು
ಸುಟ್ಟ ಬೂದಿಯ ಮೇಲೆ ಹರಿವೆ ನಾನು
ಮರುಜೀವ ನೀಡುವ ಗಂಗೆ ನಾನು//
ನೀರಾಗುವೆ ನಾನು ನೀರಾಗುವೆ,
ಸಿಹಿಯೊಳಗೆ ಬೆರೆತು ಕೀರಾಗುವೆ,
ಉಪ್ಪು  ಹುಳಿಖಾರದ ಜೊತೆಸೇರಿ
ಬಡವನೊಪ್ಪತ್ತಿನ ಸಾರಾಗುವೆ.
--ಗಣೇಶ ಹೆಗಡೆ  ಜನವಿಗಾಳಿಬೀಡು
      ೧೭. ಅಗಣಿತದ ತಾರೆಗಳೇ 
ಯಾರು ಚೆಲ್ಲಿದರಲ್ಲಿ? ಎಂದು ಚೆಲ್ಲಿದರಲ್ಲಿ ?
ಅಗಣಿತದ ತಾರೆಗಳೇ,  ಆಕಾಶದಲ್ಲಿ
ಒಟ್ಟುಗೂಡಿಸಲಾಗದಂತೆ ನಡೆದಿದೆ ಲೀಲೆ
ಚೆಲ್ಲಿದವ ತಾ ನಿಂತ ಬೆರಗಿನಲ್ಲಿ.
ಎಣಿಸಿ ಸೋತಿದೆ ಕೈ ಮಣಿದು ನಿಂತಿದೆ ಶಿರವು
ನಿನಗಿರದ ಚಿಂತೆ, ನನಗೇಕೆ ಲೆಕ್ಕ?
ಕನಸಲ್ಲಿ ಬಂದೆನ್ನ ಕರೆದಂತೆ ಭಾಸ
ಬಂದರಿಹುದೆ ಜಾಗ ನಿನ್ನ ಪಕ್ಕ?
ನೀನಾದರೋ ಅಲ್ಲಿ ನೀಲಿಯಾಗಸದಲ್ಲಿ
ನಾನಾದರೋ ನೆಲದ ಮಣ್ಣಿನಲ್ಲಿ
ಸದ್ದಿಲ್ಲದೇ ಬಂದು ಮಿಂಚಿ ಮರೆಯಾಗುವೆ
ಅಂಬೆಗಾಲಿನ ಕೂಸ ಕಣ್ಣಿನಲ್ಲಿ
ನೀನು ಕಳುಹಿದ ತೇರೆ ನಮ್ಮ ಕರೆದೊಯ್ಯಲು
ತೇಲಿಬರುತಿಹನು ಚಂದ್ರಮ
ಎಷ್ಟು ಕಾಲವು ಬೇಕೋ ಇಲ್ಲಿ ಬಂದಿಳಿಯಲು
ಕಾಯುತ್ತ ಕರಗುತಿದೆ ಸಂಭ್ರಮ.

೧೮. ಕಾರಣವು ಬೇಕೇನು ಹೂವರಳಲು?
ಕಾರಣವ ಕೆದಕುತ್ತ ಕಾಲ ಕಳೆಯಲು ಬೇಡ
ಕಾರಣವು ಬೇಕೇನು ಹೂವರಳಲು?
ವ್ಯಾಕರಣ ಹುಡುಕುತ್ತ ಹಾಡ ಹಿಂದೋಡಿದರೆ
ಆಗದೆಂದಿಗು ಭಾವದ ಜೊತೆಕರಗಲು. //
ಸೂರ್ಯ ಹುಟ್ಟುವನೇಕೆ ಮೂಡಣದಿ?
ಮಿಂದೇಳಲವ  ರಂಗಿನನೋಕುಳಿಯಲಿ
ಪ್ರಶ್ನೆ ಉತ್ತರಗಳನೆಲ್ಲಬದಿಗಿಟ್ಟು ನೀ
ತೆರೆದುಬಿಡು ನಿನ್ನೆದೆಗೆ  ರಂಗಿಳಿಯಲಿ.//
ಹರಿವ ನದಿಗೆ ತಿಳಿದಿದೆಯೇನು ತಾನು
ಹರಿದು  ಸೇರುವೆ ಸಾಗರವನೆಂದು?
ಸ್ವಚ್ಛ ತಿಳಿಸಿಹಿನೀರು ಆಗುವುದು ಉಪ್ಪು
ಹಾಗಂತ ಹರಿಯದೆ ನಿಂತಿರುವುದೇನು?//
ಕೋಗಿಲೆಯು ಹಾಡುವುದೇ ಶ್ರುತಿಹಿಡಿದು?
ಇಂಪಿನ ಹಿಂದೋಡದೆಯೆ ಇನಿದನಿ
ಕರೆಯೋಲೆ ಬೇಕಿಲ್ಲ ಹೂವಿಂದ
ಎಸಳ ಮೇಲೆ ಹೊಳೆವ ಇಬ್ಬನಿ.//
ಬಂದಂತೆ ಬದುಕುವುದೇ ಬಾಳಿನಂದ
ತೆರೆದುಬಿಡು ಎದೆಯಕದವ
ಎಣಿಸಿಗುಣಿಸಿದರೇನು ಬಗೆಹರಿಯದ ಲೆಕ್ಕ
ಮರೆತೊಂದು ಹಸುಳೆನಗುವ.//

೧೯. ಒಟ್ಟಾರೆ ಮೊತ್ತ ಏಳು ಏಳೇ
ಏಳು ಏಳೇ ಮೊತ್ತ ಏಳು ಏಳೇ .
 ಮೂರು ನಾಲ್ಕಾದರೂ ನಾಲ್ಕು ಮೂರಾದರೂ
ಒಟ್ಟಾರೆ ಮೊತ್ತ ಏಳು ಏಳೇ
ಲೆಕ್ಕವನ್ನು ಕೊಟ್ಟವನು ಯಾರು ಹೇಳೆ.
ರಾಜನೇರಿ ಹೊರಟ ಚಿನ್ನದಂಬಾರಿ
ತಟ್ಟು ತಟ್ಟೆ ಹಿಡಿದ ರೋಗಿ ಭಿಕಾರಿ
ಕೊನೆಗೆ ಕೂಡುವುದಲ್ಲಿ ಇಬ್ಬರ ದಾರಿ
ನಡೆಯಲಾಗದು ಅವನ ನಿಯಮ ಮೀರಿ.  //
ಬಲ್ಲಿದನ ತಟ್ತೆಯಲಿ ಭಕ್ಷ್ಯ ಭೋಜ್ಯ
ಬಡವನಾ ಹೊಟ್ಟೆಯಲಿ ಹಸಿವಿನ ವ್ಯಾಜ್ಯ.
ಅಲ್ಲಿರುವ ಹಣ್ಣಿಗೆ ಇಲ್ಲ ಹಸಿವು
ಇಲ್ಲಿರುವ ಹಸಿವಿಗುಪವಾಸ ದಿನವು. //
ಅಲ್ಲಿಹುದು ಮೆತ್ತನೆಯ ಸುಪ್ಪತ್ತಿಗೆ,
ನಿದ್ರೆ ಬಾರದೆ ಕನಸು ಎಷ್ಟೊತ್ತಿಗೆ?
ಕನಸಿಗೂ ಚಿಂತೆ ಕನಸುಗಾರ ಬಡವ
ಮಲಗಿಹನು ಹರಕು ಚಾಪೆ, ಒರಟು ಹಾಸಿಗೆ.//
ಅಗ್ನಿ ಧಗಧಗಿಸುತ್ತಿದೆ ಉರುವಲಿಲ್ಲ
ತಂಪು ಮಹಲಲಿ ಕಿಡಿ ಹೊತ್ತಿಕೊಳ್ಳುವುದಿಲ್ಲ
ಕಳೆದು ಕೂಡುವ ಲೆಕ್ಕಾಸ್ ಕೊಟ್ಟು ಆಟವ
ನೋಡುತಿಹನಾರವ ಬಳಿ ಸುಲಿಯುವುದೇ ಇಲ್ಲ.//
ಆನೆ ಬಲಶಾಲಿ ತೂಕಮೀರಿ
ಬೆಳೆದ ಬಲರಾಮನ ಮೇಲೆ ಅಂಬಾರಿ
ಸತ್ತ ಮಿಡತೆಯ ಹೊತ್ತ ಪುಟ್ಟ ಇರುವೆಗೆ
ಸಲೀಸಾಗಿ ಸಾಗುವುದು ಬದುಕು ಕಿರುದಾರಿ. //

