Wednesday, 23 March 2016



*ಸ್ತುತಿಸಿದಷ್ಟು ಮುಗಿಯದಾಗಿದೆ*
ಜಯತು ಜಯ ಜಯ ಭಾರತಿ
ಜಯತು ಜಯ ಜಯ ಭಾರತಿ
ಸ್ತುತಿಸಿದಷ್ಟು ಮುಗಿಯದಾಗಿದೆ
ನಿನ್ನ ಅನುಪಮ ಕೀರುತಿ.//
ದೇವಗಂಗೆ ಧರೆಗೆ ಇಳಿದು
ನಿನ್ನ ನೆಲದಲಿ ಹರಿದಳು
ಹಸಿರ ಹಾಸಿ ಹಸಿವ ನೀಗಿ
ನಿನ್ನ ಮಕ್ಕಳ ಪೊರೆದಳು//
ಆ ಹಿಮಾಲಯ ಮೇಲಕೆದ್ದು
ಮುಕುಟದಂತೆ ಹೊಳೆದಿದೆ
ಮೌನಗಿರಿಯ ಮಡಿಲಿನಲ್ಲಿ
ಋಷಿಪರಂಪರೆ ಬೆಳೆದಿದೆ//
ವ್ಯಾಸ ವಾಲ್ಮೀಕಿ ಆದಿಯಾಗಿ
ಕವಿಗಳೆಲ್ಲ ಬರೆದಿಹ
ಕಾವ್ಯರಾಶಿಯ ಭಾರದಿಂದ
ಆದಿಶೇಷನೆ ನಲುಗಿಹ//
   ಎನಿತು ಹೆಮ್ಮೆಯ ಮಕ್ಕಳು
ನಿನ್ನ ಮಡಿಲಲಿ ನಲಿದರು
ಕಾವ್ಯ ನಾಟ್ಯ ಶಿಲ್ಪಿ ಗೀತ
ನಾಡ ಸಂಸ್ಕೃತಿ ಬೆಳೆದರು//
ವಿಜಯ ಯಾತ್ರೆ ಮುಗಿಸಿಬಂದು
ನರೇಂದ್ರ ಧೂಳಲಿ ಮಿಂದನು
ದೈವ ಸಾಕ್ಷಾತ್ಕಾರಕೀನೆಲ
ಕೊನೆಯ ಮೆಟ್ಟಿಲು ಎಂದನು.//
ಆದಿಶಕ್ತಿಯ ಜಗನ್ಮಾತೆಯ
ರೂಪವೇ ಈ ಭರತಮಾತೆ 
ವೇದ ವೇದಾಂತಗಳ ಸಾರವೇ
ಕೃಷ್ಣ ಹಾಡಿದ ಗೀತೆ//

ಭಾವ ಸ್ವೀಕಾರ
ಚಿತ್ರ ಹಾಳೆಯಲ್ಲ
ಚಿತ್ರ ಬಣ್ಣವಲ್ಲ
ಚಿತ್ರ ಕುಂಚವಲ್ಲ
ಬಿಡಿಸಿದ ಕೈಗಳಲ್ಲ
ಚಿತ್ರ ಚಿತ್ತವಲ್ಲ
ಚಿತ್ರ ಮೊತ್ತವಲ್ಲ
ಚಿತ್ರ ಸ್ತಬ್ಧವಲ್ಲ
ಚಿತ್ರದೊಳಗಿನ ಅರ್ಥವಲ್ಲ
ಚಿತ್ರ ತೆರೆದೆದೆಯ ಭಾವಸ್ವೀಕಾರ!
      
  *ಸೂರ್ಯನಂತೆ!*
ಕೆಲವೊಮ್ಮೆ ಸೂರ್ಯ ಕಾಣುವನು ಉರಿವಂತೆ
ಕೆಲವೊಮ್ಮೆ ಸೂರ್ಯ ಬೆಳಕಂತೆ!
ದಿನದ ಕೊನೆ ಚರಣದಲಿ ಸೋತವನಂತೆ
ನಸುಕಿನಲಿ ತೇಜಃ ಪುಂಜದಂತೆ  //
ಮರುಭೂಮಿಯಲಿ ಜನಕೆ ಶಾಪ  ಕೊಟ್ಟವನಂತೆ
ಮುಗಿಲನೋಡುವ ಕಣ್ಣೊಳು ದೀಪವಿಟ್ಟವನಂತೆ
ಅಕ್ಷಯ ಪಾತ್ರೆಯೊಳು ಆಹಾರವಿತ್ತು
ದ್ರೌಪದಿಯ ಉಡಿಯೊಳಗೆ ಇಟ್ಟವನಂತೆ //
ಬೆಳಕನ್ನು ಚೆಲ್ಲಿ ಬಿಂಬವಾದಂತೆ
ಗೆಲುವಿಗೆ ತೋರುಗಂಬವಾದಂತೆ
ನಿದ್ದೆಗೆ ಮದ್ದು ತಾನಾದಂತೆ
ಆಯಾಸದಲಿ ಕಣ್ರೆಪ್ಪೆ ಒತ್ತಿದಂತೆ//
ಮೋಡಕೆ ಹೆದರಿ ಓಡುವನಂತೆ
ಅಂಚಿಗೆ ಬಂದು ಇಣುಕುವನಂತೆ
ಕಣ್ಣುಮುಚ್ಚಾಲೆ ಆಟದಿ ಸೋತು
ಗೆಲ್ಲುವ ತಂದೆಯ ತೆರನಂತೆ//
ಅರಿಯಲಾಗದ ಅವನ ಬಗೆಯ ಬೆಳಕಲ್ಲಿ
ಓಡಾಡಿದವು  ಬಹು ಅಂತೆಕಂತೆ
ಮುಟ್ಟಲಾರೆವು ಅವನ ಮೆಟ್ಟಲಾರೆವು ಅವನ
ಒಪ್ಪಿಕೊಂಡೆವು ಅವನ ದೇವನಂತೆ!
  
           * ತೋರ್ಪಡಿಕೆ.*
ಜ್ಯೋತಿ ಬೆಳಗುತ್ತಿರಲು ಮನೆಯೊಳಗೆ,  ಅದನು
ನೆರೆಹೊರೆಗೆ ತೋರಿಸುವ ತುರ್ತೆಕೆ?
ಬೆಳಕು ತಾನಾಗೇ ಹೊರಸುಸುವುದು!
ಒಳಗೆ ಕತ್ತಲೆಯಿದ್ದರೂ  ಬೆಳಕಿದೆಯೆಂದು
ಬಿಂಬಿಸಲು ಬೇಕು ತೋರ್ಪಡಿಕೆ.
   
      *ಕೈಗೆ ಸಿಗದ  ನಾಳೆ*
ಹೆಜ್ಜೆ ಮುಂದಿಟ್ಟರೆ ನಾಳೆ. ಹತ್ತಿರದಲ್ಲೇ ಇದೆ.
ಆದರೂ ಕೈಗೆ ಅದು ಸಿಗದು.
ಹಿಡಿಯ ಹೊರಟ ನಮ್ಮ ಬಗೆ ನೋಡಿ
ದೈವ ತಾ ನಗದೆ ಇರದು.//
ಮೆಲ್ಲಮೆಲ್ಲನೆ ಹೆಜ್ಜೆಯಿಡಲು ಅವಳು
ತಾ ಸಾಗುವಳು ಮಂದಗಮನೆಯಾಗಿ
ಹಿಡಿವ ಹಮ್ಮಿನಲಿ ಜೋರಾಗಿ ಓಡಿದರೆ
ತಾನೂ  ಓಡುವಳು ಸ್ಮಿತವದನೆಯಾಗಿ//
ದೂರವೆಂದರೆ ಅಷ್ಟು ದೂರವಿಲ್ಲ ಆಕೆ
ಮರೆತು ನನ್ನಷ್ಟಕೆ ಇರುವುದೆಂತು?
ಬಳಿಯಲ್ಲಿ ಇದ್ದರೂ ಬಳಸಲಾಗದ ಇವಳು
ಮನಕೆ ಹಿಡಿಸಿದಳೊಂದು  ಭ್ರಾಂತು//
ಮನವನಾಚೆಗೆ ಸೆಳೆದುಕೊಂಡಿರುವಳಾಕೆ
 ಮಾಡಿರುವಳು ಹೆಜ್ಜೆಯನು ಒಂಟಿ.
ಇಡುವ ಹೆಜ್ಜೆಯ ಅಡಿಗೆ ನೆಲವೆ ಸಿಗದಿರಲು
ತೆಲುತಿಹರೆಲ್ಲ ಭ್ರಮೆಗೆ ಅಂಟಿ//

       ಬೇರು 
 
ಮರೆತು ಹೋದವೆ   ಮರಗಳ ಬೇರು
ಬಗೆಬಗೆ ಹೂವರಳಿರಲು
ಹಸಿರಿನ ಚಿಗುರೆಲೆ ಬೆಳಕಲಿ ಮಿಂದು
ಗಾಳಿಗೆ ಮೈಯೊಡ್ದಿರಲು //
ಹಣ್ಣಿನ ರುಚಿಯು ಜಗಕೇ ಮೆಚ್ಚು
ಬೇರಿನ ಕಷ್ಟವು ಗೊತ್ತೇ?
ಹನಿಹನಿ ನೀರನು ಅರಸುತ  ತಂದು
ಮರವನ್ನು ತಂಪಲಿ ಇಟ್ಟೆ .//
ಬೇರಿದು ಮರಗಳ ಕಾಲಿನ ಹಾಗೆ
ಊರಿದೆ ಮಣ್ಣಲಿ ದೃಢವಾಗಿ
ಮಳೆಗಾಳಿಗೆ ಮರ ಅಂಜದೆ ನಿಂತಿದೆ
ಬಲವಿದೆ ಮಣ್ಣಲಿ ಮರೆಯಾಗಿ //
ಕಾಣದ ಜಗದ ಹಿಂದಿದೆ ಸತ್ಯ
ಬೆಳಕಿಗೆ ಬಾರದ ಮನಸು
ಹೂವರಳಿಸಿ ನೀಡುತ ಜಗಕೆ
ಧನ್ಯವು  ತಾಯಿಯ ಮನಸು//
     
 
     ನಿನ್ನೆದುರು 
ಹಾಡಲಾರೆವು ಮೊದಲು ನಿನ್ನೆದುರು ನಾವು
ಗಿಳಿ ಕೋಗಿಲೆಯ ಕೊರಳು ಮಧುರವಿರಲು.
ಪಂಚಮಕೆ ಕೋಗಿಲೆ ಷಡ್ಜಕ್ಕೆ ಜಾತಕ
ಸಪ್ತಸ್ವರ ಮೊದಲಿಗೆ ನಿಗದಿಯಿರಲು //
ಈಜಲಾರೆವು ಮೀನಿನಂತೆ ನಾವು
ಹೆಜ್ಜೆ ಮೂಡಿಸದೊಂದು ಜಾಣ್ಮೆಯಿರಲು
ಮೇಘ ಮೂಡಲು ನೃತ್ಯಾಂಗಣವು ನೆಲವು
ಗೆಜ್ಜೆಯಿಲ್ಲದೆ ಹೆಜ್ಜೆ ಹಾಕಿ ನವಿಲು.//
ಅನಂತ ಆಕಾಶ ತೆರಕೊಂಡ ಮನಸು
ರೆಕ್ಕೆ ಮೂಡೀತೇ ಕನಸಿಗೆ?
ನಾವೇ ನೇಯ್ದ ಬಲೆಗೆ ಸಿಲುಕಿದೆ ಕಾಲು
ಬಲವಿದೆಯೇ ಬಡವನ ಮನಸಿಗೆ? //

ಮೇಲೆ ಆಗಸ ನೀಲಿ . . 
ಮೇಲೆ ಆಗಸ ನೀಲಿ ಹುಟ್ಟಿಸಿದ ಭ್ರಮೆಯೇ?
ಮುಟ್ಟಲಾಗದು ಕೈಯ ಬೆರಳಿನಿಂದ
ನೋಟಕ್ಕೆ ಸಂಧಿಸಿ ಕೈಗಳನು ಬಂಧಿಸಿ
ದೂರದಲಿ ನಿಂತಿದೆ ಗರ್ವದಿಂದ //
ಉರಿಯುವನು ರವಿಯು ಕೋಟಿ  ಮೈಲಿಗಳಾಚೆ
ಜೀವ ಹಣತೆಯ ಮಿಣುಕು ಈ ಇಳೆಯಲಿ
ಉಳಿದಾರೆ ಅವನ ಬಳಿಸಾರೆ ಹೊರಡೆ
ಬೆಳಕ ಮೀವ ಧನ್ಯತೆಯುಳಿಯಲಿ //
ಅಗಣಿತದ ಉಡುಗಣಕೆ ಆಗಸವೇ ತಾಣ
ಎಣಿಸಬಹುದಾವ ಗುಣಕದಲ್ಲಿ?
ಕರಗಬಹುದು ನಮ್ಮಹಮಿಕೆಯ ಮಂಜು
ರಾತ್ರಿ ನೀರವ ನಭದ ನೋಟದಲ್ಲಿ.//

