Wednesday, 29 September 2021


 

ಹಳೆಯದಾಯಿತು ಎಂದು, ಹರಿದುಹೋಯಿತು ಎಂದು

ಅಂಗಿಯ ಬಿಸುಟೆದ್ದು ಹೊರಟನೆ ದೂರ?

ಇಂವ ಮತ್ತೆಂದು ಮರಳಿ ಬಾರ.

ಬೋಳು ಮಂಡೆಯ ಮಾಡಿ, ಒದ್ದೆ ಬಟ್ಟೆಯನುಟ್ಟು

ಪಿಂಡ-ಖಾದ್ಯವನಿಟ್ಟು ಕರೆದರೂ

ಹಾಯ್ ಹಾಯ್ ಎಂದು ಕೂಗಿದರೂ 

ಮತ್ತೆಂದು ಮರಳಿ ಬಾರ.

ನೆನಪು ಮೂಟೆಯ ಹೊರಿಸಿ, ಋಣದ ನಿರ್ವಾತಕೆ ತಳ್ಳಿ

ತಿರುಗಿ ನೋಡದೆ ನಮ್ಮ,  ಹೋದ ದೂರ

ಮತ್ತೆಂದು ಮರಳಿ ಬಾರ.

ಇನ್ನೆಷ್ಟು ನಡೆಯುವುದು? ಅಂತ್ಯಗಾಣದ ದಾರಿ

ತುಸುದಣಿವನಾರಿಸಲು ಕುಳಿತನೆ?

ಕಾಣದಂತೆ ಮರೆಯಾದನೆ?

ಮರಳಿ ಬರುವೆಯಾ ಎಂದು ಕೇಳುವುದು ಹೇಗೆ?

ನೀನು ನನ್ನವನಲ್ಲ; ನಾನು ನಿನ್ನವನಲ್ಲ

ವಿಧಿ ನಿಯಮ ಮಾಡಿತ್ತು ಒಂದು

ನೀ ತಂದೆ ನಾ ನಿನ್ನ ಮಗನೆಂದು.

 ನನ್ನ ತಂದೆ ನೀನು

ನಿನ್ನ ಕೈ ಹಿಡಿದು ನಡೆದೆ ನಾನು. 

ನಡೆದು ನಡಿಗೆಯ ಕಲಿಸಿದೆ 

ನುಡಿದು ನುಡಿಗಳ ಕಲಿಸಿದೆ

ನಡೆನುಡಿಗಳ ನಡುವೆ ಅಂತರಕೊಟ್ಟು

ಮೌನದ ಬೀಜಗಳ ಬಿತ್ತಿದೆ.

ಅರ್ಥವಾದುದು ಅಷ್ಟು

ಅರ್ಥವಾಗದ್ದಷ್ಟು

ಅರ್ಥದ ಹಿಂಬೀಳದೆ ಬಂದಂತೆ ಬದುಕೆಂದೆ

ಪೂರ್ಣ ಅರ್ಥವಾದರೆ ಅದು ಬದುಕಾಗದು ಎಂದೆ.

ಹುಡುಕುತ್ತ ತಡಕುತ್ತ ಸಾಗುವುದೇ ಬದುಕು

ನನಗೂ ನಿನಗೂ ಎಲ್ಲರಿಗೂ ಉಳಿದದಾರಿ

    -ಗಣೇಶ ಹೆಗಡೆ, ಮಡಿಕೇರಿ

             












No comments:

Post a Comment