   ೨೦. ನಡುಬಾಗಿಲಲ್ಲಿ 
ಒಳಗೆ ಮೊಳಗಿದೆ ಘಂಟೆ ಹೊರಗೆ ಖಾಲಿ ತಟ್ಟೆ
ನಡುವೆ ನಿಂತಿರುವೆ ನಾ ಬಾಗಿಲಲ್ಲಿ
ಇರುವನಂತೆ  ದೇವ ಕಂಡೂ  ಕಾಣದಂತೆ
ಅನ್ನದಲೋ ಬ್ರಹ್ಮದಲೋ ಗೊಂದಲದಲಿ //
ಮಂದ ಬೆಳಕಿನ ನಂದಾದೀಪದ ಬಳಿಯಲ್ಲಿ
ಸ್ಮಿತವದನ ಮೂರ್ತಿಯಾ ಶಾಂತಿಯಲ್ಲೊ ?
ಬಿಸಿಲ ಬೇಗೆಯಲಿ ನಗುವ ಕೆತ್ತುವ ಛಲವು
 ಕಪ್ಪನೆಯ ಜೀವಂತ ಕಾಂತಿಯಲ್ಲೊ ? //
ಮನಸೆಲ್ಲಿ ಇಟ್ಟಿರುವೆ ದೇವ ನೀ ಮುಂದಿರುವ
ಭಕ್ತರಾರಾಧನೆಯ ಭಜನೆಯಲ್ಲೋ?
ಬಲ್ಲಿದರ ಕನಸ ಸಾಕಾರಕೆಂದು ತನ್ನ
ಕನಸ ಮೂಟೆಯನಿಟ್ಟ ಜೋಪಡಿಯಲೊ?//
ಮೆಟ್ಟಿನಲಿ ಮನವಿಟ್ಟು ಮಂದಿರದ ಒಳಗೆ
ಎತ್ತಿದಾರತಿಯ ಕಣ್ತುಂಬಿಕೊಳ್ಳುವರಲ್ಲೋ ?
ಮೆಟ್ಟುಮಾಡುವ ಕಾಯಕದಿ ಮನವಿಟ್ಟು
ಮಂದಿರವ ಮರೆತು ಇದ್ದಲ್ಲೇ ನೆನೆವನಲ್ಲೋ?
       -ಗಣೇಶ ಹೆಗಡೆ  ಜನವಿಗಾಳಿಬೀಡು
  ೨೧
ನಿನ್ನೆದೆಯು ಹರಡಿದ ಕಡಲಿನಂತೆ
ತೇಲಬಹುದಲ್ಲಿ ಮುಳುಗಲಾಳವಂತೆ
ನೋಡಲದು ಶಾಂತ ಗಂಭೀರವಾದರೂ
ಆಳದಲಿ ಆಪತ್ತು ಕುಳಿತಿರುವುದಂತೆ//
ನೀಲಿಯಾಗಸ ಬೆಳ್ಮುಗಿಲ ಚಿತ್ತಾರ
ಕರಗಿಹೋಗಲೆ ಅದರೊಳಗೆ ನಾನು?
ನೆಲನೂಕಿ ಮೇಲೇರೆ ನೆಲೆಯ ಕಳಕೊಂಡು
ಸೂತ್ರಹರಿದ ಗಾಳಿಪಟದಂತೆ  ನಾನು //
ದೂರದಾಸೆಗೆ ಸಿಲುಕಿ ಹತ್ತಿರವ ತೊರೆಯೆ
ತಲುಪಲಾರೆ ನಿನದರ ಹತ್ತಿರಕ್ಕೆ
ಕರೆಸಿಕೊಂಡರೆ ಹೇಗೆ ದೂರವನೆ ಎನ್ನಬಳಿ
ಉಳಿವುದಸ್ತಿತ್ವ ಆಗ  ಉತ್ತರಕ್ಕೆ.//

೨೨.
   * ಅಮ್ಮ ತೊಡಿಸಿದ ಅಂಗಿ*
ಅಮ್ಮ ತೊಡಿಸಿದಳಂಗಿ ಏನು ಚಂದ,!
ಮೃದು ಮಧುರ ನವಿರು ಏನು ಸೊಗಸು  !
ಅಂದು ತೊಟ್ಟಂಗಿಯನಿಂದೂ ಧರಿಸಿರುವೆ
ಬಿಡಲಾಗದೊಂದು ಮೋಹಮನಸು //
ತಾನೇ ಬಟ್ಟೆಯ ನೇಯ್ದು ಅಂಗಿ ಮಾಡಿದಳು
ಹೊಲಿದ ಗುರುತೊಂದು ಇಲ್ಲದಂತೆ
ಬೇಕಾಯಿತಾಕೆಗೆ ತಿಂಗಳೊಂಬತ್ತು
ತೊಡಿಸೆನ್ನ ಅಂಗಳಕೆ  ಬಿಟ್ಟಳಂತೆ. //
ಅಂಗಿಗಿನ್ನೊಂದರ ಹಂಗಿಲ್ಲದಂತೆ
ಓಡಾಡಿದೆ ನಾನು ನನ್ನ ಜಗದೊಳಗೆ
ಮಿಂಚಿ ಮೆರೆಯುತ್ತಿತ್ತು ಮಿರಿಮಿರಿ ಅಂಗಿ
ದಿಟ್ಟಿತಾಗುವ ಭಯವು ತಾಯ ಮನದೊಳಗೆ.
ಬಿದ್ದೆದ್ದು ಓಡುವ ಭರದಲ್ಲಿ ಅಂಗಿ
ಹರಿದುಹೋಗುತ್ತಿತ್ತು ಆಗಾಗ ಅಲ್ಲಿ
ಮಂತ್ರದ ಮಾಯೆ ಅಮ್ಮನ ಕೈಯೊಳಗೆ
ಹರಿದ ಗುರುತೇ ಇಲ್ಲ ಮುಟ್ಟಲಲ್ಲಿ//
--ಗಣೇಶ ಹೆಗಡೆ  ಜನವಿಗಾಳಿಬೀಡು.
೨೩
ದಾರಿಯಿಲ್ಲದ ನಭದಿ ಮೋಡದ ಗುರಿ ಏನು?
ತೇಲುವುದೇ ಅದಕಿರುವ ಅಂದ ಆನಂದ .
ಹಿಂದೆ ಮುಂದೆ ಮೇಲೆ ಕೆಳಗೆಲ್ಲ ಆಕಾಶ
ಗಾಳಿ ಬೀಸಿದ ದೆಸೆಗೆ ಅದರ ಪಯಣ//
ತೋರುಗಂಬಗಳಿಲ್ಲ ದಾರಿನಕ್ಷೆಗಳಿಲ್ಲ
ಹೋಗಿ ತಲುಪುವ ತಾಣ ಸ್ಪಷ್ಟವಿಲ್ಲ
ಕರೆವ ಪ್ರೀತಿಗೆ ಸೋತು ಕರಗಿ ಅಲ್ಲೇ ಇಳಿದು
ಹರಿವುದೆಲ್ಲೇ ಇರಲಿ ನಷ್ಟವಿಲ್ಲ. //
ಯಾತ್ರೆಯೇ ಜೀವನ ಗುರಿ ಅದರ ಸಾವು
ನಿಮ್ಮದಾಗಿಸಿ ಬದುಕಿ ಈ  ಕ್ಷಣದಲಿ
ನಿನ್ನೆಗಳು ನಿರ್ಧರಿಸದಿರಲಿ ನಾಳೆಗಳನ್ನು
ಜೊತೆಗಿರುವ ಕ್ಷಣವಂದ ಈ ಬದುಕಲಿ.//

       *ಒಡಲ ಕೋಪ *
ಯಾವ ಕೋಪವು ತಾಯೆ ನಿನ್ನೊಡಲ ಕಂಪನಕೆ?
ಬೆಚ್ಚಿದವು ನೀ ಹೆತ್ತ ಜೀವ ಸಂಕುಲವು
ಬಿರುಕುಬಿಟ್ಟವು ಭಕ್ತಿಭಾವದ ದೇಗುಲವು
ಉರುಳಿದವು ಧರೆಗೆ ಹಿರಿಮೆಗೋಪುರವು//
ನೆರಳನೆಲೆಗಳೇ ನರನ ಕೊರಳಹಿಸುಕಿದವು
ಬಯಲೆಂಬ ಆಲಯಕೆ  ಓಡೋಡಿ ಬಂದರು
ಕಾಲಬಿಗಿಸಾಲದೆ ಕೈಗಳನು ಕಪ್ಪರಿಸಿ
ನೆಲವ ಬಿಡಲಾಗದ ನೆಲೆಯಲ್ಲಿ ನಿಂದರು//
ಭಾರವನು ಇಳಿಸುವ ಪರಿಯೇನೋ ನಿನಗೆ
ಭಾರದಲಿ ಜೀವ ಹಿಂಡುತಿಹುದೆಮಗೆ
ದೂರದಲಿ ಕಾಣುತಿದೆ ಮಿಣುಕುದೀಪ
ಕಾಲ್ಬುಡದ ಕತ್ತಲಲಿ ಸೋಲಿನ ಕೋಪ//
ನಿನ್ನೊಡಲ ಕಂಪನಕೆ ಕಾರಣವು ಏನು?
ಅವರ ಪ್ರಶ್ನೆಗಳೇನೋ ಅವರದೇ ಉತ್ತರ
ನೊಂದವರ ನೆರವಿಗೆ ಕೊಂಚ ಕೈನೀಡಿದರೆ
ಉಳಿದೀತು ಜೀವ ಮಾನವತೆಗುತ್ತರ//
      -ಗಣೇಶ ಹೆಗಡೆ  ಜನವಿ  ಗಾಳಿಬೀಡು.
*ಹಾವನು ನೋಡಿದಿರಾ.. * 
ಹಾವನು ನೋಡಿದಿರಾ
ನಾಗರ ಹಾವನು ನೋಡೊದಿರಾ?
ನಿಧಿಯನು ಕಾಯುವ ನಾಗರಹಾವು
ಮಿತಿಯನು ಮೀರಿದ ನಾಗರಹಾವು //
ಕರಿ ಮೈ ಮಿಂಚುವ ನಾಗರಹಾವು
ನಡು ಬಿಳಿಮಚ್ಚೆಯ ನಾಗರಹಾವು
ಬುಸ್ ಬುಸ್ ಎನ್ನುವ ನಾಗರಹಾವು
ಪುಸ್ ಪುಸ್ ಎನ್ನುವ ನಾಗರಹಾವು//
ಹುತ್ತದಿ ನೆಲೆಸಿಹ ನಾಗರಹಾವು
ಕುತ್ತನು ತರುವ ನಾಗರಹಾವು
ಬೆತ್ತದ  ಅಂಜಿಕೆ ಇಲ್ಲದ ಹಾವು
ಮತ್ತೇರಿದ ಈ ನಾಗರಹಾವು//
 ವಾಸುಕಿಯಂತೆ ಆಡುವ ಹಾವು
ಮೋಸಕೆ ಮನಮಾಡಿದ  ಹಾವು
 ಮತ್ಸರ ತುಂಬಿದ ನಾಗರಹಾವು
ಕುತ್ಸಿತ ಬುದ್ಧಿಯ ನಾಗರಹಾವು //
ವಿಷವನು ಕಕ್ಕುವ ನಾಗರಹಾವು
ವಿಷಯವನರಿಯದ ನಾಗರಹಾವು
ಗೆದ್ದಲು ಕಟ್ಟಿದ ಹುತ್ತದ ಒಳಗೆ
ಗದ್ದುಗೆ ಏರಿ ಕುಳಿತಿಹ ಹಾವು//
ಭಗ್ನಭಾವದ  ನಾಗರಹಾವು
ವಿಘ್ನಸಂತೋಷಿ ನಾಗರಹಾವು
ಹರೆಯವ ಕಳೆದಿಹ ನಾಗರಹಾವು
ಪೊರೆಯನು ಬಿಡದ ನಾಗರಹಾವು  //
ಗುರುತನಕಂಜದ ನಾಗರಹಾವು
ಹೊಣೆಗೇಡಿ ಈ ನಾಗರಹಾವು
ದಣಿವೇ ಆಗದ ನಾಲಿಗೆ ಇದಕೆ
ಗುಣಕೆ ಮಣಿಯದ ಬುದ್ಧಿಯು ಇದಕೆ//
         ಹಸಿವು 
ಈ ಹಸಿವು ಹುಟ್ಟಿನದು ಬೇರೆ  ಅಲ್ಲ
ಹುಡುಕಿದೆ ಕಣ್ಣು ಹರಿವ ಬಗೆಯ.
 ಆಲಿಸಿದೆ ಕಿವಿಯು ಇಂಪಿನ ದನಿಯ
ಮರೆತಿದೆ ತೆರೆಯಲು ಎದೆಯ ಕದವ//
ನಡೆದಷ್ಟು ಮುಗಿಯದಿದೆ ಬದುಕ ಪಯಣ
ಸುಬ್ಬಣ್ಣನೋ  ಹೊರಟ ನವಿಲನೇರಿ
ಜಗಸುತ್ತಿಬರುವ ಮೊದಲೇ ಗಣಪ
 ತೋರಿದನು ಇದ್ದಲ್ಲೇ ಗೆಲುವ ದಾರಿ//
ಸ್ತಯವೆಂಬರು ಕೆಲರು, ನ್ಯಾಯವೆಂಬರು ಕೆಲರು
ಧರ್ಮಜಾತಿಗಳೆಂಬ ಗೋಜಲೊಳಗೆ
ದಾರಿಗಾಣದೆ ದನಿಗೆಟ್ಟ ಆಂತರ್ಯ
ಮಳೆಗನಿಗೆ ಬಾಯ್ದೆರೆದ ನೆಲದ ಹಾಗೆ//