    ಮುಗಿಯದ ಹಾಡು
ಮುಗಿಯದೆಂದಿಗು ಹಾಡು  ನದಿಗಳದು ನೋಡು
ಹರಿಯುತ್ತಲಿದೆ ಯುಗದ ಆದಿಯಿಂದ
ಮನೆಯೊಂದು ಸಿಗಬಹುದೇ ವಿರಮಿಸಲು ಅಲ್ಲಿ
ಬಿಡುಗಡೆಯ ಪಯಣದ ಹಾದಿಯಿಂದ?//
ನಿಲ್ಲದೆ ಸಾಗಿದೆ ಗ್ರಹತಾರೆಗಳ ಆಟ
 
ಬಿಟ್ಟ ಬುಗರಿಯ ತೆರದಿ ನಭದಿ.
ಗೊತ್ತುಗುರಿಯಾವುದೋ ? ಗತಿಶೀಲ ಬ್ರಹ್ಮಾಂಡ
ಬಾರದಳವಿಗೆ ನರನು ಸೋತ ಕ್ಷಣದಿ. //
ಹುಟ್ಟು ಸಾವಿಗೆ ಹೊರತಾದ ಕಾಲದ ಪಯಣ
ತೆಕ್ಕೆಗೊಳಪಟ್ಟಿದೆ ಜೀವ ಸೃಷ್ಟಿ.
ಮುಗಿಯದ ಹಾಡು  ಅವನದೆಂದರೆ ಸರಿಯೋ
ಹಸುಳೆಯಂದದಿ ಚಪ್ಪಾಳೆ ತಟ್ಟಿ.//

             
   ಎನಗಿರಲಿ 
ರವಿಯು ಜಗಕಿರಲಿ ಎನಗೆ ಕಿರುಹಣತೆಯೆ ಸಾಕು
ಎನ್ನ ಕಾಲ್ಬುಡವನ್ನು ಬೆಳಗಲು
ನಾಲ್ಕಾರು ಹೆಜ್ಜೆಗಳ ಕಿರುಪಯಣ ನನ್ನದು
ರಾತ್ರಿ ಹಗಲಿಗೆ ಬಂದು ಕೂಡಲು .//
ಹುಣ್ಣಿಮೆಯ ತಂಗದಿರ ತಂಪನ್ನು ನೀಡುವನು
ಚೆಲ್ಲುವನು  ಹಾಲಂತ ಬೆಳದಿಂಗಳು.
ಹಸುಕಂದ ಎನ್ನ ಮನೆಯಂಗಳದಿ ಓಡಾಡೆ
ಸ್ವರ್ಗ ಸುಖ ಮನದುಂಬಿ ಬರಲು //
ದೂರದಾಗಸದಲ್ಲಿ ಹರಡಿಬಿದ್ದಿವೆ ಹೊಳೆವ
ಅಗಣಿತದ ಕೋಟಿ ತಾರೆಗಳು
ಪ್ರಶ್ನೆ ಕೇಳುತ ಕೈಕಾಲಬಳಿ ಸುಳಿವ
ಪುಟ್ಟ ಮಕ್ಕಳ ದಿಟ್ಟ ಕಂಗಳು.//
   ಮರದ ಬಯಕೆ 
ಎತ್ತರೆತ್ತರ ಬೆಳೆದು ಮುಟ್ಟಲಾಗದು ಬಾನು
ಕನಸೊಂದ ತುಂಬಿತು ಬೀಜದೊಳಗೆ
ಹಸಿರಿಂದ ನೆಲವ ಮುಚ್ಚಿದ ಹಾಗೆ ಬಾನಿಗೂ
ಪಸರಿಸುವ ಹುಚ್ಚು ಮರದೊಳಗೆ
ಹಕ್ಕಿಯಾಸರೆ ಪಡೆದು ಮರದ ಕನಸನು ಹೊತ್ತು
ಬಾನಿನ ತುಂಬೆಲ್ಲ ಹಾರಾಡಿತು
ಮುಟ್ಟಲಾಗದೆ ಸೋತು ಮರಳಿ ಗೂಡಿಗೆ ಬಂತು
ಅಳೆಯಲಾಗದು  ಅನಂತವನು ಎಂದಿತು
ಆಳ ಆಳಕೆ ಇಳಿದು ಪಾತಾಳ ತುಳಿವ
ಬಯಕೆ ಬೇರಾಗಿ ಇಳಿಯಿತೇ ಕೆಳಗೆ?
ನೀರಸೆಲೆ ಪಾತಾಳವದೆ ಎಂದು ತಿಳಿದು
ಹೊತ್ತು ತಂದಿತೆ ರೆಂಬೆ ಕೊಂಬೆಗಳಿಗೆ?

   ಬಾಲ್ಯದ ನೆನಪು. 
ಕಳೆದು ಹೋಗಿದೆ ಬಾಲ್ಯ, ನಮ್ಮ ಅಂದಿನ ಸುಖವು
ಮರಳಿಬಾರದು ಇನ್ನು ಎಂದೆಂದಿಗೂ
ಕಾಲಧರ್ಮದ  ಹೆಸರಲಿ ವಂಚಿಸಿದೆ ಪ್ರಕೃತಿ
ಆದರೂ ಉಳಿಸಿದೆ ಸವಿ ನೆನಪನು. //
ನಾ ನಡೆದ ಕಲ್ಲು ಮುಳ್ಳಿನ ಹಾದಿ ಬದಿಯಲಿ
ಅರಳಿದ್ದವಂದು ಬಗೆಬಗೆಯ ಹೂವು
ಇಂದು ಸುಗಮದ ಹಾದಿ ಪಕ್ಕದಲಿ ನೋಡೆ
ಒಟ್ಟಾಗಿ ಎತ್ತರಕೆ ಬೆಳೆದ ಮಹಲು.//
ಕೌತುಕದ ಕಣ್ಣಿಗಂದು ನೋಡುವ ತವಕ
ಬೆರಗು ಬೆಲ್ಲದ ಜೊತೆ ಬೇವಿಗೂ
ಮೊಗ್ಗು ಹೂವಾಗರಳೆ ಎಲ್ಲಿದ್ದವೋ ಏನೋ
ದುಂಬಿಗಳ ಮೆರವಣಿಗೆ ಅಲ್ಲಿಗೂ//

    ಸಣ್ಣವನು ನಾನೆಂದು ... 
ಸಣ್ಣವನು ನಾನೆಂದು ಗೊಣಗದಿರು ಮನವೇ
ಗುಣಗಳಡಗಿದೆ ಸಣ್ಣ ಬೀಜದೊಳಗೆ
ಮಣ್ಣಕಣಗಳೆ  ಸೇರಿ ಆಗಿದೆ ಗಿರಿಬೆಟ್ಟ
ನೀರಹನಿಗಳ ಮೊತ್ತ ಶರಧಿಯೊಳಗೆ.//
ಬಾನಿನೆತ್ತರ ಬೆಳೆವ ಮರದೆದುರು ಹುಲ್ಲು
ಕಡ್ಡಿ ಕ್ರಿಮಿಕೀಟಗಳು ನೆಲದ ಬಳಿಗೆ
ಮಣ್ಣಿಗುಣಿಸನು ಬಿಡದೆ ಈವ ಅಕ್ಷಯಪಾತ್ರೆ
ಬರಿನೆಲದಿ ಮೂಡೀತೆ ಹಸಿರು ಮೊಳಕೆ?//
ಹೆಜ್ಜೆಯನು ಹಾಕದೆ ಗೆಜ್ಜೆ ರಿಂಗಣಿಸದೆ
ರಂಗದೊಳು ಮೂಡೀತೆ ನಾಟ್ಯಕಲೆಯು?
ಭಾವಭಂಗಿಗೆ ಕಣ್ಣೋಟ ಹಿರಿದಾದರೂ
ಕಾಲಕಸುವೆ ಕುಣಿವ ಕಳೆಯ ನೆಲೆಯು //
ನಾಂದಿಹಾಡುವ ಹೆಜ್ಜೆ ದೂರದೂರಿಗೆ ಪಯಣ
ಕಿರಿದೆಂದು ಕುಳಿತರೆ ತಲುಪಬಹುದೇ?
ಅಕ್ಕರದ ಕಿರುಗಾತ್ರ ಲೆಕ್ಕಿಸದೆ ಹೋದರೆ
ಕಾವ್ಯ ಹೊತ್ತಗೆರೂಪ ಪಡೆಯಬಹುದೇ?//

     ತೆರೆದುಕೊಳ್ಳದೆ .... 
ನಿನ್ನೊಳಗಿಳಿಯದೆ ಬಾನಿನ ಹರಹು
ಅರಿಯಲಾರೆ ನೀನದನು
ದೂರಕೆ ನಿಂತರೆ ದೂರವೆ ಉಳಿವುದು
ತೆರೆದೆದೆಯಾಗದೆ ನೀನು//
 
ಅರಳಿದ ಹೂವಿನ ಬಗೆಬಗೆ ಬಣ್ಣ
ನೀಡಿದೆ ಕಣ್ಣಿಗೆ ತಂಪು
ಅರಳದೆ ನಿನ್ನೆದೆ ಮೊಗ್ಗಾಗಿರಲು
ಉಳಿಯದು ನಿನ್ನೊಳಗಿಂಪು//
ಹಕ್ಕಿಯ ಹಾಗೆ ಬಿಚ್ಚು ರೆಕ್ಕೆಯನು
ಹಾರಿ ತೇಲಿ ಹೋಗು
ದಿಕ್ಕುಗಳಿಲ್ಲದ ಆಗಸದೊಳು ನೀ
ಸೇರಿ ಕಾಣದಾಗು//
ಮೀನಂತಾಗದೆ ಅರಿಯಲಾರೆ ನೀ
ನೀರಿನ ಒಳಗಣ ಚೆಲುವ
ನಾನಳಿದಾ ಕ್ಷಣ ತಿಳಿವಿಗೆ ನಾಂದಿ
ಹರಿಸಬೇಕು ಒಲವ//

   
.  ನಿನ್ನ ಸನಿಹದಿ..  
ಅಂತರವನುಳಿಸಿ ಒಲುಮೆ ಬೆಳೆಯುವುದೆಂತು
ಬಾ ಬಳಿಗೆ ಹೆಚ್ಚಲ್ಲ ಮಾತೆರಡೆ ಸಾಕು
ಹರಡುವುದು ಹೂನವಿರು ಭಾವದ ಶ್ರೀಗಂಧ
ನಿನ್ನ ಸನಿಹದಿ ಕೆಲ ಕ್ಷಣಗಳಿರಬೇಕು //
ದೂರದಲಿ ನಿಂತು ಆಗಸದೆಡೆಗೆ ಕೈ ಮಾಡಿ
ಹೊಳೆವ ತಾರೆಯ ಮೀನುಗ ತೋರಬೇಡ
ಬಳಿಬಂದು ನಿಲ್ಲಲು ನಿನ್ನ ಕಣ್ಣಿನ ಹೊಳಪು
ಉಡುಗಣಕು ಮಿಗಿಲೆಂದು ಮರೆಯಬೇಡ //
ಬಾನಾಡಿಗಳ ಹಾಗೆ ಎತ್ತರೆತ್ತರ ಏರಿ
ಆಗಸದಿ ತೇಲುವುದು ದೂರದಾ ಮಾತು
ಜೋಕಾಲಿಯಲಿ ಕೂತು ಸಂತಸದಿ ನಿನ್ನೆದುರು
ಹಿಂದೆ ಮುಂದೆಂದೆರಡು ಜೀಕಾಟ ಸಾಕು//
   