   ಜೀವಸೃಷ್ಟಿ 
ಮುಳ್ಳಬೇಲಿಯ ಬಳಸುವುದು ಮಲ್ಲಿಗೆಯ ಬಳ್ಳಿ
 ನಿಸರ್ಗವು ಸಹಜತೆಯ ಸುಕೃತಿ
ಒಳಿತು ಕೆಡುಕಿನ ನಡುವೆ ಭೇದವನ್ನು ಕಲ್ಪಿಸಿ
ನರನ ನಡೆ ನರಳುವುದು ವಿಕೃತಿ//
ಪಶುಪಕ್ಷಿ ಕ್ರಿಮಿಕೀಟ ಜೀವಸೃಷ್ಟಿ
ಪೂರ್ಣತೆಯ ನಡಿಗೆಯಲಿ ಎಲ್ಲವೂ ಭಾಗಿ
ತನ್ನ ಸ್ವಾರ್ಥಕೆ ಅದನು ನಾಶಮಾಡದೆ
ಜೋತೆಸಾಗು ಪ್ರಕೃತಿಗೆ ತಲೆಬಾಗಿ//
ಭೇದಭಾವಗಳಿಲ್ಲ ಅವನ ಸೃಷ್ಟಿಯಲಿ
ಕಣಕಣಕು ನಿಗದಿಗೊಂಡಿದೆ  ಹೊಣೆ.
ಅರಳಿ ಬೀಗದು ಹೂವು ಕಾಯಾಗಲು
ಕ್ರಿಮಿಕೀಟಕಿಡಬೇಕು ಮಣೆ //     
ಬೆಳಕು ತನ್ನಿರವನು ಜಗಕೆ ತೋರಲು
ದಾರಿಗಡೆತಡೆಯೊಂದು ಇರಲೇಬೇಕು
ಗೆಲುವು ಮುಮ್ಮೇಳವು ಮಿಂಚಲಲ್ಲಿ
ಸೋತವರ ಹಿಮ್ಮೇಳ ತೆರೆಯಾಗಬೇಕು.//
ಶ್ರುತಿಯ ಇಂಪಿಗೆ ಬೇಕು ಲಯದ ಮೇಳ
ಮೆಚ್ಚುಗೆಯೂ ಕೇಳುಗರ ಕರತಾಡನ
ಶ್ರುತಿಲಯವ ತನ್ನೊಳಗೆ ಮೇಳೈಸಿಕೊಂಡವನ
ಜೀವನವೆ ಅನುಕ್ಷಣವು ಸವಿಗಾಯನ//

 ನೀರಿನೊಳಗೊಂದಾಗು.. 
ಒಂದಾಗಲಿಲ್ಲ ನೀರೊಳಗೆ ನೀನು
 ಬರಿದೆ ಅಲೆದೆ ನದಿಯು ಹರಿದ ದೂರ
 ಅರಿವಾಗಲಿಲ್ಲ ನೀರಿನೊಳ ಪುಳಕ
ಸಿಮ್ಮಿಹರಿವ  ನೀರಿನಾಳ ಉತ್ಸಾಹ//
ಅಗಲವೆಷ್ಟೋ ನೀರಿನಾಳವೆಷ್ಟೋ
ಇಳಿಯಲಿಲ್ಲ ನಿನ್ನೆದೆಯ ಒಳಗೆ
ತೇಲಿ ದಡಸೇರುವ ಬಯಕೆಯಲಿ ಸಿಲುಕಿ
ಮೀನಾಗಲಿಲ್ಲ ನೀರಿನೊಳಗೆ//
ಅಡೆತಡೆಯ ಬಳಸಿ ಹರಿವ ನೀರು
 ಪಾಚಿಗಟ್ಟಿದೆ ನಿಂತಲ್ಲೆ ನಿಂತು
ಒಂದಾಗಿಹರಿಯದೆ ನೀರೊಳಗೆ ನೀನು
ಅರಿವಾದೀತೆ  ಬಾಳಿನರ್ಥವೆಂತು? //
         'ಅಂತರ' 
ಲೆಕ್ಕ ಇಡುವುದೇ ಹಕ್ಕಿ ತಾನೇರಿದೆತ್ತರವ
ನೆಲದಿಂದ ತಾ ನೆಗೆದ ದೂರ?
ಇಟ್ಟ ಅಡಿಗಡಿಗೆ ದಾಖಲೆ ಬರೆದೆನೆಂದು
 ಬೀಗುವುದು ನರನ ಅಹಂಕಾರ//
ಕೋಗಿಲೆಯ ಇಂಪಿಗೆ ಸರಿಸಮವೇ ಇಲ್ಲ
ಹಾಡುವುದೇ ಮಾನ ಸನ್ಮಾನ ಬಯಸಿ ?
ಮಲ್ಲಿಗೆಯ ಕಂಪಿಗೆ ಮೆಚ್ಚದವರಿಲ್ಲ
ಸೂಸುವುದೆ ವೆಚ್ಚವನು  ಬಯಸಿ//
ಕಲಿತು ಬದುಕುವ ಪಾಡೊಂದು ನರನಲಿ
ಬದುಕ ಕಲೆಯಾಗಿಸುವ ಜೀವಸಂಕುಲವು
ಸೋಲುಗೆಲುವೆಂಬುದು ಹಗ್ಗದಮೇಲ್ನಡಿಗೆ
ಕಾಡಿದೆ ನರನನು ಬೀಳ್ವಭಯವು//
ನಿನ್ನೆ ನಾಳೆಗಳೇಕೆ ಕಾಡಿವೆ ಅವನನು
ಇಂದಿನಂದವನೇಕೆ ಹೊರದೂಡಿವೆ?
ಅಂದಿಗಂದೇ ಸಂದುವಂಥ ಬಾಳ್ವೆಯೇ ಅಂದ
ಕಾಣದಂತೇಕೊಂದು ಮಾಯೆ ಆವರಿಸಿದೆ?
   - ಗಣೇಶ ಹೆಗಡೆ , ಜನವಿ ,ಗಾಳಿಬೀಡು
            ಹೂವು 
ಆ ಹೂವು ಈ ಹೂವು ತರತರದ ಹೂವು
ಬಗೆಬಗೆಯ ಬಣ್ಣಗಳು ಆಕಾರವು
ಹೂಮುಖದಿ ಮಿನುಗಿದೆ ಅದೇ ಅದೇ ತಿಳಿನಗು
ಅದಕೆ ಹೋಲಿಕೆಯೊಂದೆ ಬಿಡುಗಣ್ಣ ಮಗುವು//
ಗಿಡವಿರಲಿ ಮರವಿರಲಿ ಬಳ್ಳಿಯಿರಲಿ
ಹೂವಾಗಿ ನಗುವಲ್ಲಿ ಭೇದವಿಲ್ಲ
ಕೆಸರಲ್ಲಿ ಹುಟ್ಟಿದರೂ ಶ್ರೀಪಾದ ಸೇರುವ
ಕಮಲಪುಷ್ಪಕು ಮಿಗಿಲು ಬಾಳ್ವೆಯಿಲ್ಲ//
ನಡುಊರೆ ಇರಲಿ ದಾರಿಕೊನೆಯೇ ಇರಲಿ
ರವಿಕಿರಣ ಸೋಕದ ದಟ್ಟ ಕಾನನವಿರಲಿ
ಅಂದವೆಂದವರಿರಲಿ ಅಂದಗುರುಡರೆ ಇರಲಿ
ಇಂದನೆಚ್ಚರಳುವ ನಿನ್ನ ಪರಿ ಎಮಗಿರಲಿ//
ಅರಳಿದಂದೇ ಬಾಡಿ ನೆಲಕೆ ಬೀಳುವುದು
ಬಹುಕಾಲದ ಬಾಳನಣುಕಿಸುವುದು
'ನಗುವೇ ಅಂದದ ಮರ್ಮ' ಜಗಕೆ ಸಾರಿ
ಬಂದ ಅಳಿಗಳಿಗೆ ಮಧುವನುಣಿಸುವುದು//
      ಬಿಳಿಮಂಜು. 
ಕನಸೇ ತುಂಬಿದೆ ಕಣ್ಣುಗಳಲ್ಲಿ
ಬೇರೊಂದೇನೂ ಕಾಣಿಸದು
ಕಾಣಲಾಗದ ಆ ಕಣ್ಣುಗಳಿಂದ
 ಬೇರೊಂದೇನೂ ಸಾಧಿಸದು//
ಹಂಬಲತುಂಬಿದ ಎದೆ ತಾನು
ಬೇರೊಂದೇನೂ ಭಾವಿಸದು
ಭಾವವಿಲ್ಲದೆ ಬೆಳೆಸಿದ ಗಿಡದಲಿ
ಪ್ರೀತಿಯ ಹೂವು ಅರಳದು//
ನಾಳೆಯ ಹೆಜ್ಜೆ ಮನದಲಿ ಮೂಡಿ
ಇಂದಿನ ಕಾಲ್ಬುಡ ಕಾಣಿಸದು
ಹೆಜ್ಜೆಯನಿಡದೆ ಗೆಜ್ಜೆಯರಿಂಗಣ
ಬಾಳಿನ ಆಟದಿ ಕೇಳಿಸದು//
ಮರೆಯಾಗಡಗಿದೆ ಇಂದಿನ ಅಂದ
ನೆಲಕಾವರಿಸಿದೆ ಬಿಳಿಮಂಜು.
ಬಾರದೆ ರವಿಕಿರಣ ಕರಗದೆ
 ಮೂಡದು  ಇಬ್ಬನಿ ಇಂದು//

ಒಡೆಯನು ಯಾರು?
ತೋಟದ ಹೂವಿಗೆ ಒಡೆಯನು ಯಾರು?
ಮಾಲಿಯೋ ಮಾಲಿಕನೋ ಗೊಂದಲವು
ಹೂವನು ಕೇಳಲು ಹೇಳಿದ ಮಾತು
ತನ್ನೊಡೆಯನು ಶ್ರೀ ಹರಿಯೆಂದು//
ಮಾಲೀಕ ಸುರಿಸನು ಮಾಲಿಯೂ ಹರಿಸನು
ಆಗಸದಿಂದ ಜಲಧಾರೆ.
ಬೇರನು ಕರೆದು ಉಣಿಸಿತು ನೆಲವು
ಹರಸಿತು ನೆಲವು ಮನಸಾರೆ//
ಬೆಳಕನು ನೀಡಿ ಬೆಳೆಸಿದನವನು
ಆಗಸಕೊಡೆಯನು ಆ ರವಿಯು
ಹೂವಿನ ಅಂದವ ಮೆಚ್ಚಿ ದೂರದೆ
ಹಾಡುತ ನಿಂತನು ಈ ಕವಿಯು//
ಮಾಲಿಕತ್ವವು ಯಾರದೂ ಅಲ್ಲ
ನಾನಾಗಿಯೇ ನಾ ಅರಳಿಹೆನು
ಪ್ರತಿಸೃಷ್ಟಿಸಲು ಆರದ ನರನು
ಸೋತರೂ ಹಮ್ಮಲಿ ನರಳಿಹನು. //

ತಬ್ಬಿ ಬೆಳೆಯಲೊಂದು ಮರವು
ಸಿಕ್ಕಿತೆಂದು ಬಳ್ಳಿ ತಾನು
ಬೇರ ನಂಟ ಮರೆವುದೆ?
ಬಾಳಬಳ್ಳಿ ಹಬ್ಬಿ  ನಗಲು
ಒಲುಮೆ ಕೈ ಹಿಡಿದಿರಲು
ಕರುಳಬಳ್ಳಿ   ಮರೆವುದೆ?//
ಬಣ್ಣದ ಮಳೆಬಿಲ್ಲು ಅಲ್ಲಿ
ಕಟ್ಟಿ ಬಾನಿಗೆ ತೋರಣ
ಕನಸುಗಣ್ಣ ತುಂಬದೆ?
ರೈತನೆದೆಯ ಕನಸಿಗೆ
ಹಸಿದ ನೆಲದ ಮನಸಿಗೆ
ಸುರಿದು ತಂಪನೆರೆವುದೇ?//
ಹೊಸಬಾಳ್ವೆಯ ಕಟ್ಟಲೆಂದು
ಹಸೆಮಣೆಯನೇರಿ ನೀರೆ
ತವರ ಹಾದಿ ಮರೆವಳೆ?
ಕರುಳ ಕುಡಿಯುಬೆಳೆಬೆಳೆದು
ತಾನೇ ಮತ್ತೆ ಚಿಗುರಲು
ಕರುಣೆ ಮೂಲ ಆರುವುದೇ?
ರಥವನೇರಿ ಹೊರಟ ದೇವ
ಪಥದ  ವೇದಘೋಷ ಕೇಳಿ
ಮರಳಿ ಗುಡಿಗೆ ಬಾರನೇ?
ನಿಜದ ಮೂಲ ಅವ್ಯಕ್ತ
ಕರುಣೆನೆಲವು  ಅಭಿವ್ಯಕ್ತ
ದೃಷ್ಟಿಯಿಚ್ಛೆಗೆ ತೋರದೆ?


            * ನೀರು *
ಆಗಸಕೆ ಹಕ್ಕಿದೆಯೆ ನೀರಮೇಲೆ?
ಹುಟ್ಟಿದ ನದಿಯು ಗಿರಿಯ ಮಗಳೆ?
ಹರಿವ ನದಿಯಾದೀತೆ ದಡದ ಪಾಲೇ?
ನೀರೇನು ಸಾಗರಕೆ ಸೇರಿದವಳೇ?//
ನೀರಿಗಿಲ್ಲ ಜಾತಿ ನೀರಿಗಿಲ್ಲ ಕುಲವು
ನೀರಿಗಿಲ್ಲ ಒಂದೆ ಆಕಾರವು
ನೀರಿಗಿಲ್ಲ ಒಂದೆ ನೆಲೆಯು  ಜಗದೊಳಗೆ
ನಿಂತಲ್ಲೆ ನಿಲ್ಲದ ನೀರ ಹರಿವು  //
ನೀರು ಎಲ್ಲರ ಜೀವ, ಚಲನೆ ನೀರಿನ  ಜೀವ
  ನಿಂತರೆ ನಿಂತಿತು ನೀರಿನುಸಿರು
ಬಂದುಸೇರುವುದಾಗ  ಲೋಕದ ಕೊಳೆಯು
ತಿಳಿನೀರಿನಡಿಯಲ್ಲಿ ಕೆಸರು. //
ಕೊಡದಲ್ಲಿ ಇರುವಾಗ ಕೊಡದಂತೆ ನೀರು
ಅಳೆವವನ ಗೆಲುವು ಕೈಯಲ್ಲಿ ಸೇರು
ಯಾರಿಗೂ ಒಳಪಡದ ನೀರಿನದೆ ಗೆಲುವು
ನೀರಾಗಿ ಹರಿಯಲಿ  ಬಾಳ ಒಲವು//
    -ಗಣೆಶ ಹೆಗಡೆ, ಜನವಿ,   ಗಾಳಿಬೀಡು






