ಹೆಮ್ಮರದ ನೆರಳು 
ಹೆಮ್ಮೆ ಪಡದಿರು ಓ ಹೆಮ್ಮರವೇ ನೀನು
ಬೆಳೆದಿರುವೆನೆಂದು ಬೆಳೆಬೆಳೆದಿರುವೆನೆಂದು
ಮರೆಯದಿರು ನೀ ಬೀಜವಾಗಿರುವಂದು
ಯಾವ ಪುಣ್ಯದ ಕೈಗಳು ನಿನ್ನ
ಮಣ್ಣ ತೆಕ್ಕೆಗೆ ಒಪ್ಪಿಸಿದವಂದು //
ಮೇಲು ಮಣ್ಣಿನ ತೆಳು ಪದರ ಹಾಸಿ
ಬೊಗಸೆ ನೀರನು ಹನಿಸಿ
ನಿನ್ನೊಳಗಿದ್ದ ಮೊಳಕೆಯ ಹಸಿ ಮಾಡಿದವು
ತಡೆದವದ ಮಳೆಗೆ ಕೊಳೆತುಹೋಗದಂತೆ
ಹಿಡಿದು ಅದ ಸೆಳೆತಕ್ಕೆ  ಕೊಚ್ಚಿಹೋಗದಂತೆ.
ಅಂದು ನೀ ಶುದ್ಧ ಪರಾವಲಂಬಿ
ಪುಟ್ಟ  ಪರಪುಟ್ಟ
ನೀರ ಸೆಲೆ ಹುಡುಕುವ ಬೇರುಗಳೇ ಇಲ್ಲ
 
ಬೆಳಕಿಗೆ ಮೈ ಒಡ್ಡಲು  ಎಲೆಗಳೇ ಇಲ್ಲ.
ಬಿಸಿಲುರಿಗೆ ಬಾಡದಿರಲೆಂದು ತರಗೆಲೆಗಳೆ
ಮರೆಯ ಮಾಡಿ ಮೇಲ್ಬರುವಂತೆ ಮಾಡಿದವು
ಅಕ್ಕ ಪಕ್ಕದ ಹುಲ್ಲು ಗಿಡಗಂಟಿ
ದಾರಿ ನೀಡಿ ಆಗಸವ ತೋರಿದವು
ಬೆಳೆ ಎತ್ತರಕೆ ಬೆಳೆ
ಮೇಲೆ ನೀಲಾಕಾಶ
ಮಿತಿಯಿಲ್ಲವದಕೆ
ನಿನ್ನಂತರಂಗಕೆ ಮಂಗಳವ ಕೋರಿದವು
ನಿನ್ನೊಳಗಿನ ಕನಸಿಗೆ  ನೀರ ಹನಿಸಿದವು .
ಇಂದು ನೀ ಗಟ್ಟಿ ಬೆಳೆದಿರುವೆ
ದಟ್ಟನೆಯ ನೆರಳ ಹರಡಿರುವೆ
 
ಆ ತಂಪಿನಲಿ ಬೀಜ ಮೊಳಕೆಯೊಡೆದು
ಸಸಿಯಾಗಬಹುದು ಹಸಿಯಾಗಿರಬಹುದು
ಯೋಚಿಸಿ ನೋಡು
ನಿನ್ನ ನೇರಳೆ ಅವಕೆ ಮಿತ್ರ
ನಿನ್ನ ನೇರಳೆ ಅವಕೆ ಶತ್ರು
ಇನ್ನೊಂದು ಹೆಮ್ಮರ ಬೆಳೆಯಲಾರದು
ನಿನ್ನ ಮಗ್ಗುಲಲಿ
ನೆನಪಿಡು, ಹೆಮ್ಮರ ಉರುಳುವುದು ಒಂದು ದಿನ
ಬಿರುಗಾಳಿ ಬೀಸುವುದು ಸಹಜ ಧರ್ಮ.
ನೀ ಹಿಡಿದು ನಿಂತಿರುವೆ ಮಣ್ಣ ಮೇಲ್ಪದರ
ನೆಚ್ಚದಿರು, ಬದಲಾವಣೆ ನೆಲದ ಮರ್ಮ.
ಕಾಯುವವು ಹೆಮ್ಮರದ ಬಯಕೆಯಲಿ ಸಸಿಗಳು
ಮುಸಿ ಮುಸಿ ನಗುವವು ಹಸಿರ ಹುಲ್ಲುಗಳು.
    ಹೀಗೇಕೆ.....?  
ಕಟ್ಟಿ ಗೂಡನು ಮರದಿ
ಹೆಕ್ಕಿ ಕಾಳನು ನೆಲದಿ
ಹಕ್ಕಿ ಹಾರುವುದೇಕೆ ಆಗಸದಲಿ?
ಕತ್ತಲೆಯು ತುಂಬಿರುವ
ದಾರಿಯನು ಬೆಳಗದೆ
ಚುಕ್ಕಿ ಹರಡಿದೆಯೇಕೆ ದೂರದಲ್ಲಿ?
ಬತ್ತಿ ತಾನುರಿದುರಿದು
ಸುತ್ತ ಕತ್ತಲೆ ಹರಿದು
ಉಳಿಸಿಹುದು ಏಕದನು ಕಾಲ್ಬುಡದಲಿ?
ಕಾಯಿ ಹಣ್ಣಾಗುತಲಿ
ಬಣ್ಣದಲಿ ಹೊಳೆಯುವುದು
ಕಾಯ ಹಣ್ಣಾಗೆ ಸುಕ್ಕೇಕೆ ಮುಖದಿ?
ಉಕ್ಕಿ ಹೆಚ್ಚಾಗಲು ಸಹಜ
ಪಕ್ಕದಲಿ ಚೆಲ್ಲುವುದು
ಬಿಕ್ಕಲೇಕೆ ಚಿಂತೆ  ಎದೆಭಾರದಿ?
ಅರೆಜ್ಞಾನಿ ತಿಳಿದಂತೆ
ಮಾತನಾಡುತಲಿರುವ
ಅರಿವು ಹೆಚ್ಚಾಗೆ ಮಾತೇಕೆ ಸೋಲುವುದು?
ಬುದ್ಧಿ ಅರಿಯದೆ ಇರಲು
ಭಾವಕದು ಗೋಚರ
ಭಾವ ಬಿಂಬಿಸಲೇಕೆ ಭಾಷೆ ಸೋಲುವುದು?
ಕನಸಲ್ಲಿ ಮೂಡದ
ಒಂದನುಮಾನ ನಿಜದಲ್ಲಿ
ನಿಜವೇಕೆ ಕನಸಂತೆ ಮನಮುಟ್ಟದು?

   ಏಕೆ ಹೇಳಿ?
 
ಪಡೆಯಲಾರೆ ನೀನು ಬಯಸಿದುತ್ತರವ
ಹೂವೇಕೆ ಅರಳುವುದು ಎಂದು ಕೇಳಿ
ಬಣ್ಣಬಣ್ಣದಿ  ಅರಳಿ ಕಣ್ಣಿಗಂದವನೀಡಿ
ತಣ್ಣಗಿರುವವು  ಏಕೆ ಎಂದು ಕೇಳಿ //
ಬರಿದೆ ಬರುವನೆ ಸೂರ್ಯ ಜಗವ ಬೆಳಗಲು ತಾ
ತಿರುಗಿ ಪಡೆಯುವುದೇನು ಎಂದು ಕೇಳಿ
ಹರಡಿ ಹಾಲ್ಬೆಳದಿಂಗಳನು ತಂಗದಿರ
ಇರುಳ ತಮವನು ಕಳೆವನೇಕೆ ಹೇಳಿ //
ಹುಟ್ಟಿ ಕಿರುತೊರೆಯಾಗಿ ಹರಿವೆ ನದಿಯಾಗಿ
ಹಾದಿ ಹಸಿರನುಗೊಳಿಸಿ ನೀ ಪಡೆವುದೇನು?
ಕೂಡಿ ಕಳೆಯುವ ಲೆಕ್ಕ ಪ್ರಕೃತಿಯಲಿ ಇಲ್ಲ
ಕಳೆದುಹೋಗಿಹನೊಂದು  ಭ್ರಮೆಯಲ್ಲಿ ನರನು. // 

    ಕರೆದರೆ ಬರಬಹುದೇ?
ಒಳಗೆ ಕರೆವೆನು ಆ ಸೂರ್ಯಚಂದ್ರನನು
ಇರಬಹುದೇ ಎನ್ನೆದೆಯು ಬಾನಗಲಕೆ ?
ಅರಳೆಂದು ಬೇಡುವೆನು ಹೂಗಿಡಗಳನ್ನು
ಬರಬಹುದೆ ದುಂಬಿಗಳು  ಎದೆತೋಟಕೆ ?//
ಕೊಳವಾಗದೆ ಒಳಗೆ ಅರಳುವುದೆ ಕಮಲ?
ಇರಲಡಿಗೆ ಗೊಚ್ಚೆ  ಮೇಲೆ ತಿಳಿ ಭಾವ
ಉರಿಯದೆ ಧೂಪ ಹರಡದೆಂದಿಗು  ಗಂಧ
 
ಅರಳಲಾರದು ಎದೆ ಮಿಡಿಯದೆ ನೋವ. //
ಹುಲ್ಲಿರಲಿ, ಹೂವಿನೆಸಳಿರಲಿ ಬೆಳಗಿನಲಿ
ಮಂಜುಕರಗದೆ  ಮೂಡದೊಂದು ಇಬ್ಬನಿ ಅಲ್ಲಿ
ನನ್ನ ಹಮ್ಮಿನ ಭಾವ ನಿನ್ನ ಕಿರಣಕೆ ಕರಗಿ
ದಂದು ನಾ ನಿನ್ನ ಕರೆವೆನು ಅಲ್ಲಿ ಎದೆಯಲ್ಲಿ //
         
  ಹಿರಿಮೆ ನಿಂತನೀರು 
 
ಮತ್ತೆ ಬರುವೆನು ಎಂದು  ಹೇಳಿ ಹೊರಟಿತು ತೊರೆಯು
ಗಿರಿಯಿಂದ ಇಳಿದಿಳಿದು ಬಯಲಿಗೆ.
ಹರಿದಂತೆ ಹಾದಿಬದಿ ಹಸಿರ ಉಕ್ಕಿಸಿ ಹೂವ
ಅರಳಿಸಿ ನಗು ತಂತು ಬದುಕಿಗೆ.//
ದಾರಿ ಹೇಗೇ ಇರಲಿ, ಏರು ತಗ್ಗೇ ಬರಲಿ,
ಕಲ್ಲ ಕೊರಕಿನಲಿ ನಡುವೆ ಸಾಗಿ.
ಗುರಿಯೊಂದೆ, ಸಾಗರವ ಸೇರುವದೆ  ಹಂಬಲ
ದಣಿವರಿಯದೆ ಪಯಣದಲ್ಲಿ //
ಸೇರಿ ಸಾಗರನ ಎದೆಹರವಿನಲಿ ಒಂದಾಗಿ
ಗುರಿಸೇರಿದ ಧನ್ಯ ಮನಸು.
ಆಗಸಕೆ ಎದೆತೆರೆದು ತೆರಕೊಂಡ ವೈಶಾಲ್ಯ
ಸಾಕಾರಗೊಂಡ ಕನಸು.//
ಅದೇ ಆಳ, ಅದೇ ಅಗಲ ಹಿರಿಮೆ ನಿಂತನೀರು
ಚಲನೆಯೇ  ಇಲ್ಲದಿರಲೇನು ಚಂದ?
ಅರಿವಾಗದಂತೆ ಆವಿಯಾಗಿ ನೀರು
 