Tuesday, 23 December 2014

 ಕೋತಿಯ ನಾಯಕ ಸೇನಕ 
ಕೋತಿಗಳಿದ್ದವು ಕಾಡಿನಲಿ
ಸಾವಿರ ಸಂಖ್ಯೆಯ ಲೆಕ್ಕದಲಿ.
ಕೋತಿಗಳಾದರೂ ಅವರೆಂದೂ
ಜಗಳವ ಮಾಡದೆ ಹೊಂದಿಕೊಂಡು //
ಯೋಚನೆ ಬಂತವಕೆ ಒಂದು ದಿನ
ಇರಬೇಕು ತಮಗೊಬ್ಬ ನಾಯಕ.
ಇರುವೆವು ನಾವೀಗ ಹೊಂದಿಕೊಂಡು
ಆಗಲಾರವೇ ಜಗಳ ಮುಂದೆಂದು ?//
ನಾಯಕನ ಮಾತನ್ನು ಕೇಳೋಣ
ತೋರಿದ ಹಾದೀಲಿ ನಡೆಯೋಣ.
ನಾಯಕನಿರಲೊಂದು ಧೈರ್ಯ.
ಹೆಚ್ಚುವುದು ನಮ್ಮಲ್ಲಿ ಸ್ಥೈರ್ಯ. //
ಎಲ್ಲಿವೆ ಹಣ್ಣಿನ ಮರಗಳು?
ಎಲ್ಲಿವೆ ಸಿಹಿನೀರ ಕೊಳವು?
ಎಲ್ಲಿಲ್ಲ ಪ್ರಾಣಿಯ ಕಾಟ?
ನಿಲ್ಲಿಸಲು ನಮ್ಮ ಕಚ್ಚಾಟ //
ನಾಯಕನೊಬ್ಬ ಬೇಕೆಂದು
ಆರಿಸೆ ಹಿರಿಯ ಕೋತಿಯನು.
ಕರೆಯಲದನು ಸೇನಾನಾಯಕ
ಬರುಬರುತ ಆಯ್ತು ಸೇನಕ. //
ಹಾರುತ ನೆಗೆಯುತ ಹೊರಟಾವು
ಊರಿನ ಹತ್ತಿರ ಬಂದಾವು
ಕಂಡವು ನೂರಾರು ಗುಡಿಸಲು
ಜನರಿಲ್ಲದ ಖಾಲಿ ರಸ್ತೆಗಳು.//
ಹೆಂಗಸರು ಅಡಿಗೆಮನೆಯಲ್ಲಿ
ಮುದುಕರು ಕಟ್ಟೆಯ ನೆರಳಲ್ಲಿ
ಮಕ್ಕಳು ಬೀದಿಯ ಕೊನೆಯಲ್ಲಿ
ಹುಡುಕಾಟ ಹಣ್ಣಿನ ಮರೆವೆಲ್ಲಿ?//
ಕಣ್ಣಿಗೆ ಬಿಟ್ಟು ಸೀಬೆ ಮರ
 ಚಿನ್ನದ ಬಣ್ಣದ ಹಣ್ಣುಗಳ
ಗೊಂಚಲು ಗೊಂಚಲು ಜೋತಿದ್ದವು
ಹಣ್ಣಿನ ಕಂಪು ತೇಲಿದ್ದವು.//
ಹಣ್ಣಿನ ಅಂದ ಹಳದಿ ಕೆಂಪು
ಮೂಗಿಗೆ ಬಡಿಯೆ ಸೀಬೆ ಕಂಪು.
ತಿಂದರೆ ಹೊಟ್ಟೆಗೆ ಕಂಪು
ಸೇರಿತು ಮರಿಕೋತಿ ಗುಂಪು.//
ನೋಡೋಣ ಹಣ್ಣಿನ ರುಚಿಯ
 ಕೇಳಿತು ಮರಿಕೋತಿ ಅಣ್ಣನ
ಬೇಡಪ್ಪ ನಮಗಿದು ಹೊಸಜಾಗ
ಕೇಳೋಣ ಸೇನಕನ ಬೇಗ. //
ಬಂದವು ಸೇನಕನ ಬಳಿಗೆ
'ಬೇಕು ನಮಗೆ ನಿಮ್ಮ ಒಪ್ಪಿಗೆ'
ಹಣ್ಣಿನ ಗೊಂಚಲು ಮರದ ತುಂಬ
ತಾಳದ ಹಸಿವು ಹೊಟ್ಟೆತುಂಬ' //.
ಸೇನಕ ಕೇಳಿದ ಕೋತಿಗಳ
 'ಕಂಡಿಲ್ಲವೆ ಅಲ್ಲಿ ಜನಗಳ?
ಕಾವಲಿಲ್ಲವೇ ತೋಟಕ್ಕೆ?
ಗೊಂಬೆಗಳಿಲ್ಲವೆ ಗೂಟಕ್ಕೆ?'//
'ಗಂಡಸರೆಲ್ಲಾ ಹೊಲದಲ್ಲಿ
ಹೆಂಗಸರಡಿಗೆ ಮನೆಯಲ್ಲಿ
ಮಕ್ಕಳ ಆಟ ಬಯಲಲ್ಲಿ
ಮುದುಕರ ನೋಟ ಪರದಲ್ಲಿ'//
 ಸೇನಕ ಕೇಳಿದ ಕೋತಿಗಳ
'ಕಟ್ಟಿಲ್ಲವೆ ತಂತಿ ಬೇಲಿಗಳ?'
'ಬೇಲಿಯೂ ಇಲ್ಲ ಮಾಲಿಯೂ ಇಲ್ಲ
ತೋಟಕ್ಕೆ ನುಗ್ಗುವುದು ಸುಲಭ.
ಕೊಡಿರೆಮಗೆ ನಿಮ್ಮ ಒಪ್ಪಿಗೆ
ತಾಳಲಾರೆವು ಹಸಿವ ಬೇಗೆ'//
ಸೇನಕ ಕೊಟ್ಟ ಉತ್ತರ
'ಹೋಗದಿರಿ ಮರದ ಹತ್ತಿರ
ಬೇಲಿಯೂ ಇಲ್ಲ; ಮಾಲಿಯೂ ಇಲ್ಲ,
ಮೋಸವು ಅಡಗಿದೆಯಲ್ಲ!'//
ಬಿಡಲಾರದಾಸೆ ಮರಿಕೊತಿಗೆ
ಸಲಹೆಯ ನೀಡಿತು ಸೇನಕಗೆ.
'ಹಗಲಲ್ಲಿ ದಣಿವ ಜನರು
ಇರುಳಲ್ಲಿ ನಿದ್ರೆಗೆ ಜಾರುವರು
ಮೆಲ್ಲಗೆ ಹಣ್ಣ ಕೀಳೋಣ
ನಿಲ್ಲದೆ ದೂರಕ್ಕೆ ಸಾಗೋಣ'//
ಮರಿಕೋತಿ ಮಾಡಲು ಒತ್ತಾಯ
ಒಪ್ಪಲೇ ಬೇಕಾಯ್ತು ನಾಯಕ
ಕಾದವು ನಡುರಾತ್ರಿ ತನಕ
ಲಗ್ಗೆ ಇಟ್ಟವು ಸೀಬೆ ಮರಕ.//
ಕೂಡಲೆ ಸದ್ದಾಯ್ತು ಗೆಜ್ಜೆಗಳ
ಡಣ ಡಣ ಡಣ ಕಿರು ಗಂಟೆಗಳ
ರೆಂಬೆಕೊಂಬೆಗೂ ಗೆಜ್ಜೆಗಳು
ರೆಂಬೆಕೊಂಬೆಗೂ ಗಂಟೆಗಳು //
ಅರಿವಿಗೆ ಬಂತು ಆಪತ್ತು
ಕೋತಿಗಳ ಪ್ರಾಣಕ್ಕೆ ಕುತ್ತು
ತೆರೆದವು ಮನೆಮನೆ ಬಾಗಿಲು
ಪಂಜು ಹಿಡಿದ ಜನರ ಕೈಗಳು //
ಕೋತಿ ಬಂದಿವೆ ಕೋತಿ ಕೋತಿ
ತತ್ತಾ ದೊಣ್ಣೆ ತತ್ತಾ
ತತ್ತಾ ಬಿಲ್ಲು  ತತ್ತಾ
ತತ್ತಾ ಕವಣೆ  ತತ್ತಾ //
ಕೂಗುತ್ತ ಬಂದ ಜನಗಳು
ನಡುಗಿ ಹೋದವು ಕೋತಿಗಳು
ಒಂದನು ಒಂದು ತಬ್ಬಿಕೊಂಡು
ಕೆಟ್ಟೆವೆಂದು ಗೋಳಾಡಿದವು.//
ಧೈರ್ಯವ ನೀಡಿದ ಸೇನಕ
ನಾನಿರುವೇನು ನಿಮಗೆ ನಾಯಕ
ಹೋರಾಡುವೆ ಪ್ರಾಣವನೊಪ್ಪಿಸಿ
ಕಾದಾಡುವೆ ನಿಮ್ಮನು ರಕ್ಷಿಸಿ.//
ಸುತ್ತಲು ನಿಂತರು ಜನರು
ಬೆಳಕಿಗೆ ಕೈಯಲ್ಲಿ ಪಂಜು.
ಹೊಡೆಯಲು ಕೈಲಿ ದೊಣ್ಣೆ
ಕೆಲವರ ಕೈಲಿ ಕವಣೆ. //
ಛಂಗನೆ ನೆಗೆದ ಸೇನಕ
ಕಿತ್ತನೊಂದು ಕೈಯ ಪಂಜ
ಪಕ್ಕದ ಗುಡಿಸಲಿಗೆ ಹಾರಿ
ಮಾಡಿನ ಹುಲ್ಲಿಗೆ ಪಂಜನೂರಿ //
ಹೊತ್ತಿತು ಮನೆಗಳಿಗೆ ಬೆಂಕಿ
ಧಗಧಗ ಉರಿಯುವ ಬೆಂಕಿ
ಜನರೆಲ್ಲಾ ಬೆಂಕಿಯ ನೋಡಿದರು
ಬೆಂಕಿಯ ಆರಿಸೆ ಓಡಿದರು//
ಜನರತ್ತ ನೋಡಲು ಇತ್ತ
ಕೋತಿಯ ಗುಂಪು ಮಾಯಾ
ನಾಯಕನೆಂದರೆ ನಾಯಕ
ಕೋತಿಯ ನಾಯಕ ಸೇನಕ //
ಕಷ್ಟದಿ ಕೋತಿಯ ರಕ್ಷಿಸಿದ
ಕೋತಿಯ ನಾಯಕ ಸೇನಕ
ಸೇನಕ ಸೇನಾ ನಾಯಕ
ಸೇನಕ ಸೇನಾ ನಾಯಕ
         -ಗಣೆಶ ಹೆಗಡೆ, ಜ ನ ವಿ ಗಾಳಿಬೀಡು.









