ಮೇಲಕೇರಿತು ಬಿಡಿಸಿ ಬಂಧ.//
ತವರೂರ ಬಾಗಿಲಿಗೆ ಮರಳಿ ಬಂದ ನೀರೆ
ತಿರುತಿರುಗಿ ಕರಿದಾಗಿ ಮೋಡವಾಗಿ
ಹಸಿರು ಚಾಮರ ಬೀಸಿ ಕರೆಯೆ ಗಿರಿರಾಜ
ಕಪ್ಪು ಕರಗಿತು ಪ್ರೀತಿ ಧಾರೆಯಾಗಿ. //
 ನೀರಂತೆ ಮಾಡೆನ್ನ ತಂದೆ,
ನೀರಂತೆ ಮಾಡೆನ್ನ ತಂದೆ, ಹರಿಯುತ್ತಲಿರುವೆ,
ಬೆರೆಯುತ್ತಲಿರುವೆ ಭೋರ್ಗರೆಯುತ್ತಲಿರುವೆ
ಇಳಿಯುತ್ತಲಿರುವೆ, ಇಂಗುತ್ತಲಿರುವೆ,
ಹಂಗತೊರೆದು ಮತ್ತೆಲ್ಲೋ ಸಾಗುತ್ತಲಿರುವೆ.//
ಆಗಸದ ಎದುರು ನೀಲಿಯಾಗುವೆ ನಾನು.
ರವಿಕಿರಣಕೆ ಹೊಳೆವ ಮುತ್ತು ನಾನು.
ನಿರಾಕಾರನಾಗುವೆ, ನಿರ್ಗುಣನು ಆಗುವೆ.
ಬಣ್ಣ ಬೆಡಗಿಲ್ಲದ ನಿರ್ಮೋಹಿಯಾಗುವೆ ನಾನು//
ಹಸಿರಾಗುವೆ ನಾನು, ಉಸಿರಾಗುವೆ ನಾನು,
ಬಸಿರೊಳಗನ ಜೀವ ರಕ್ಷಕ ಜಲವಾಗುವೆ.
ಹೆಸರ ಬಯಸದೆ ಹರಿಹರಿದು ಲೋಕದ
ಕೆಸರತೊಳೆದು ಪುನೀತನಾಗುವೆ ನಾನು//
ಎದೆಭಾರವ ಕಳೆವ ಕಣ್ಣಹನಿ  ನಾನು 
ಋಣಭಾರದಿ ಭಾವತರ್ಪಣವು  ನಾನು
ಸುಟ್ಟ ಬೂದಿಯ ಮೇಲೆ ಹರಿವೆ ನಾನು
ಮರುಜೀವ ನೀಡುವ ಗಂಗೆ ನಾನು//
ನೀರಾಗುವೆ ನಾನು ನೀರಾಗುವೆ,
ಸಿಹಿಯೊಳಗೆ ಬೆರೆತು ಕೀರಾಗುವೆ,
ಉಪ್ಪು  ಹುಳಿಖಾರದ ಜೊತೆಸೇರಿ
ಬಡವನೊಪ್ಪತ್ತಿನ ಸಾರಾಗುವೆ. 
   ಅಗಣಿತದ ತಾರೆಗಳೇ 
ಯಾರು ಚೆಲ್ಲಿದರಲ್ಲಿ? ಎಂದು ಚೆಲ್ಲಿದರಲ್ಲಿ ?
ಅಗಣಿತದ ತಾರೆಗಳೇ,  ಆಕಾಶದಲ್ಲಿ
ಒಟ್ಟುಗೂಡಿಸಲಾಗದಂತೆ ನಡೆದಿದೆ ಲೀಲೆ
ಚೆಲ್ಲಿದವ ತಾ ನಿಂತ ಬೆರಗಿನಲ್ಲಿ.
ಎಣಿಸಿ ಸೋತಿದೆ ಕೈ ಮಣಿದು ನಿಂತಿದೆ ಶಿರವು
ನಿನಗಿರದ ಚಿಂತೆ, ನನಗೇಕೆ ಲೆಕ್ಕ?
ಕನಸಲ್ಲಿ ಬಂದೆನ್ನ ಕರೆದಂತೆ ಭಾಸ
ಬಂದರಿಹುದೆ ಜಾಗ ನಿನ್ನ ಪಕ್ಕ?
ನೀನಾದರೋ ಅಲ್ಲಿ ನೀಲಿಯಾಗಸದಲ್ಲಿ
ನಾನಾದರೋ ನೆಲದ ಮಣ್ಣಿನಲ್ಲಿ
ಸದ್ದಿಲ್ಲದೇ ಬಂದು ಮಿಂಚಿ ಮರೆಯಾಗುವೆ
ಅಂಬೆಗಾಲಿನ ಕೂಸ ಕಣ್ಣಿನಲ್ಲಿ
ನೀನು ಕಳುಹಿದ ತೇರೆ ನಮ್ಮ ಕರೆದೊಯ್ಯಲು
ತೇಲಿಬರುತಿಹನು ಚಂದ್ರಮ
ಎಷ್ಟು ಕಾಲವು ಬೇಕೋ ಇಲ್ಲಿ ಬಂದಿಳಿಯಲು
ಕಾಯುತ್ತ ಕರಗುತಿದೆ ಸಂಭ್ರಮ.

 ಕಾರಣವು ಬೇಕೇನು ಹೂವರಳಲು?
ಕಾರಣವ ಕೆದಕುತ್ತ ಕಾಲ ಕಳೆಯಲು ಬೇಡ
ಕಾರಣವು ಬೇಕೇನು ಹೂವರಳಲು?
ವ್ಯಾಕರಣ ಹುಡುಕುತ್ತ ಹಾಡ ಹಿಂದೋಡಿದರೆ
ಆಗದೆಂದಿಗು ಭಾವದ ಜೊತೆಕರಗಲು. //
ಸೂರ್ಯ ಹುಟ್ಟುವನೇಕೆ ಮೂಡಣದಿ?
ಮಿಂದೇಳಲವ  ರಂಗಿನನೋಕುಳಿಯಲಿ
ಪ್ರಶ್ನೆ ಉತ್ತರಗಳನೆಲ್ಲಬದಿಗಿಟ್ಟು ನೀ
ತೆರೆದುಬಿಡು ನಿನ್ನೆದೆಗೆ  ರಂಗಿಳಿಯಲಿ.//
ಹರಿವ ನದಿಗೆ ತಿಳಿದಿದೆಯೇನು ತಾನು
ಹರಿದು  ಸೇರುವೆ ಸಾಗರವನೆಂದು?
ಸ್ವಚ್ಛ ತಿಳಿಸಿಹಿನೀರು ಆಗುವುದು ಉಪ್ಪು
ಹಾಗಂತ ಹರಿಯದೆ ನಿಂತಿರುವುದೇನು?//
ಕೋಗಿಲೆಯು ಹಾಡುವುದೇ ಶ್ರುತಿಹಿಡಿದು?
ಇಂಪಿನ ಹಿಂದೋಡದೆಯೆ ಇನಿದನಿ
ಕರೆಯೋಲೆ ಬೇಕಿಲ್ಲ ಹೂವಿಂದ
ಎಸಳ ಮೇಲೆ ಹೊಳೆವ ಇಬ್ಬನಿ.//
ಬಂದಂತೆ ಬದುಕುವುದೇ ಬಾಳಿನಂದ
ತೆರೆದುಬಿಡು ಎದೆಯಕದವ
ಎಣಿಸಿಗುಣಿಸಿದರೇನು ಬಗೆಹರಿಯದ ಲೆಕ್ಕ
ಮರೆತೊಂದು ಹಸುಳೆನಗುವ.//

   ಒಟ್ಟಾರೆ ಮೊತ್ತ ಏಳು ಏಳೇ
ಏಳು ಏಳೇ ಮೊತ್ತ ಏಳು ಏಳೇ .
 
ಮೂರು ನಾಲ್ಕಾದರೂ ನಾಲ್ಕು ಮೂರಾದರೂ
ಒಟ್ಟಾರೆ ಮೊತ್ತ ಏಳು ಏಳೇ
ಲೆಕ್ಕವನ್ನು ಕೊಟ್ಟವನು ಯಾರು ಹೇಳೆ.
ರಾಜನೇರಿ ಹೊರಟ ಚಿನ್ನದಂಬಾರಿ
ತಟ್ಟು ತಟ್ಟೆ ಹಿಡಿದ ರೋಗಿ ಭಿಕಾರಿ
ಕೊನೆಗೆ ಕೂಡುವುದಲ್ಲಿ ಇಬ್ಬರ ದಾರಿ
ನಡೆಯಲಾಗದು ಅವನ ನಿಯಮ ಮೀರಿ.  //
ಬಲ್ಲಿದನ ತಟ್ತೆಯಲಿ ಭಕ್ಷ್ಯ ಭೋಜ್ಯ
ಬಡವನಾ ಹೊಟ್ಟೆಯಲಿ ಹಸಿವಿನ ವ್ಯಾಜ್ಯ.
ಅಲ್ಲಿರುವ ಹಣ್ಣಿಗೆ ಇಲ್ಲ ಹಸಿವು
ಇಲ್ಲಿರುವ ಹಸಿವಿಗುಪವಾಸ ದಿನವು. //
ಅಲ್ಲಿಹುದು ಮೆತ್ತನೆಯ ಸುಪ್ಪತ್ತಿಗೆ,
ನಿದ್ರೆ ಬಾರದೆ ಕನಸು ಎಷ್ಟೊತ್ತಿಗೆ?
ಕನಸಿಗೂ ಚಿಂತೆ ಕನಸುಗಾರ ಬಡವ
ಮಲಗಿಹನು ಹರಕು ಚಾಪೆ, ಒರಟು ಹಾಸಿಗೆ.//
ಅಗ್ನಿ ಧಗಧಗಿಸುತ್ತಿದೆ ಉರುವಲಿಲ್ಲ
ತಂಪು ಮಹಲಲಿ ಕಿಡಿ ಹೊತ್ತಿಕೊಳ್ಳುವುದಿಲ್ಲ
ಕಳೆದು ಕೂಡುವ ಲೆಕ್ಕಾಸ್ ಕೊಟ್ಟು ಆಟವ
ನೋಡುತಿಹನಾರವ ಬಳಿ ಸುಲಿಯುವುದೇ ಇಲ್ಲ.//
ಆನೆ ಬಲಶಾಲಿ ತೂಕಮೀರಿ
ಬೆಳೆದ ಬಲರಾಮನ ಮೇಲೆ ಅಂಬಾರಿ
ಸತ್ತ ಮಿಡತೆಯ ಹೊತ್ತ ಪುಟ್ಟ ಇರುವೆಗೆ
ಸಲೀಸಾಗಿ ಸಾಗುವುದು ಬದುಕು ಕಿರುದಾರಿ. //
     ನಡುಬಾಗಿಲಲ್ಲಿ 
ಒಳಗೆ ಮೊಳಗಿದೆ ಘಂಟೆ ಹೊರಗೆ ಖಾಲಿ ತಟ್ಟೆ
ನಡುವೆ ನಿಂತಿರುವೆ ನಾ ಬಾಗಿಲಲ್ಲಿ
ಇರುವನಂತೆ  ದೇವ ಕಂಡೂ  ಕಾಣದಂತೆ
ಅನ್ನದಲೋ ಬ್ರಹ್ಮದಲೋ ಗೊಂದಲದಲಿ //
ಮಂದ ಬೆಳಕಿನ ನಂದಾದೀಪದ ಬಳಿಯಲ್ಲಿ
ಸ್ಮಿತವದನ ಮೂರ್ತಿಯಾ ಶಾಂತಿಯಲ್ಲೊ ?
ಬಿಸಿಲ ಬೇಗೆಯಲಿ ನಗುವ ಕೆತ್ತುವ ಛಲವು
 
ಕಪ್ಪನೆಯ ಜೀವಂತ ಕಾಂತಿಯಲ್ಲೊ ? //
ಮನಸೆಲ್ಲಿ ಇಟ್ಟಿರುವೆ ದೇವ ನೀ ಮುಂದಿರುವ
ಭಕ್ತರಾರಾಧನೆಯ ಭಜನೆಯಲ್ಲೋ?
ಬಲ್ಲಿದರ ಕನಸ ಸಾಕಾರಕೆಂದು ತನ್ನ
ಕನಸ ಮೂಟೆಯನಿಟ್ಟ ಜೋಪಡಿಯಲೊ?//
ಮೆಟ್ಟಿನಲಿ ಮನವಿಟ್ಟು ಮಂದಿರದ ಒಳಗೆ
ಎತ್ತಿದಾರತಿಯ ಕಣ್ತುಂಬಿಕೊಳ್ಳುವರಲ್ಲೋ ?
ಮೆಟ್ಟುಮಾಡುವ ಕಾಯಕದಿ ಮನವಿಟ್ಟು
ಮಂದಿರವ ಮರೆತು ಇದ್ದಲ್ಲೇ ನೆನೆವನಲ್ಲೋ?
 ನಿನ್ನೆದೆಯು......
ನಿನ್ನೆದೆಯು ಹರಡಿದ ಕಡಲಿನಂತೆ
ತೇಲಬಹುದಲ್ಲಿ ಮುಳುಗಲಾಳವಂತೆ
ನೋಡಲದು ಶಾಂತ ಗಂಭೀರವಾದರೂ
ಆಳದಲಿ ಆಪತ್ತು ಕುಳಿತಿರುವುದಂತೆ//
ನೀಲಿಯಾಗಸ ಬೆಳ್ಮುಗಿಲ ಚಿತ್ತಾರ
ಕರಗಿಹೋಗಲೆ ಅದರೊಳಗೆ ನಾನು?
ನೆಲನೂಕಿ ಮೇಲೇರೆ ನೆಲೆಯ ಕಳಕೊಂಡು
ಸೂತ್ರಹರಿದ ಗಾಳಿಪಟದಂತೆ  ನಾನು //
ದೂರದಾಸೆಗೆ ಸಿಲುಕಿ ಹತ್ತಿರವ ತೊರೆಯೆ
ತಲುಪಲಾರೆ ನಿನದರ ಹತ್ತಿರಕ್ಕೆ
ಕರೆಸಿಕೊಂಡರೆ ಹೇಗೆ ದೂರವನೆ ಎನ್ನಬಳಿ
ಉಳಿವುದಸ್ತಿತ್ವ ಆಗ  ಉತ್ತರಕ್ಕೆ.//
   