Sunday, 14 December 2014

  ಚುಟುಕುಗಳು 
ಏಕಭಾವದಿ ಭಜಿಸು ವಿಷ್ಣುವನು
ಕಳೆಯಲವ ಆಯಾಸ ಕಷ್ಟವನು
ಸಿಗಲಾಶ್ರಯ ವಿಬುಧರಿಗೆ ರಾಯನಲಿ
ಭಕ್ತಿ ನೆಲೆಗೊಳ್ಳಲಿ ಶ್ರೀ ಹರಿಯಲಿ. //
ಮನವಿಲ್ಲದ ವ್ರತ ಸಮಯ ವ್ಯರ್ಥ
ಭಾವವಿಲ್ಲದೆ ಗಂಗೆ ಆದಾಳೆ ತೀರ್ಥ?
ಯಾಗ ಯಜ್ಞಕು ಹಿರಿದು ಭಕ್ತಿ
ನೀನಿರುವಲ್ಲೆ  ಅಡಿಯಿಡುವ ಮುಕ್ತಿ //
ಕೊನೆ ಗಳಿಗೆಯಲ್ಲಿ ಅಜಾಮಿಳನ ಬಾಯಿ
ಉಚ್ಚರಿಸಲೊಮ್ಮೆ ಶ್ರೀ ಹರಿಯನಾಮ
ಹರಿಯಿತು ಭವ ದೊರೆತು ವೈಕುಂಠ
ಹರನಕ್ಷಿಗೆ ಸುಟ್ಟುರಿದಂತೆ ಕಾಮ //
ಒಳಿತು ಕೆದುಕಗಳೆಲ್ಲ ಅರಿಯೆ ತಂದೆ
ನೀನೇ ಪ್ರೇರಣೆ ನನ್ನಲ್ಲಿ  ಕಾಯಕಕ್ಕೆ
ಹೊಣೆಗಾರ ನೀ ಫಣಿಭೂಷಣ  ಎನ್ನ
ಒಂದಪರಾಧ  ಹೆಚ್ಚೆ ನಿನ್ನ ವಿಷಕಂಠಕೆ.//
ಉಸಿರಾಟ ಒಳಹೊರಗೆ ಎನ್ನ ಜೀವ
ನಿರುತವೂ ಭಜಿಸು ಹರಿಯ ನಾಮ
ಹೊರಹೋದ ಉಸಿರೆಲ್ಲ ಒಳಸೇರ
ಬೇಕೆಂಬುದೇನಿಲ್ಲ ಜೀವ ನಿಯಮ. //
ರಾಮಕೃಷ್ಣರ ಭಕ್ತಿಗೆ ಹಲವು ರೂಪ
ಅಳುವರು, ನಗುವರು, ಮಾತನಾಡುವರು
ದೇವಿಯೊಡನೊಂದಾಗಿ ಭಾವದಲ್ಲಿ
ಉಣಿಸುವರು, ಉಣ್ಣದಿರೆ  ಕೋಪಗೊಳ್ಳುವರು. //
ತಾಯಿತಂದೆ ಗುರುಹಿರಿಯರಿಗೆ
ದ್ರೋಹಮಾಡುವವವನೇ  ಪಾಪಿ
ಗುರು ಅಗಸ್ತ್ಯನ ಹೊಟ್ಟೆಯ ಸೇರಿ
ಜೀರ್ಣವಾದನು ವಾತಾಪಿ //
ಶಾಸ್ತ್ರ ಅರಿತವರೇನು? ಶಸ್ತ್ರ ನುರಿತವರೇನು?
ವೇದವಿದನೇನು? ತರ್ಕದಿ ನಿಪುಣನೇನು ?
ಸಕಳವರಿತು ಸಕಲನಾದ ಶ್ರೀ ಹರಿಗೆ
ಹೃದಯದಿ ಎಡಕೊಡದವನೇಸು  ಸಾಧಿಸಲೇನು//
ಮಾಡಲೇನು? ಕೆಲಸ ಮಾಡದಿದ್ದರೇನು?
ಕೈಗೆತ್ತಿಕೊಳ್ಳುವ ಮುನ್ನ ಯೋಚಿಸಲು ತಪ್ಪೇನು?
ಮಾಡುವನು ಕೆಲಸ ಮಾಡದೆಯೂ ಇರುವನು
ಔಚಿತ್ಯ ಬಲ್ಲವನೇ ಜಾಣನು //
ಹೂಗಳನು ಹುಡುಕಿ ತಿಳಿಗೇಡಿಯಲೆದಾಟ
ಆಳಸರೋವರ ನಿರ್ಜನ ಬೆಟ್ಟಗುಡ್ಡ.
ಪಶುಪತಿಯೇ ನಿನ್ನಂಘ್ರಿಗಳಿಗೆ ತಮ್ಮ
ಹೃದಯಕಮಲವನರ್ಪಿಸದವನು ದಡ್ಡ.  //
ಗುರುಜನರ ನುಡಿ ನಿಷ್ಠುರ ಕಹಿ
ಜಿವ್ಹೆಗಹಿತ ಉದರಕ್ಕೋ ಸಿಹಿ.
ಸಾಣೆಗುಜ್ಜದ ರತ್ನಕೆಲ್ಲಿಯದು ಹೊಳಪು?
ಹಾದಿಬೀದಿಯ ಹರಳುಗಲ್ಲೇ ಸರಿ.//
ಹೆಚ್ಚುತ್ತಲಿಹರು ಗುರುಗಳಿಂಥವರು
ಶಿಷ್ಯರ ಹಣದ ಮೇಲಿವರ ಕಣ್ಣು
ಪಾಠಮಾಡದೆ ನೀತಿ ಹೇಳದೆ ಮಕ್ಕಳ
ಭವಿಷ್ಯವನ್ನು ಮಾಡುವರು ಮಣ್ಣು.//
ನಾವೆ ಮುರಿದಿದೆ ನದಿಯಲಿ ಮೊಸಳೆ ತುಂಬಿದೆ
ಬೀಸುತಿದೆ ಭಾರಿ ಬಿರುಗಾಳಿ
ಕತ್ತೆಲೆ ರಾತ್ರಿ ಬೆಳಕಿನ ಕರೆ ಬೇರೆ
ನಾವಿಕನ ಭುಜಬಲದಿ ನಂಬಿಕೆಯ ತಾಳಿ .//
****
ಹುಟ್ಟಿದ ನದಿ ಹಿರಿದೇನು ಕಿರಿದೇನು?
ಎಂಗದೆಲ್ಲೂ ಮುಂದಕ್ಕೆ ಹರಿಯಬೇಕು
ಜೊತೆ ಸೇರಿಕೊಂಡು ಸೇರಿಸಿಕೊಂಡು ನಿಲ್ಲದೆ
ಶರದಿಯೆದೆಯಲೊಂದಾಗಿ ಬೆರೆಯಬೇಕು. //
ತರ್ಕದ ಮಾತೊಂದು ಕರ್ಕಶ
ವ್ಯಾಕರಣದ ನುಡಿಯು ಶುಷ್ಕ.
 ದೇವನರಿಯಲು ಬೇಕು ನರನ
ಭಾವಲೋಕ ನಿಷ್ಕಲ್ಮಷ. //
ಭಕ್ತಿಯೊಂದೇ ಸಾಕು ಭಗವಂತನಲ್ಲಿ, ಕಳೆವುದು
ಸುಖ ದುಃಖ, ಅಜ್ಞಾನ, ಜನನ ಮರಣ.
ಸಪ್ತ ಸಾಲವೃಕ್ಷ ಬೆಟ್ಟ ಪಾತಾಳವನು
ಏಕಕಾಲಕೆ ಭೇದಿಸಿತು ಶ್ರೀ ರಾಮಬಾಣ //
ಮಂಜಿನಾವರಣ ನೆಲಕೆ
ಸೂರ್ಯನೇರಲು  ನಭಕೆ
ಮುತ್ತಿನಾಭರಣದ ಮೆರಗು
ಮಂದಾರ ಕುಸುಮದ ಮೊಗಕೆ.//
ಭಕ್ತಿ ಜ್ಯೋತಿಯ ಹಾಗೆ ಕಳೆವುದು ಕತ್ತಲೆಯ
ಬಿರುಗಾಳಿಯಿಂದದನು ಕಾಪಾಡಬೇಕು.
ನಿಷ್ಠೆ ತೈಲವನೆರೆದು, ನೇಮ ಬತ್ತಿಯ ಹೊಸೆದು
ಎದೆಗೂಡೊಳಿಟ್ಟು ಬೆಳಕ ಪಡೆಯಬೇಕು. //
ಮನಸಿಜವು ಮನದಲ್ಲಿ ಮುಪ್ಪಾದವು
ಅಂಗಮದವಿಂಗಿ ಅಲ್ಲೇ ಮರೆಯಾದವು
ಹೊಂಚಿದ್ದ ಕಾಲ ಮಿಂಚಂತೆ ಬಡಿಯೆ
ಮನ್ಮಥ ವೈರಿ ಶಿವಪಾದ ಗತಿಯಾದವು.//
ವನವಾಸಿ ಶಿವ, ಭಕ್ತರುಪವಾಸಿ ಶಿವ,
ನಿನಗೆನ್ನ ನಮನ ಕಾಮಾಂತಕ
ಸೂಕ್ಷ್ಮನೂ, ಸ್ಥೂಲನೂ, ಹಿರಿಯನು, ಕಿರಿಯನೂ
ನೀನೆನ್ನೆದೆಯಲಿರಲೆನಗೆ ಆವ ಆತಂಕ.//
ಶಿವನು ಮಂಗಳಕರನು ಮಸಣವಾಸಿ
ನಾಗಭೂಷಣನವ ಗಜಚರ್ಮಾಂಬರ
ಕೆಸರಿಂದ ಮೇಲೆದ್ದು ಪಾಚಿಗಟ್ಟಿದ ನೀರ
ನಡುವೆ ಅರಳಿದ ಕಮಲವೆನಿತು ಸುಂದರ. //
ವಿಷಯಸುಖದೊಲಡಗಿದೆ ವಿಷವು
ವಿಷಮದೊಳಗೆಂದೂ ಒದಗದದು.
ಬಂಧನಕು ಬಿಡುಗಡೆಗು ಒಂದೆ ಕಾರಣನಾದ
ಬಂಧುವನು ಎಡಬಿಡದೆ ಭಜಿಸುವುದು.//
ಬಾಲಕೃಷ್ಣ ನೀ ಓಡಿಬೀಳಲು ಅಳುತ
ಕೈ ಹಿಡಿದೆತ್ತಲು ತಾಯ ಕರೆವೆಯಲ್ಲ.
ಸಂಸಾರದಲಿ ಬಿದ್ದು ನೊಂದವರ ಕರೆಯ
ಕೇಳದೆ ಇಬ್ಬಂದಿತನ ತೋರುವೆಯಲ್ಲ.//
ಎಲೈ ಮನವೇ, ನೀನೆಷ್ಟು ಚಂಚಲ?
ಆಗಸಕೆ ನೆಗೆದು ಮರು ಕ್ಷಣಕೆ ಪಾತಾಳ
 ಸ್ಮರಿಸದಿರುವೆ ನಿನ್ನೊಳಗೆ  ಕುಳಿತಿರುವ
ಪರಬ್ರಹ್ಮನನು ಒಂದೇ ಒಂದು ಸಲ.//
ಮತ್ತೆ ಮತ್ತೆ ಜನನ, ಮತ್ತೆ ಮರಣ
ಮತ್ತೆ ತಾಯ ಗರ್ಭದಲ್ಲಿ ಶಯನ
ಮತ್ತೆಂದು ಮುಕ್ತಿ ಜೀವ ಚಕ್ರದಿಂದ? ಕರ
ವೆತ್ತಿ ಬೇಡುವೆ ತೋರಯ್ಯ ಕರುಣ. //
ಬಾರನಂತೆ ಯಮನಿವರ ಗೊಡವೆಗೆ
ಗೀತೆಯನಿನಿತು ಓದಿದವನ, ಗಂಗಾ
ಮಾತೆಯನು ಇನಿತು ಸೇವಿಸಿದವನ, ತುಳಸಿ
ದಳವನರ್ಪಿಸಿ ಹರಿಯ ಪೂಜಿಸಿದವನ. //
ಹಲಬಗೆಯ ದೋಷಗಳಿದ್ದರೂ ಭಕ್ತಿ
ಪರವಶನಾಗೆ ಆಗುವನವನು ಪೂಜ್ಯ.
ಎಲೆತುಂಬ ಮುಳ್ಳು ಎದೆಯಲ್ಲೇ ಹಾವು
ಹರಿಪಾದ ಹೊಂದುವುದು ಕೇದಿಗೆಯ ಭಾಗ್ಯ.//
****
ಈ ಜಗವೆಲ್ಲ ಅವನ ಅಧೀನ
ದುಃಖಿಸದಿರು ನೀನಾರಿಗಾಗಿಯೂ
ಇತ್ತವನು ಕಿತ್ತು ಕೊಂಬುವನು
ದುಃಖ ಯಾಕೆ ಅರಿವ ಹೊರತಾಗಿಯೂ //
ಮದಮತ್ಸರ ಮೋಹ ಮೃಗಗಳು ಸೇರಿ
ಕಾಡಗಿದೆ ಎನ್ನ ಮನ ಆದಿ ಕಿರಾತ
ಬಂದಿಲ್ಲಿ ನೆಲೆಸಯ್ಯ ನಿತ್ಯ ನಿರಂತರ
ಬೇಟೆಯಾಡುವ ಸಂತಸವು ಖಂಡಿತ . //
ನೀರನೆರೆಯೆ ಬೇರಿಗೆ ಕೊಂಬೆರೆಂಬೆ
ಪತ್ರ ಫಲಪುಷ್ಪ ತೃಪ್ತ
ಪರಮಾಪ್ತ ಪರಮಾತ್ಮನನು  ಭಜಿಸೆ
ಜನುಮ ಜೀವ ಕೋಟಿ ಸಂತೃಪ್ತ //
ಎನ್ನಂಗಗಳಲಿ ಮನವೆಣಿಸದು ಭೇದ
ಕೈಕಾಲು ಕಣ್ಣು ಕಿವಿ ತಲೆ.
ಸರ್ವಜೀವಕು ದೇವನಿತ್ತಿಹನು ನೆಲೆ
ಬ್ರಹ್ಮಸೃಷ್ಟಿಯಲಿ ಎಲ್ಲದಕು ಬೆಲೆ.//
ಶಿರಬಾಗಿ ಬೇಡುವೆನು ಕರುಣಿಸು ದೇವ
ಎನಗತಿಮುಖ್ಯವಿದು ತಿಳಿದುಕೋ
ಜನ್ಮಜನ್ಮಾಂತರದಿ ನಿನ್ನ ಚರಣಸ್ಮರಣೆ
ಎನಗಿರಲೆಂದು ಪುಸ್ತಕದಿ ಬರೆದುಕೋ //
ಮರವೆಂದು ಭಾವಿಸಿ ಬೇಡಿದೆ ನಿನ್ನ
ಇತ್ತೆ ನೀನೆನಗೆ ವರದ ಫಲ.
ಭಾವಿಸದೆ ಬೇಡದೆ ಸುಮ್ಮನಿರಲು
ನೀನು ಎನಗಾದೆ ಬರದ ನೆಲ.//
ನದಿಗಳೆಲ್ಲೇ ಇರಲಿ ಹರಿದು
ಕೊನೆಗೆ ಸೇರುವುದೊಂದೆ ಶರಧಿ.
ಹಲನಾಮದಲಿ ಸ್ಮರಿಸೆ ಅವನ
ಹೂಮಾಲೆ ಹೊಳೆವುದು ಹರಿಯ ಉರದಿ.//
ಶಕ್ತಿಯಡಗಿದೆ ಜಡದಿ ಹಲವು ರೂಪ
ಬೆಂಕಿ, ಬೆಳಕು, ಬೆಚ್ಚನೆಯ ಹಿತಗಾಳಿ
ಜೀವಚೇತನ ಅವನೇ ಹಲವು ರೂಪ
ಭೇದಕೆಡೆಯಿಲ್ಲ ಸಮರಸದಿ ಬಾಳಿ.//
ಶರಧಿಯಲಿ ಬಿದ್ದು ಈಜಾಡುವವಗೆ
ನೀಡೀತೆ ಬಾವಿಯ ಆಳ ಸುಖವ?
ಭಕ್ತಿಯೆಂಬ ಅಮೃತ ಸಾಗರದಿ ಈಜಲು
ಲೌಕಿಕದ ಮಿಂದಾಟ ನೀಡೀತೆ ಹಿತವ?//
ಭೂತದ ಹೊರೆ ಭವಿಷ್ಯದ ಕರೆ
ಹೊತ್ತು ಸಾಗುತಿದೆ ವರ್ತಮಾನ.
 ಕಳೆಯಲಾರದು ಹಲಜನ್ಮವೆತ್ತರೂ
ಋಣಸಂದಾಯವೆ ಜೀವಮಾನ //
ನಗದವ ಬಾಯಲ್ಲಿ ನಗುವಿನುಪದೇಶ
ಏನು ಆಶ್ಚರ್ಯ ಎಂಥ ವಿಪರ್ಯಾಸ?
ಮೊಗ್ಗಲ್ಲೇ ನಿಂತ ಕಾಲ ಮತ್ತೆ ಅರಳಿ
ಮೂಡಲಿ ವದನದಲಿ ಮಂದಹಾಸ. //









