* ಅಮ್ಮ ತೊಡಿಸಿದ ಅಂಗಿ*
ಅಮ್ಮ ತೊಡಿಸಿದಳಂಗಿ ಏನು ಚಂದ,!
ಮೃದು ಮಧುರ ನವಿರು ಏನು ಸೊಗಸು  !
ಅಂದು ತೊಟ್ಟಂಗಿಯನಿಂದೂ ಧರಿಸಿರುವೆ
ಬಿಡಲಾಗದೊಂದು ಮೋಹಮನಸು //
ತಾನೇ ಬಟ್ಟೆಯ ನೇಯ್ದು ಅಂಗಿ ಮಾಡಿದಳು
ಹೊಲಿದ ಗುರುತೊಂದು ಇಲ್ಲದಂತೆ
ಬೇಕಾಯಿತಾಕೆಗೆ ತಿಂಗಳೊಂಬತ್ತು
ತೊಡಿಸೆನ್ನ ಅಂಗಳಕೆ  ಬಿಟ್ಟಳಂತೆ. //
ಅಂಗಿಗಿನ್ನೊಂದರ ಹಂಗಿಲ್ಲದಂತೆ
ಓಡಾಡಿದೆ ನಾನು ನನ್ನ ಜಗದೊಳಗೆ
ಮಿಂಚಿ ಮೆರೆಯುತ್ತಿತ್ತು ಮಿರಿಮಿರಿ ಅಂಗಿ
ದಿಟ್ಟಿತಾಗುವ ಭಯವು ತಾಯ ಮನದೊಳಗೆ.//
ಬಿದ್ದೆದ್ದು ಓಡುವ ಭರದಲ್ಲಿ ಅಂಗಿ
ಹರಿದುಹೋಗುತ್ತಿತ್ತು ಆಗಾಗ ಅಲ್ಲಿ
ಮಂತ್ರದ ಮಾಯೆ ಅಮ್ಮನ ಕೈಯೊಳಗೆ
ಹರಿದ ಗುರುತೇ ಇಲ್ಲ ಮುಟ್ಟಲಲ್ಲಿ//

      ನಮ್ಮ ಬದುಕು.
ದಾರಿಯಿಲ್ಲದ ನಭದಿ ಮೋಡದ ಗುರಿ ಏನು?
ತೇಲುವುದೇ ಅದಕಿರುವ ಅಂದ ಆನಂದ .
ಹಿಂದೆ ಮುಂದೆ ಮೇಲೆ ಕೆಳಗೆಲ್ಲ ಆಕಾಶ
ಗಾಳಿ ಬೀಸಿದ ದೆಸೆಗೆ ಅದರ ಪಯಣ//
ತೋರುಗಂಬಗಳಿಲ್ಲ ದಾರಿನಕ್ಷೆಗಳಿಲ್ಲ
ಹೋಗಿ ತಲುಪುವ ತಾಣ ಸ್ಪಷ್ಟವಿಲ್ಲ
ಕರೆವ ಪ್ರೀತಿಗೆ ಸೋತು ಕರಗಿ ಅಲ್ಲೇ ಇಳಿದು
ಹರಿವುದೆಲ್ಲೇ ಇರಲಿ ನಷ್ಟವಿಲ್ಲ. //
ಯಾತ್ರೆಯೇ ಜೀವನ, ಗುರಿ ಅದರ ಸಾವು
ನಿಮ್ಮದಾಗಿಸಿ ಬದುಕಿ ಈ  ಕ್ಷಣದಲಿ
ನಿನ್ನೆಗಳು ನಿರ್ಧರಿಸದಿರಲಿ ನಾಳೆಗಳನ್ನು
ಜೊತೆಗಿರುವ ಕ್ಷಣವಂದ ಈ ಬದುಕಲಿ.//

       *ಒಡಲ ಕೋಪ *
ಯಾವ ಕೋಪವು ತಾಯೆ ನಿನ್ನೊಡಲ ಕಂಪನಕೆ?
ಬೆಚ್ಚಿದವು ನೀ ಹೆತ್ತ ಜೀವ ಸಂಕುಲವು
ಬಿರುಕುಬಿಟ್ಟವು ಭಕ್ತಿಭಾವದ ದೇಗುಲವು
ಉರುಳಿದವು ಧರೆಗೆ ಹಿರಿಮೆಗೋಪುರವು//
ನೆರಳನೆಲೆಗಳೇ ನರನ ಕೊರಳಹಿಸುಕಿದವು
ಬಯಲೆಂಬ ಆಲಯಕೆ  ಓಡೋಡಿ ಬಂದರು
ಕಾಲಬಿಗಿಸಾಲದೆ ಕೈಗಳನು ಕಪ್ಪರಿಸಿ
ನೆಲವ ಬಿಡಲಾಗದ ನೆಲೆಯಲ್ಲಿ ನಿಂದರು//
ಭಾರವನು ಇಳಿಸುವ ಪರಿಯೇನೋ ನಿನಗೆ
ಭಾರದಲಿ ಜೀವ ಹಿಂಡುತಿಹುದೆಮಗೆ
ದೂರದಲಿ ಕಾಣುತಿದೆ ಮಿಣುಕುದೀಪ
ಕಾಲ್ಬುಡದ ಕತ್ತಲಲಿ ಸೋಲಿನ ಕೋಪ//
ನಿನ್ನೊಡಲ ಕಂಪನಕೆ ಕಾರಣವು ಏನು?
ಅವರ ಪ್ರಶ್ನೆಗಳೇನೋ ಅವರದೇ ಉತ್ತರ
ನೊಂದವರ ನೆರವಿಗೆ ಕೊಂಚ ಕೈನೀಡಿದರೆ
ಉಳಿದೀತು ಜೀವ ಮಾನವತೆಗುತ್ತರ//
*ಹಾವನು ನೋಡಿದಿರಾ.. * 
ಹಾವನು ನೋಡಿದಿರಾ
ನಾಗರ ಹಾವನು ನೋಡೊದಿರಾ?
ನಿಧಿಯನು ಕಾಯುವ ನಾಗರಹಾವು
ಮಿತಿಯನು ಮೀರಿದ ನಾಗರಹಾವು //
ಕರಿ ಮೈ ಮಿಂಚುವ ನಾಗರಹಾವು
ನಡು ಬಿಳಿಮಚ್ಚೆಯ ನಾಗರಹಾವು
ಬುಸ್ ಬುಸ್ ಎನ್ನುವ ನಾಗರಹಾವು
ಪುಸ್ ಪುಸ್ ಎನ್ನುವ ನಾಗರಹಾವು//
ಹುತ್ತದಿ ನೆಲೆಸಿಹ ನಾಗರಹಾವು
ಕುತ್ತನು ತರುವ ನಾಗರಹಾವು
ಬೆತ್ತದ  ಅಂಜಿಕೆ ಇಲ್ಲದ ಹಾವು
ಮತ್ತೇರಿದ ಈ ನಾಗರಹಾವು//
 
ವಾಸುಕಿಯಂತೆ ಆಡುವ ಹಾವು
ಮೋಸಕೆ ಮನಮಾಡಿದ  ಹಾವು
 
ಮತ್ಸರ ತುಂಬಿದ ನಾಗರಹಾವು
ಕುತ್ಸಿತ ಬುದ್ಧಿಯ ನಾಗರಹಾವು //
ವಿಷವನು ಕಕ್ಕುವ ನಾಗರಹಾವು
ವಿಷಯವನರಿಯದ ನಾಗರಹಾವು
ಗೆದ್ದಲು ಕಟ್ಟಿದ ಹುತ್ತದ ಒಳಗೆ
ಗದ್ದುಗೆ ಏರಿ ಕುಳಿತಿಹ ಹಾವು//
ಭಗ್ನಭಾವದ  ನಾಗರಹಾವು
ವಿಘ್ನಸಂತೋಷಿ ನಾಗರಹಾವು
ಹರೆಯವ ಕಳೆದಿಹ ನಾಗರಹಾವು
ಪೊರೆಯನು ಬಿಡದ ನಾಗರಹಾವು  //
ಗುರುತನಕಂಜದ ನಾಗರಹಾವು
ಹೊಣೆಗೇಡಿ ಈ ನಾಗರಹಾವು
ದಣಿವೇ ಆಗದ ನಾಲಿಗೆ ಇದಕೆ
ಗುಣಕೆ ಮಣಿಯದ ಬುದ್ಧಿಯು ಇದಕೆ//
       
   

    ಹಸಿವು 
ಈ ಹಸಿವು ಹುಟ್ಟಿನದು ಬೇರೆ  ಅಲ್ಲ
ಹುಡುಕಿದೆ ಕಣ್ಣು ಹರಿವ ಬಗೆಯ.
 
ಆಲಿಸಿದೆ ಕಿವಿಯು ಇಂಪಿನ ದನಿಯ
ಮರೆತಿದೆ ತೆರೆಯಲು ಎದೆಯ ಕದವ//
ನಡೆದಷ್ಟು ಮುಗಿಯದಿದೆ ಬದುಕ ಪಯಣ
ಸುಬ್ಬಣ್ಣನೋ  ಹೊರಟ ನವಿಲನೇರಿ
ಜಗಸುತ್ತಿ ಬರುವ ಮೊದಲೇ ಗಣಪ
 
ತೋರಿದನು ಇದ್ದಲ್ಲೇ ಗೆಲುವ ದಾರಿ//
ಸತ್ಯವೆಂಬರು ಕೆಲರು, ನ್ಯಾಯವೆಂಬರು ಕೆಲರು
ಧರ್ಮಜಾತಿಗಳೆಂಬ ಗೋಜಲೊಳಗೆ
ದಾರಿಗಾಣದೆ ದನಿಗೆಟ್ಟ ಆಂತರ್ಯ
ಮಳೆಹನಿಗೆ ಬಾಯ್ದೆರೆದ ನೆಲದ ಹಾಗೆ//

 
  ಜೀವಸೃಷ್ಟಿ 
ಮುಳ್ಳಬೇಲಿಯ ಬಳಸುವುದು ಮಲ್ಲಿಗೆಯ ಬಳ್ಳಿ
 
ನಿಸರ್ಗವು ಸಹಜತೆಯ ಸುಕೃತಿ
ಒಳಿತು ಕೆಡುಕಿನ ನಡುವೆ ಭೇದವನ್ನು ಕಲ್ಪಿಸಿ
ನರನ ನಡೆ ನರಳುವುದು ವಿಕೃತಿ//
ಪಶುಪಕ್ಷಿ ಕ್ರಿಮಿಕೀಟ ಜೀವಸೃಷ್ಟಿ
ಪೂರ್ಣತೆಯ ನಡಿಗೆಯಲಿ ಎಲ್ಲವೂ ಭಾಗಿ
ತನ್ನ ಸ್ವಾರ್ಥಕೆ ಅದನು ನಾಶಮಾಡದೆ
ಜೋತೆಸಾಗು ಪ್ರಕೃತಿಗೆ ತಲೆಬಾಗಿ//
ಭೇದಭಾವಗಳಿಲ್ಲ ಅವನ ಸೃಷ್ಟಿಯಲಿ
ಕಣಕಣಕು ನಿಗದಿಗೊಂಡಿದೆ  ಹೊಣೆ.
ಅರಳಿ ಬೀಗದು ಹೂವು ಕಾಯಾಗಲು
ಕ್ರಿಮಿಕೀಟಕಿಡಬೇಕು ಮಣೆ //     
ಬೆಳಕು ತನ್ನಿರವನು ಜಗಕೆ ತೋರಲು
ದಾರಿಗಡೆತಡೆಯೊಂದು ಇರಲೇಬೇಕು
ಗೆಲುವು ಮುಮ್ಮೇಳವು ಮಿಂಚಲಲ್ಲಿ
ಸೋತವರ ಹಿಮ್ಮೇಳ ತೆರೆಯಾಗಬೇಕು.//
ಶ್ರುತಿಯ ಇಂಪಿಗೆ ಬೇಕು ಲಯದ ಮೇಳ
ಮೆಚ್ಚುಗೆಯೂ ಕೇಳುಗರ ಕರತಾಡನ
ಶ್ರುತಿಲಯವ ತನ್ನೊಳಗೆ ಮೇಳೈಸಿಕೊಂಡವನ
ಜೀವನವೆ ಅನುಕ್ಷಣವು ಸವಿಗಾಯನ//
 ನೀರಿನೊಳಗೊಂದಾಗು.. 
ಒಂದಾಗಲಿಲ್ಲ ನೀರೊಳಗೆ ನೀನು
 