Thursday, 4 December 2014

 ಪ್ರಾರ್ಥನೆ ಹೇಗಿರಬೇಕು?
ಗುರು ನಾನಕರ ಜೀವನದಲ್ಲಿ ನಡೆದ ಘಟನೆಯಿದು.
ನಾನು  ಹಿಂದುವೂ ಅಲ್ಲ, ಮುಸ್ಲಿಂನೂ ಅಲ್ಲ. ನಾನೊಬ್ಬ ಮನುಷ್ಯ ಎಂದು ಅವರು ನಾನಕರು   ಯಾವಾಗಲೂ  ಹೇಳುತ್ತಿದ್ದರು. ಈ ತರಹದ ವಾದವನ್ನು ಜನರು ಮೆಚ್ಚಲಿಲ್ಲ. ಬದಲಾಗಿ ಅವರು  ಸುಲ್ತಾನ್ಪುರದ ನವಾಬನಿಗೆ ದೂರಿತ್ತರು  'ಈ ಮನುಷ್ಯ ದೇವರನ್ನು ಅಂದರೆ ಅಲ್ಲಾಹನನ್ನು ನಂಬುತ್ತಿಲ್ಲ' ಎಂದು . ನವಾಬರು ನಾನಕರನ್ನು ಕರೆಯಿಸಿ ವಿಚಾರಿಸತೊಡಗಿದರು.  ಆ ಸಮಯದಲ್ಲಿ ಅಲ್ಲಿ ಒಬ್ಬ ಮುಲ್ಲಾನೂ ಇದ್ದನು. ನವಾಬ  ಅವನನ್ನು ತೋರುತ್ತ ' ಈತ  ಮುಲ್ಲಾ. ದೇವನನ್ನು ನಂಬುವವ . ಈತ ನಿಜವಾದ ಮುಸಲ್ಮಾನ ಅಲ್ಲ ಎಂದಾದರೆ ಇನ್ನು  ನಿಜವಾದ ಮುಸಲ್ಮಾನ ಯಾರು?' ಎಂದು ಕೇಳಿದ. ನಾನಕರು ಧೈರ್ಯದಿಂದ ಉತ್ತರಿಸಿದರು-'ಮುಸಲ್ಮಾನರೆಂದು ಕರೆಯಿಸಿ ಕೊಂಡವರೆಲ್ಲ ನಿಜವಾದ ಮುಸಲ್ಮಾನರಲ್ಲ; ಯಾರಿಗೆ ಕರುಣೆಯೇ ಮಸೀದಿಯೋ, ಯಾರಿಗೆ ಶ್ರದ್ಧೆಯೇ ಪ್ರಾರ್ಥನೆಯೋ, ಪ್ರಾಮಾಣಿಕ ಜೀವನವೇ ಕುರಾನೋ ಅವರೇ  ನಿಜವಾದ ಮುಸಲ್ಮಾನರು'
   ಆಸ್ಥಾನದಲ್ಲಿದ್ದ ಖಾಜಿಗಳು ಬಿಡಲಿಲ್ಲ. 'ನೀನು ಇಷ್ಟೆಲ್ಲ ಹೇಳುತ್ತೀಯಲ್ಲ, ಮಸೀದಿಗೆ ಬಂದು ಪ್ರಾಥನೆ ಮಾಡಬಲ್ಲೆಯಾ?' ಎಂದು ಸವಾಲು ಹಾಕಿದರು. ನಾನಕರು  'ಅದಕ್ಕೇನಂತೆ? ಖಂಡಿತವಾಗಿ ಬರುವೆ. ಭಗವಂತನ  ಪ್ರಾರ್ಥನೆಗೆ  ಮಸೀದಿಯಾದರೇನು? ಮಂದಿರವಾದರೇನು? ' ಎಂದು ಮಸೀದಿಗೆ ಬರಲು ಒಪ್ಪಿಕೊಂಡರು.
     ಮಸೀದಿಗೆ  ನಾನಕರನ್ನು ಕರೆದುಕೊಂಡು ಬಂದರು. ಅಲ್ಲಿ ಅನೇಕರು ಸಾಲಾಗಿನಿಂತು ಬಾಗುವುದು, ನಮಸ್ಕರಿಸುವುದು , ಬಾಯಲ್ಲಿ ಏನನ್ನೋ ಹೇಳುವುದು ಮಾಡುತ್ತಿದ್ದರು.  ಪ್ರಾರ್ಥನೆ  ಮಾಡುತ್ತೇನೆಂದು ಒಪ್ಪಿಕೊಂಡು ಬಂದ ನಾನಕರು ಮಾತ್ರ ಪ್ರಾರ್ಥನೆಯನ್ನು ಮಾಡದೇ ನಗುತ್ತ ನಿಂತಿದ್ದರು.   ನೋಡಿ  ಮುಲ್ಲಾನಿಗೆ ಸಿಟ್ಟು ಬಂತು. ಪ್ರಾರ್ಥನೆ ಮಾಡದೇ ನೀವೇಕೆ  ನಗುತ್ತಿರುವುದು? ಎಂದು ಕೇಳಿದ. ನಾನು ಪ್ರಾರ್ಥನೆ ಮಾಡುತ್ತಿರಲಿಲ್ಲ, ಹಾಗೆಯೇ ನೀವೂ ಪ್ರಾಥನೆಯನ್ನು  ಇದೆಲ್ಲ ಬರೀ ಸೋಗು. ಅದಕ್ಕೆ ನಗುಬಂದಿತು  ಎಂದರು. ತುಂಬಾ ಸಿಟ್ಟುಗೊಂಡ  ಮುಲ್ಲಾ  'ಪ್ರಾರ್ಥನೆ ಮಾಡುತ್ತಿರುವವನನ್ನು ನಿಂದಿಸುವ ಈ  ಕಾಫೀರನನ್ನು ವಿಚಾರಣೆ ನಡೆಸಿ ಮರಣದಂಡನೆಗೆ ಗುರಿಪಡಿಸಬೇಕೆಂದು  ನ್ಯಾಯಾಲಯದ ಮೊರೆಹೊಕ್ಕ.  ನ್ಯಾಯಾಧೀಶ   ನೀನೇಕೆ ನಗುತ್ತಿದ್ದೆ ಎಂದು ಕೇಳಲು  ನಾನಕರು ಮುಲ್ಲಾ ಮತ್ತು ನವಾಬರು ಪ್ರಾಥನೆ ಮಾಡುತ್ತಿರಲಿಲ್ಲ. ಅದೊಂದು ಸೋಗಾಗಿತ್ತು ಅದಕ್ಕೇ  ನಾನು ನಗುತ್ತಿದ್ದೆ ಎಂದರು  ನ್ಯಾಯಾಧೀಶ ಅದು ಹೇಗೆ ಹೇಳುತ್ತೀ  ಎಂದು ಕೇಳಲು ನಾನಕರು ನೀವು   ಅವರನ್ನೇ ಕರೆಸಿ ಕೇಳಬಹುದು ಎಂದರು.  ನ್ಯಾಯಾಧೀಶರು ಮುಲ್ಲಾ ಮತ್ತು ನವಾಬರನ್ನು ನ್ಯಾಯಾಲಯಕ್ಕೆ ಕರೆಸಿದರು.   ನ್ಯಾಯಾಧೀಶರು  ನಾನಕರನ್ನು ಕೇಳಿದರು - ನೋಡು, ಈಗ ಅವರೆದುರಿಗೆ ಹೇಳು ಪ್ರಾರ್ಥನೆ ಮಾಡದೆ ಅವರೇನು ಮಾಡುತ್ತಿದ್ದರು ಎಂಬುದನ್ನು . ಆಗ ನಾನಕರು  '  ಮುಲ್ಲಾನು   ಮನೆಯಲ್ಲಿದ್ದ     ಚಿಕ್ಕ ಕುದುರೆಮರಿ   ಪಕ್ಕದಲ್ಲಿದ್ದ ಬಾವಿಯಲ್ಲೇನಾದರು ಬಿದ್ದರೆ ಏನುಮಾಡುವುದು ಎಂದು ಯೋಚಿಸುತ್ತಿದ್ದರು . ಅಲ್ಲದೇ ನವಾಬರು  ಉತ್ತಮ ಕುದುರೆಯನ್ನು ಖರೀದಿಸಲು ತಮ್ಮ ಸೇವಕರನ್ನು ಕಾಬೂಲಿಗೆ ಕಳುಹಿಸಿದ್ದು ಇನ್ನೂ ಅವರ್ಯಾಕೆ  ಬಂದಿಲ್ಲ ಎಂದು ಯೋಚಿಸುತ್ತಿದ್ದರು.  ಅವರು ಪವಿತ್ರ ಖುರಾನನ್ನು ಹಿಡಿದು ನಾನು ಹೇಳಿದ್ದು ನಿಜವೋ ಸುಳ್ಳೋ  ಎಂಬುದನ್ನು ಹೇಳಲಿ  ಎಂದು ಹೇಳಿದರು.    ಇದನ್ನು ಕೇಳಿದ ಮುಲ್ಲಾ ಮತ್ತು ನವಾಬರಿಬ್ಬರೂ ಸ್ಥಂಭೀಭೂತರಾದರು. ಅವರು ನ್ಯಾಯಾಧೀಶರೆದುರು ನಿಜವನ್ನು ಒಪ್ಪಿಕೊಂಡರು. ನ್ಯಾಯಾಧೀಶರೂ  ನಾನಕರಿಂದ ಪ್ರಭಾವಿತರಾದರು. ಮನದಲ್ಲಿ ಬೇರೇನನ್ನೋ ಆಲೋಚಿಸುತ್ತಾ ಮೇಲ್ನೋಟಕ್ಕೆ ಪ್ರಾಥನೆ ಮಾಡುವುದಕ್ಕಿಂತ  ಅದನ್ನು ಮಾಡದಿರುವುದೇ ಮೇಲು ಎಂದು ಅಲ್ಲಿದ್ದ ಎಲ್ಲರಿಗೂ ಅರ್ಥವಾಗಿತ್ತು.