ಬರಿದೆ ಅಲೆದೆ ನದಿಯು ಹರಿದ ದೂರ
 
ಅರಿವಾಗಲಿಲ್ಲ ನೀರಿನೊಳ ಪುಳಕ
ಸಿಮ್ಮಿಹರಿವ  ನೀರಿನಾಳ ಉತ್ಸಾಹ//
ಅಗಲವೆಷ್ಟೋ ನೀರಿನಾಳವೆಷ್ಟೋ
ಇಳಿಯಲಿಲ್ಲ ನಿನ್ನೆದೆಯ ಒಳಗೆ
ತೇಲಿ ದಡಸೇರುವ ಬಯಕೆಯಲಿ ಸಿಲುಕಿ
ಮೀನಾಗಲಿಲ್ಲ ನೀರಿನೊಳಗೆ//
ಅಡೆತಡೆಯ ಬಳಸಿ ಹರಿವ ನೀರು
 
ಪಾಚಿಗಟ್ಟಿದೆ ನಿಂತಲ್ಲೆ ನಿಂತು
ಒಂದಾಗಿಹರಿಯದೆ ನೀರೊಳಗೆ ನೀನು
ಅರಿವಾದೀತೆ  ಬಾಳಿನರ್ಥವೆಂತು? //
     
    'ಅಂತರ
ಲೆಕ್ಕ ಇಡುವುದೇ ಹಕ್ಕಿ ತಾನೇರಿದೆತ್ತರವ
ನೆಲದಿಂದ ತಾ ನೆಗೆದ ದೂರ?
ಇಟ್ಟ ಅಡಿಗಡಿಗೆ ದಾಖಲೆ ಬರೆದೆನೆಂದು
 
ಬೀಗುವುದು ನರನ ಅಹಂಕಾರ//
ಕೋಗಿಲೆಯ ಇಂಪಿಗೆ ಸರಿಸಮವೇ ಇಲ್ಲ
ಹಾಡುವುದೇ ಮಾನ ಸನ್ಮಾನ ಬಯಸಿ ?
ಮಲ್ಲಿಗೆಯ ಕಂಪಿಗೆ ಮೆಚ್ಚದವರಿಲ್ಲ
ಸೂಸುವುದೆ ವೆಚ್ಚವನು  ಬಯಸಿ//
ಕಲಿತು ಬದುಕುವ ಪಾಡೊಂದು ನರನಲಿ
ಬದುಕ ಕಲೆಯಾಗಿಸುವ ಜೀವಸಂಕುಲವು
ಸೋಲುಗೆಲುವೆಂಬುದು ಹಗ್ಗದಮೇಲ್ನಡಿಗೆ
ಕಾಡಿದೆ ನರನನು ಬೀಳ್ವಭಯವು//
ನಿನ್ನೆ ನಾಳೆಗಳೇಕೆ ಕಾಡಿವೆ ಅವನನು
ಇಂದಿನಂದವನೇಕೆ ಹೊರದೂಡಿವೆ?
ಅಂದಿಗಂದೇ ಸಂದುವಂಥ ಬಾಳ್ವೆಯೇ ಅಂದ
ಕಾಣದಂತೇಕೊಂದು ಮಾಯೆ ಆವರಿಸಿದೆ?           
      ಹೂವು 
ಆ ಹೂವು ಈ ಹೂವು ತರತರದ ಹೂವು
ಬಗೆಬಗೆಯ ಬಣ್ಣಗಳು ಆಕಾರವು
ಹೂಮುಖದಿ ಮಿನುಗಿದೆ ಅದೇ ಅದೇ ತಿಳಿನಗು
ಅದಕೆ ಹೋಲಿಕೆಯೊಂದೆ ಬಿಡುಗಣ್ಣ ಮಗುವು//
ಗಿಡವಿರಲಿ ಮರವಿರಲಿ ಬಳ್ಳಿಯಿರಲಿ
ಹೂವಾಗಿ ನಗುವಲ್ಲಿ ಭೇದವಿಲ್ಲ
ಕೆಸರಲ್ಲಿ ಹುಟ್ಟಿದರೂ ಶ್ರೀಪಾದ ಸೇರುವ
ಕಮಲಪುಷ್ಪಕು ಮಿಗಿಲು ಬಾಳ್ವೆಯಿಲ್ಲ//
ನಡುಊರೆ ಇರಲಿ ದಾರಿಕೊನೆಯೇ ಇರಲಿ
ರವಿಕಿರಣ ಸೋಕದ ದಟ್ಟ ಕಾನನವಿರಲಿ
ಅಂದವೆಂದವರಿರಲಿ ಅಂದಗುರುಡರೆ ಇರಲಿ
ಇಂದನೆಚ್ಚರಳುವ ನಿನ್ನ ಪರಿ ಎಮಗಿರಲಿ//
ಅರಳಿದಂದೇ ಬಾಡಿ ನೆಲಕೆ ಬೀಳುವುದು
ಬಹುಕಾಲದ ಬಾಳನಣುಕಿಸುವುದು
'
ನಗುವೇ ಅಂದದ ಮರ್ಮ' ಜಗಕೆ ಸಾರಿ
ಬಂದ ಅಳಿಗಳಿಗೆ ಮಧುವನುಣಿಸುವುದು//
     
 ಬಿಳಿಮಂಜು. 
ಕನಸೇ ತುಂಬಿದೆ ಕಣ್ಣುಗಳಲ್ಲಿ
ಬೇರೊಂದೇನೂ ಕಾಣಿಸದು
ಕಾಣಲಾಗದ ಆ ಕಣ್ಣುಗಳಿಂದ
 
ಬೇರೊಂದೇನೂ ಸಾಧಿಸದು//
ಹಂಬಲತುಂಬಿದ ಎದೆ ತಾನು
ಬೇರೊಂದೇನೂ ಭಾವಿಸದು
ಭಾವವಿಲ್ಲದೆ ಬೆಳೆಸಿದ ಗಿಡದಲಿ
ಪ್ರೀತಿಯ ಹೂವು ಅರಳದು//
ನಾಳೆಯ ಹೆಜ್ಜೆ ಮನದಲಿ ಮೂಡಿ
ಇಂದಿನ ಕಾಲ್ಬುಡ ಕಾಣಿಸದು
ಹೆಜ್ಜೆಯನಿಡದೆ ಗೆಜ್ಜೆಯರಿಂಗಣ
ಬಾಳಿನ ಆಟದಿ ಕೇಳಿಸದು//
ಮರೆಯಾಗಡಗಿದೆ ಇಂದಿನ ಅಂದ
ನೆಲಕಾವರಿಸಿದೆ ಬಿಳಿಮಂಜು.
ಬಾರದೆ ರವಿಕಿರಣ ಕರಗದೆ
 
ಮೂಡದು  ಇಬ್ಬನಿ ಇಂದು//

ಒಡೆಯನು ಯಾರು?
ತೋಟದ ಹೂವಿಗೆ ಒಡೆಯನು ಯಾರು?
ಮಾಲಿಯೋ ಮಾಲಿಕನೋ ಗೊಂದಲವು
ಹೂವನು ಕೇಳಲು ಹೇಳಿದ ಮಾತು
ತನ್ನೊಡೆಯನು ಶ್ರೀ ಹರಿಯೆಂದು//
ಮಾಲೀಕ ಸುರಿಸನು ಮಾಲಿಯೂ ಹರಿಸನು
ಆಗಸದಿಂದ ಜಲಧಾರೆ.
ಬೇರನು ಕರೆದು ಉಣಿಸಿತು ನೆಲವು
ಹರಸಿತು ನೆಲವು ಮನಸಾರೆ//
ಬೆಳಕನು ನೀಡಿ ಬೆಳೆಸಿದನವನು
ಆಗಸಕೊಡೆಯನು ಆ ರವಿಯು
ಹೂವಿನ ಅಂದವ ಮೆಚ್ಚಿ ದೂರದೆ
ಹಾಡುತ ನಿಂತನು ಈ ಕವಿಯು//
ಮಾಲಿಕತ್ವವು ಯಾರದೂ ಅಲ್ಲ
ನಾನಾಗಿಯೇ ನಾ ಅರಳಿಹೆನು
ಪ್ರತಿಸೃಷ್ಟಿಸಲು ಆರದ ನರನು
ಸೋತರೂ ಹಮ್ಮಲಿ ನರಳಿಹನು. // 
********
ಬೇರ ನಂಟ ಮರೆವುದೆ?
ತಬ್ಬಿ ಬೆಳೆಯಲೊಂದು ಮರವು
ಸಿಕ್ಕಿತೆಂದು ಬಳ್ಳಿ ತಾನು
ಬೇರ ನಂಟ ಮರೆವುದೆ?
ಬಾಳಬಳ್ಳಿ ಹಬ್ಬಿ  ನಗಲು
ಒಲುಮೆ ಕೈ ಹಿಡಿದಿರಲು
ಕರುಳಬಳ್ಳಿ   ಮರೆವುದೆ?//
ಬಣ್ಣದ ಮಳೆಬಿಲ್ಲು ಅಲ್ಲಿ
ಕಟ್ಟಿ ಬಾನಿಗೆ ತೋರಣ
ಕನಸುಗಣ್ಣ ತುಂಬದೆ?
ರೈತನೆದೆಯ ಕನಸಿಗೆ
ಹಸಿದ ನೆಲದ ಮನಸಿಗೆ
ಸುರಿದು ತಂಪನೆರೆವುದೇ?//
ಹೊಸಬಾಳ್ವೆಯ ಕಟ್ಟಲೆಂದು
ಹಸೆಮಣೆಯನೇರಿ ನೀರೆ
ತವರ ಹಾದಿ ಮರೆವಳೆ?
ಕರುಳ ಕುಡಿಯುಬೆಳೆಬೆಳೆದು
ತಾನೇ ಮತ್ತೆ ಚಿಗುರಲು
ಕರುಣೆ ಮೂಲ ಆರುವುದೇ?
ರಥವನೇರಿ ಹೊರಟ ದೇವ
ಪಥದ  ವೇದಘೋಷ ಕೇಳಿ
ಮರಳಿ ಗುಡಿಗೆ ಬಾರನೇ?
ನಿಜದ ಮೂಲ ಅವ್ಯಕ್ತ
ಕರುಣೆನೆಲವು  ಅಭಿವ್ಯಕ್ತ
ದೃಷ್ಟಿಯಿಚ್ಛೆಗೆ ತೋರದೆ?