 ವಿದ್ಯಾರ್ಥಿಗಳು ಪತ್ರಿಕೆಗಳನ್ನು ಹೇಗೆ ಓದಬೇಕು?
ಪತ್ರಿಕೆಗಳನ್ನು  ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ಕರೆಯುತ್ತಾರೆ. ಅನೇಕ ಕಾರಣಗಳಿಂದ ಪತ್ರಿಕೆಗಳು  ಜೀವನದ ಅವಿಭಾಜ್ಯ ಅಂಗವಾಗಿದೆ.  ಸಾಮಾನ್ಯವಾಗಿ  ಅಬಾಲವೃದ್ಧರಾದಿಯಾಗಿ  ಎಲ್ಲರೂ  ತಮ್ಮತಮ್ಮದೇ ಕಾರಣಗಳಿಗಾಗಿ  ಪತ್ರಿಕೆಗಳನ್ನು ಓದುತ್ತಾರೆ.  ವಿದ್ಯಾರ್ಥಿಗಳಿಗಂತೂ  ಪತ್ರಿಕೆಯನ್ನು ಓದುವ ಹವ್ಯಾಸ ಅವರ ಶೈಕ್ಷಣಿಕ ಪ್ರಗತಿಗೆ  ಹೆಚ್ಚಿನ ಸಹಾಯಕಾರಿಯಾಗಿದೆ.  ಆದರೆ ಅವರು ಸಮಯಕಳೆಯಲು ದೊಡ್ಡವರು ಓದುವಂತೆ ಪತ್ರಿಕೆಯನ್ನು ಓದಬಾರದು. ಪತ್ರಿಕೆಯನ್ನು ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು  ನಿರ್ದಿಷ್ಟವಾದ ರೀತಿಯಲ್ಲಿ ಓದಬೇಕು.  
  ಮೊದಲನೆಯದಾಗಿ ಪತ್ರಿಕೆಗಳನ್ನು ತಮ್ಮ  ಭಾಷಾಕೌಶಲ್ಯವನ್ನು  ವೃದ್ಧಿಸಿಕೊಳ್ಲುವ ಉದ್ದೇಶದಿಂದ ಓದಬೇಕು. ವರದಿಗಳಲ್ಲಿ ಬರುವ ಹೊಸಪದಗಳ ಬಗ್ಗೆ ಹಾಗೂ ಭಾಷಾಶೈಲಿ, ವಾಕ್ಯರಚನೆ, ಇವುಗಳಮೇಲೆ ನಮ್ಮ ಗಮನವಿರಬೇಕು.
  ಎರಡನೆಯದಾಗಿ ಪ್ರಚಲಿತ ವಿದ್ಯಮಾನವನ್ನು  ತಿಳಿಯಲು   ಮತ್ತು ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪತ್ರಿಕೆಯನ್ನು ಓದಬೇಕು.  ಮುಖ್ಯವೆನಿಸಿದ್ದನ್ನು  ಬರೆದಿಟ್ಟುಕೊಳ್ಳುವ  ಹವ್ಯಾಸ ಮುಂದೆ  ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯಮಾಡುವುದು.    ಮೂರನೆಯದಾಗಿ  ಮನೋರಂಜನೆಗಾಗಿ  ಪತ್ರಿಕೆಯನ್ನು ಓದುವುದು ಎಲ್ಲರಿಗೂ ತಿಳಿದೇ ಇದೆ. ಓದುವ ಹವ್ಯಾಸವು ವಿದ್ಯಾರ್ಥಿಗಳನ್ನು ಬೇರೆ ಕೆಲವು ದುಶ್ಚಟಗಳಿಂದ ರಕ್ಷಿಸುವುದು.
  ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು  ಪತ್ರಿಕೆಗಳಲ್ಲಿ ಬರುವ ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಂಡರೆ    ಅಸೈನಮೆಂಟು ಪ್ರೊಜೆಕ್ಟುಗಳನ್ನು ಮಾಡಲು ಅನುಕೂಲವಾಗುವುದು. ಅಂತರ್ ಜಾಲದ ಮೊರೆಹೋಗಿ ವಿವರವನ್ನೂ ಚಿತ್ರವನ್ನೂ ಸಂಗ್ರಹಿಸಿ ಈ ಕೆಲಸವನ್ನು ಮಾಡುವುದಕ್ಕಿಂತ  ಪತ್ರಿಕೆಗಳಿಂದ ಸಂಗ್ರಹಿಸಿ ಮಾಡುವುದು ಹೆಚ್ಚು ಆಸಕ್ತಿದಾಯಕವ್ವಗಿರುತ್ತದೆ ಮತ್ತು ಹೆಚ್ಚು ಪ್ರಯೋಜನಕಾರಿಯೂ ಹೌದು.
 ಇಂದು ಬೇರೆಬೇರೆ ವಿಷಯಾಧಾರಿತ ಪತ್ರಿಕೆಗಳು ಲಭ್ಯವಿದೆ. ವಿದ್ಯಾರ್ಥಿಗಳು ತಮಗಿಷ್ಟವಾದ ಪತ್ರಿಕೆಗಳನ್ನು ಕೊಂಡು ಓದಬಹುದು. ಆಗ ಓದು ಇನ್ನೂ ಹೆಚ್ಚು ಪ್ರಯೋಜನಕಾರಿಯಾಗುವುದು.
ಓದಿ ಆದಮೇಲೆ ಪತ್ರಿಕೆಗಳನ್ನು ಬಿಸಾಕದೆ  ಸಂಗ್ರಹಿಸಿಟ್ಟು ಕೊಳ್ಳಬೇಕು ಅಥವಾ ನಮಗಿಷ್ಟವಾದ, ಮುಂದೆ ಉಪಯೋಗವಾಗಬಹುದು ಎಂದೆನಿಸುವ ಬರಹಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಬಿಡುಗಡೆಯಾಗುವ ಎಷ್ಟೋ ಪುಸ್ತಕಗಳು ಪತ್ರಿಕೆಗಳಲ್ಲಿ ಪ್ರಕಟವಾದ ಅಂಕಣಗಳ ಸಂಗ್ರಹವೇ ಆಗಿರುತ್ತದೆ ಎಂಬುದನ್ನು ಮರೆಯಬಾರದು. .