   * ನೀರು *
ಆಗಸಕೆ ಹಕ್ಕಿದೆಯೆ ನೀರಮೇಲೆ?
ಹುಟ್ಟಿದ ನದಿಯು ಗಿರಿಯ ಮಗಳೆ?
ಹರಿವ ನದಿಯಾದೀತೆ ದಡದ ಪಾಲೇ?
ನೀರೇನು ಸಾಗರಕೆ ಸೇರಿದವಳೇ?//
ನೀರಿಗಿಲ್ಲ ಜಾತಿ ನೀರಿಗಿಲ್ಲ ಕುಲವು
ನೀರಿಗಿಲ್ಲ ಒಂದೆ ಆಕಾರವು
ನೀರಿಗಿಲ್ಲ ಒಂದೆ ನೆಲೆಯು  ಜಗದೊಳಗೆ
ನಿಂತಲ್ಲೆ ನಿಲ್ಲದ ನೀರ ಹರಿವು  //
ನೀರು ಎಲ್ಲರ ಜೀವ, ಚಲನೆ ನೀರಿನ  ಜೀವ
 
ನಿಂತರೆ ನಿಂತಿತು ನೀರಿನುಸಿರು
ಬಂದುಸೇರುವುದಾಗ  ಲೋಕದ ಕೊಳೆಯು
ತಿಳಿನೀರಿನಡಿಯಲ್ಲಿ ಕೆಸರು. //
ಕೊಡದಲ್ಲಿ ಇರುವಾಗ ಕೊಡದಂತೆ ನೀರು
ಅಳೆವವನ ಗೆಲುವು ಕೈಯಲ್ಲಿ ಸೇರು
ಯಾರಿಗೂ ಒಳಪಡದ ನೀರಿನದೆ ಗೆಲುವು
ನೀರಾಗಿ ಹರಿಯಲಿ  ಬಾಳ ಒಲವು//
   

  *ಮಧ್ಯ ಬಿಂದು*
ಅತ್ತ ಹುಲಿ ಇತ್ತ ದಾರಿ
ನಡುವೆ ಅರಿವಿನ ದಾರಿ
ಎತ್ತ ವಾಲಿದರೂ  ಅಪಾಯ
ಸಂಯಮದ ಅರ್ಥವಿದು ತಿಳಿ.//
ಉಪವಾಸವೆನ್ನುವುದು ಹೀಗೂ ಇರಬಹುದು
ಹೆಚ್ಚು ತಿನ್ನಲು ಮಾಡುವ ತಯಾರಿ
ಹೆಚ್ಚು ತಿನ್ನುವುದೇನು ಕಡಿಮೆಯೇ?
ವೈದ್ಯರ ಭೇಟಿಗೆ ರಹದಾರಿ//
ಗಡಿಯಾರದ ಲೋಲಕ ಬಲಕೆ ಸಾಗುತ್ತಿದೆ
ಎಡದ ಪಯಣಕೆ ಶಕ್ತಿ ಸಂಗ್ರಹಣೆ
ಎಡಕೆ ಸಾಗುತ್ತಿರಲು ಬಲದಲ್ಲಿ ಮನಸು
ಸುಖದುಃಖ ಜೊತೆಗೆ  ಬಾಳ ಮೆರವಣಿಗೆ //
ಎಡಬಲಕೆ ಸಾಗುವ ಲೋಲಕದ ಬುಡ ಒಂದೆ
ಅತಿಗಳನು ಒಳಗೊಂಡ ಮಧ್ಯಬಿಂದು.
ಅತ್ತ ವಾಲುತ್ತಿದೆ ಇತ್ತ ಸೋಲುತ್ತಿದೆ
ಎತ್ತ ಸಾಗದೆ ಇದ್ದಲ್ಲೇ ಗೆಲುವ ತಂದು.//
  
       ಗೆಲುವು ಗೆಲುವಲ್ಲ,
ಮುಂದೆ ನಡೆವುದೇ ಗೆಲುವು ಏನು ವಿಚಿತ್ರ,
ಹಿಂದೆ ಉಳಿದವನ ಚಿತ್ರ –ಸೋಲು ನಿರಾಶೆ.
ಅವನಿಲ್ಲದೇ ಇವನ ಗೆಲುವು ಗೆಲುವಲ್ಲ,
ಸೋಲಿಲ್ಲದ ಬಾಳ ಚೆಲುವು ಚೆಲುವಲ್ಲ.


     ಹೆಸರಿಟ್ಟು ಕರೆವೆನು
ಹೆಸರಿಟ್ಟು ಕರೆವೆನು ನನ್ನಕ್ಕ ತಂಗಿಗೆ
ಗಂಗೆ ತುಂಗೆ ಕೃಷ್ಣೆ ಕಾವೇರಿ ಎಂದು
ಬಂದು ಸೇರಿರಿ ಹೊಳೆ ಹಳ್ಳದಲಿ ನೀವು
ಮಿಂದು ಪಾವನರಾಗುವೆವು ನಾವು ಇಂದು//
ಇನ್ನೆಲ್ಲೋ ಹುಟ್ಟಿ ಮತ್ತೆಲ್ಲೋ ಹರಿದು
ಹೋಗಿ ಸೇರುವುದೊಂದೆ ಸಾಗರವನು
ನಮ್ಮ ಬಾಳುವೆಗೊಂದು ಆದರ್ಶ ನೀವು
ಪರಮಗುರಿ ಸೇರುವುದೇ ದೇವನನ್ನು//
ಎತ್ತರದಲಿ ಹುಟ್ಟಿ ತಗ್ಗಿನೆಡೆ ಹರಿದು
ಹಿಗ್ಗಿನಲಿ ಅಡೆತಡೆಯದಾಟಿ ನಡೆದು
ಮತ್ತೆ ಜೋತೆಬಂದವರ ಕೂಡಿಕೊಂಡು
ಜಲಧಿಯನು ಸೇರಿ ತನ್ನ ಕಳೆದುಕೊಂಡು.//

*ಬೇಲಿಯಾಚೆ ನಿಂತವನ ಹಾಡು.*
ಹಸಿದಿದೆ ನಮ್ಮ ಕಣ್ಣು,
ಅಂಬಾರಿಯಲಿ ಹೊರಟವನ
 ಹೊರಳುನೋಟಕ್ಕೆ, ಕೈಬೀಸಿಗೆ
ಬಿಗಿದ ತುಟಿ ಸಡಿಲವಾಗಿ
ಮೂಡುವ ಕಿರುನಗೆಗೆ.
ಹಸಿದಿದೆ ನಮ್ಮೊಡಲು 
ಉಸಿರ ಸಾಕುವ ಅನಿವಾರ್ಯತೆಗೆ
ಉರಿವ ಕಿರುಹಣತೆಗೆ
ಎಣ್ಣೆ ಹನಿಸಿ
ಬಿರುಗಾಳಿಯಿಂದ
ಕಾಪಿಡುವ ಕೈಬಲಕೆ.
ಹಸಿದಿದೆ ಬಂಜರೆದೆ
ಹನಿಹನಿ ಮಳೆಗೆ
ಬೇಡ ವರ್ಷಧಾರೆ.
ಕೊಚ್ಚಿ ಹೋಗುವೆಲ್ಲೆಲ್ಲೋ
ಹೊತ್ತೊಯ್ಯಲಾರದ ಆಶೀರ್ವಾದ.
ಹಸಿದಿದೆ ಈ ಹೊಟ್ಟೆ
ರುಚಿಯು ಬೇಕಿಲ್ಲ
ಶುಚಿಯೆಡೆಗೆ ಗಮನವಿಲ್ಲ
ನಿಮ್ಮೊಲವಿನ ನಾಯಿಬೆಕ್ಕಿಗೆ
ಈವ ಅನ್ನದ ಕಿರುಪಾಲಿಗೆ.
ನಿಮಗಿರಲಿ ರಾಜಮಾರ್ಗ
ಹಿಂದೆ ಮುಂದೆ ಡೋಲು ತಮ್ಮಟೆ
ನಮಗಿರಲಿ ಬೇಲಿಬದಿ
ನಿಂತು ನೋಡುವ ಭಾಗ್ಯ
ಕಾಲವುಳಿಸಿದ ನೈವೇದ್ಯ.






    ಒತ್ತಾಯ ಸಲ್ಲ!
ಅಂಬೆಗಾಲಿಗೆ ಓಡೆಂದು
ಒತ್ತಾಯಿಸಿದರೆ ಹೇಗೆ?
ಮೊಗ್ಗಿಗೆ ಈಗಲೇ ಅರಳೆಂದು
ದಬಾಯಿಸಿದ ಹಾಗೆ//
ಕಾಲದ ಜೊತೆ ಜೀವ
ಕಾಯಲೇ ಬೇಕು
ಕಾವ್ಯ ಕುಂಚಕೆ ಭಾವ
ನೋಯಲೇ ಬೇಕು.//
ಜಗಕೊಡೆಯ ಸೂರ್ಯ, ಆದರೂ
ತೋರಿಸಲಾರ ಒಟ್ಟಿಗೆ ಉದಯಾಸ್ತ
ಇರಬಹುದು ಇದರೊಳು ಅದರ ತಯಾರಿ
ಸುಖಭಾವ ಜೀವಕ್ಕೆ ಪರಮಾಪ್ತ.//

*ನವೋದಯ ಗೀತೆ.*
ಭರತ ಮಾತೆಯ ಸುತರು ನಾವು
ನಾವು ನವಯುಗ ಪ್ರಭೆಗಳು
ಬೆಳಗುವೆವು ನಾವು ಭಾವದಾರತಿ
ತಂದು ಬಹುಬಗೆ ಕೀರುತಿ //
ಬಣ್ಣ ಜಾತಿ ಪದವಿ ಎಂಬ
ಭೇದಭಾವವ ಮಾಡದೆ
ಎಲ್ಲಜೀವಕು ಒಬ್ಬ ದೇವನೆ
ಎಂಬ ಭಾವದಿ ನಮಿಪೆವು//
ಭೂಮಿತಾಯಿಯ ಮಕ್ಕಳೆಮಗೀ
ನೆಲವೆ ಪೂಜಾ ಮಂದಿರ
ಎಲ್ಲರೇಳಿಗೆ ವಸಂತವಾಗಿರೆ
ನಮ್ಮ ಕನಸದು ಸುಂದರ.//
ಮಾನವರಾಗಿ ಜನಿಸಿದೆವಿಲ್ಲಿ
ಪಾವನ ಪ್ರಕೃತಿಯ ದೇಶದಲಿ
ಸಂಸ್ಕೃತಿ ಹೂವು ಅರಳಿಹುದಿಲ್ಲಿ
ನಮ್ಮಯ ಹೆಮ್ಮೆಯ ದೇಶದಲಿ//
ನಾವೇ ಹಿಮಗಿರಿ ನಾವೇ ನದಿಗಳು
ನಾವೇ ಸಾಗರದಲೆಯಾಗಿ
ನಾಡಿ ನೇಳ್ಗೆಗೆ ದುಡಿವೆವು
ನವೋದಯದ ಮಕ್ಕಳಾಗಿ//
ಹಸಿರು ಕ್ರಾಂತಿಯ ಕ್ಷೀರ ಕ್ರಾಂತಿಯ
ಸಾಧಕರಿಗೆ ಅಭಿನಂದನೆ
ತಾಯಿ ಭಾಗೀರಥಿಯ ಪಾಲನೆ
ನಮಗೆ ಸೂರ್ಯನೆ ರಕ್ಷಣೆ//
ಸತ್ಯ ಸುಂದರ ಶಿವನ ಪರಿಚಯ
ಜಗಕೆ ಮಾಡಿ ಕೊಡುವೆವು
ಅಂತರಿಕ್ಷದ ಜ್ಞಾನಯಾನವ
ನಾವೆ ಸಾಧಿಸಿ ತೋರ್ವೆವು//
      
 *ನೆರಳ ಸುತ್ತ ...*
ಮರದ ನೆರಳಲಿ ನಿಂತು ನೆರಳ ಕಳಕೊಂಡೆ
ನೆರಳಾಗುವ ಒಂದವಕಾಶ
ಬಿಸಿಲಲ್ಲಿ ನಿಂತವಗೆ ಮಾತ್ರ
ಎಂಬ ಸತ್ಯವನು ತಿಳಿದುಕೊಂಡೆ.
ನೆರಳ ಮುಂದಿಟ್ಟು  ನಡೆದರೆ  ಭೂತ
ಹಿಂದೆ ಬಿಟ್ಟು  ಮುನ್ನಡೆಯೆ ಭವಿಷ್ಯ.
ಬೆಳಕು ಬಣ್ಣಬಣ್ಣದೊಳಿದ್ದರೇನು?
 ನೆರಳ ಬಣ್ಣ ಮಾತ್ರ ಕಪ್ಪು.
೪  
ಘನಕೆ ಮೂಡುವ ನೆರಳು
ಗಾಳಿಗೆಲ್ಲಿಯ ಭಾಗ್ಯ?
ಇದ್ದೂ ಇಲ್ಲದಂತಿರುವವರ
ಕಡೆಗೆ ದಿವ್ಯಮೌನ.
ಬೆಳಕಿಗೆದುರಾಗಲು  ಮೂಡುವುದು ನೆರಳು
ಸತ್ಯಕೆದುರಾಗಲು ಮೂಡುವುದು ತಿರುಳು.
****
ನೀ ನಡೆದ ದಾರಿಯಲಿ ನಾನು ನಡೆದರೆ
ಮೂಡದಲ್ಲಿ ನನ್ನ ಹೆಜ್ಜೆಗುರುತು.
ಹೆಜ್ಜೆ ಮೂಡಿಸಲೆಂದೇ ಹೊಸಹಾದಿ ತುಳಿದರೆ
 ಬಗೆಬಗೆಯ ಕಷ್ಟ ಎದುರಾದೀತು.
ಸುಗಮವಿದ್ದರೆ ಹಾದಿ ರೋಮಂಚನವಿಲ್ಲ
ಸಾಹಸದ ಯಾತ್ರೆ ಎಲ್ಲರಿಗೂ ಸಲ್ಲ.
ಕಾಲಿನ ಬಲಕೆ ಕೋಲಿನಾಧಾರ ಗಿರಿ
ಯೇರಿನಿಂತವ ಧ್ವಜ ಊರಬಲ್ಲ .
ಎಲ್ಲರೊಳಗೊಂದಾಗು ಎನ್ನುವುದೇ ಬೇರೆ
ಎಲ್ಲರಂತಾಗದಿರು  ಎನ್ನುವುದೇ ಬೇರೆ.
ಕೋಟಿತಾರೆಗಳೆಲ್ಲ ಒಂದಾಗಿ ಇದ್ದರೂ
ಎದ್ದುಕಾಣುವುದೊಂದು ಧ್ರುವತಾರೆ. 

 * ನಾನಿಲ್ಲದಿರುವಾಗ *
ಮೆಲ್ಲ ಮೆಲ್ಲನೆ ಬಂದನವನು
ಪ್ರೇಯಸಿಯ ಮನೆ ಹೊಸಿಲಿಗೆ
ಬಡಿದು ಬಾಗಿಲ, ಕಾದು ನಿಂದನು
ನಗುತ ಕರೆವ ಅವಳಿಗೆ//
ಕಿವಿಯ ಆನಿಸಿ ನಿಂತನವನು
ಹೆಜ್ಜೆ ಸಪ್ಪಳ ಕೇಳಬಹುದೇ?
ಮತ್ತೆ ಬಡಿದನು ಸಮಯ ಬಿಟ್ಟು
ಈಗಲಾದರೂ ಬರುವಳೇ?//
ಒಳಗಿನಿಂದ ಸಣ್ಣದನಿಯು
“ಯಾರು ಬಾಗಿಲ ಬಡಿದುದು?”
ಈತ ಹೇಳಿದ “ನಾನು.. ನಾನು..
ಆಗಲಿಲ್ಲವೇ ಗುರುತು?//
ಬಂದಿರುವೆನು ಅದೇ.. ನಾನು..
ನಿನ್ನ ಪ್ರಿಯತಮನೇ ನಾನು.
ನಾನು ನಾನು ಅದೇ ನಾನು
ಗುರುತಾಗಲಿಲ್ಲವೇನು?”//
ಮತ್ತೆ ಒಳದನಿ ಕ್ಷೀಣವಾದುದು
“ ‘ನಾನು’ವಿನ ಗುರುತಿಲ್ಲವೆಂದು
ನೀನಾಗಿ ಬಂದ ಕ್ಷಣದಲಿ
ಮನೆಯ ಬಾಗಿಲು ತೆರೆವುದು” //
ಅರ್ಥವಾಯಿತು ಅವಳ ಮಾತು
ಮರಳಿದನು ಆ ಪ್ರಿಯತಮ
ನಾನು ನಾನು ಎಂದ ಮಾತಿಗೆ
ನೊಂದಿತೆನು ಅವಳ ಮನ?//
ದಿನವು ಉರುಳಲು, ವಾರ ತಿಂಗಳು
ಮರಳಿ ಬಂದವು ಋತುಗಳು
ಕೊಡುವ ಸಂತದಲ್ಲೇ ಮಗ್ನವು
‘ನಾನು’ ಇಲ್ಲದ ನಿಸರ್ಗವು//
ಮತ್ತೆ ಬಂದನು ಅವಳ ಬಳಿಗೆ
ತಟ್ಟಿ  ಬಾಗಿಲ, ನಿಂದನು
ಬಡಿದು ನಿಂದವರಾರು ? ಎನ್ನಲು
“ನೀನೇ ನೀನೇ” ಎಂದನು.//
ಕ್ಷಣದಿ ಬಾಗಿಲು ತಾನೇ ತೆರೆಯಿತು
ನಗುವ ಆಕೆಯು ಹೊಸಿಲಲಿ.
ಮಂಜು ಕರಗಲು ಹೊಳೆವ ಇಬ್ಬನಿ
ಹೂವಿನೊಂದು ದಳದಲಿ//
ನಾನು ನೀನು ಎಂಬ ಭೇದವು
ಇಲ್ಲ ಪ್ರೇಮಿಯ ಮನದಲಿ
ನಾನು ಎಂಬುದ ಕಳೆದುಕೊಂಡು
ಐಕ್ಯವಾದ ಕ್ಷಣದಲಿ.//

ಬಯಲಲೊಂದೆ ಮರ .....
ಹಾಕಿದ ಗಿಡಕೆ ಮತ್ತೆ ಮತ್ತೆ ಗೊಬ್ಬರ ಹಾಕುವಿರೆಕೆ?
ಕೊಬ್ಬಿ ಬೆಳೆಯಲೊಂದವವಕಾಶ ಮಾಡಿಕೊಟ್ಟಂತೆ.
ಹೆಚ್ಚು ಫಲಬರಲು ಹದದಲ್ಲಿ ಗೊಬ್ಬರನೀರು
ಮತ್ತೆ ಸೂರ್ಯನ ಬಿಸಿಲು ಉಚಿತವಂತೆ!//
ನೀರ ಹನಿಸುವ ದಯೆಯಿರಲಿ ಚಿಕ್ಕ ಗಿಡಗಳಿಗೆ
ಬೇರು ಬಲಗೊಳ್ಳಲು ನೆಲೆಯು ದೃಢಗೊಳ್ಳಲು 
ಮತ್ತೆ ತಂತಾನೆ  ಬೆಳೆವುದು ,ಸ್ವಾವಲಂಬನೆ 
ಇನ್ನು ಬಹಳಿವೆ  ಸಸ್ಯ ನಿಮ್ಮ ನೆರವು ಬೇಡಲು.//
ಹಸಿರು ನೆಲೆಗೊಳ್ಳಲು ಒಂಟಿಮರ ಸಾಕೆ?
ಬಯಲಲೊಂದೆ ಮರ ಆಗುವುದು ಪ್ರಸಿದ್ಧಿ.
ಹಸಿರು ಹುಲ್ಲು, ಚಿಕ್ಕ ಪೊದೆ, ಗಿಡಗಂಟಿ
ಎಲ್ಲ ಸೇರಿ ಆಗುವುದೊಂದು ಕಾಡು. //
ಹಂಚಿಹೋಗಿದೆ ಪ್ರಕೃತಿಯಲಿ ಗುಣಾವಗುಣಗಳು
ಬಿಟ್ಟಿಲ್ಲ ಅವು ಒಂದನೊಂದು
ಕಟ್ಟಿಕೊಂಡು ಸಾಗಿದೆ  ಎಲ್ಲವನು ಹಿಂದೆ
ಶ್ರೇಷ್ಠತೆಯ ಭ್ರಮೆಯ ಬಿಟ್ಟು.

 
  ನೆನಪಿನ ಬಳ್ಳಿ
ನಿನ್ನ ನೆನಪಿನ ಬಳ್ಳಿ ಎನ್ನ ಕಾಲಿಗೆ ಸಿಲುಕಿ 
ಬಿದ್ದೆನಾ ನಡುಬೀದಿಯಲ್ಲಿ
ಎಲ್ಲವನು ಮರೆತು ನಾನಿದ್ದೆ ಶಾಂತಿಯಲಿ
ಬಂದೆಯೇಕೆ ನಡು ಪಯಣದಲ್ಲಿ?//
ಹಾದಿಯ ಎಡಬಲದಿ ಹಚ್ಚನೆಯ ಹಸಿರು
ಹೂವರಳಿಸಿ ನಿಂತಿದೆ ಹೊಂಗೆ ಮರವು
ಕೋಗಿಲೆಯ ಕಳುಹಿಸಿ ಹಾಡನ್ನು ಹಾಡಿಸಿ
ನೆನಪ ಕೆದಕುವುದ್ಯಾವ ತೆರವು?//
ಸೋನೆಮಳೆ ಸಿಂಚನದಿ ನೆಲದ ಬಯಕೆಯ ಹಸಿರು
ಮೊಳಕೆಯೊಡೆದು ಸುಖದ ನಗೆಯ ಬೀರಿ 
ಎಲ್ಲಿಂದ ಕಳುಹಿಸಿದೆ ನವಿಲು ನೃತ್ಯವ ಗಯ್ಯೆ
ಎದೆಗಾಯವಾಯ್ತೆನ್ನ ನೆನಪು ಗೀರಿ//
ಬಾನಿನ ಅಂಗಳಕೆ ಕಾಮನ ಬಿಲ್ಲು 
ಬಣ್ಣದ ತೋರಣವ ಕಟ್ಟೆ 
ಬಿಟ್ಟವರು ಯಾರೋ ಬಾಣವು ಬಂತು
ಘಾಸಿಯಾಯ್ತು ಎದೆಗೆ ತಾಗಿ//
ಗಂಟು ಗಂಟಿಗೂ ಹೂವು ಅರಳಿದೆ, ಕಂಪನ್ನು 
ಹರಡಿತ್ತು ಸುಂದರ ಬಳ್ಳಿ.
ಹಸಿರೆಲ್ಲ ಉದುರಿ, ಹೂವೆಲ್ಲ ಬಾಡಿ
ಬರಿ ಬಳ್ಳಿ ಉಳಿದಿತ್ತು ನರಳಿ//

ನಿನ್ನನೆಂತು ನಾ ಮರೆಯಲಿ?
ಬಹುಕಾಲ ಸಂದಿತು ನಾ ನಿನ್ನ ನೆನೆಯದಲೆ
ಮರೆತು ಬಿಟ್ಟಿರುವುದೇನು ಎನ್ನ ಮನವು?
ಮರೆತು ಬಿಡಲೇನು ನೀ ನಡುವೆ ಬಂದವನೇ?
ನಾ ಬಂದ ದಿನದಿಂದಲೆನ್ನ ಜೋತೆಯಾದವನು.//
ಸುತ್ತ ಸುಂದರ ಪ್ರಕೃತಿ ಲೀಲೆಯಂತಾಗಿಹುದು
ಆಟವಾಡಿಸುವಾತ ನೇಪಥ್ಯದಲ್ಲಿ
ಆಟದಂದದ ಆನಂದದಲಿ ಮೈ ಮರೆಯೆ
ಕೆಲಕಾಲ ನಿನ್ನನ್ನು ಮರೆತಿರಲುಬಹುದು.//
ನಸುಕಿನಲಿ ಮೂಡಣ ಕೆಂಪೇರುತಿರುವಾಗ
ಜೀವಸಂಕುಲದ ಬಾಳ್ ಗರಿಗೆದರಿದಾಗ
ಹೂದಳದ ಮೇಲೆ ಇಬ್ಬನಿಯು ಹೊಳೆಯುತಿರೆ
ಬೆರಗಿನಲ್ಲಿ ಕಾರಣವ ಮರೆತಿರಲುಬಹುದು//
ಪಡುವಣದಿ ರವಿ ಮುಳುಗೆ ಕೆಂಬಾನ ಹರವಿನಲ್ಲಿ
ಕನಸಿನ ಚಿತ್ತಾರ ಹಕ್ಕಿ ಬಿಡಿಸಿರಲು
ವ್ಯಕ್ತಕೆಲ್ಲಕು ಬಣ್ಣಗಳ ಬಳಿದು ಅವ್ಯಕ್ತ
ನಾಗಿರುವ ನಿನ್ನನೆಂತು ನಾ ಮರೆಯಲಿ?//

          ಕೈಗೆ ಸಿಗದ ನೀನು!
ಎಲ್ಲೆಲ್ಲೂ  ನೀನಿರುವೆ ಕೈಗೆ ಸಿಗದ ಹಾಗೆ
ಸುತ್ತೆಲ್ಲ ಹರಡಿರುವೆ ಗಾಳಿಯಂತೆ.
ಮರೆಯಲ್ಲಿ ಇದ್ದರೂ ಸುತ್ತ ಗಂಧವ ಸೂಸಿ
ಹೂವು ತನ್ನಿರುವನ್ನು ಸಾರುವಂತೆ.//
ದೂರ ಬಾನಂಚಿನಲ್ಲಿ ನೀನಿರುವೆ ರವಿಯಾಗಿ
ಬೆಳಕು ಕತ್ತಲಿನಾಟ  ಈ ಇಳೆಯಲಿ
ಯಾವ ಸೇತುವು ನಿನ್ನ ಕಿರಣದ ಪಯಣಕೆ
ಬಿದ್ದು ಕುಣಿದಾಡುವ ಆಟ ಈ ಹೊಳೆಯಲಿ.//
ಕೇಳ್ವ  ಮಾತುಗಳೆಲ್ಲ ಬರಿ ಶಬ್ದ ಕಿವಿಗಳಿಗೆ
ಅರ್ಥದ ಚಿತ್ತಾರ ಎದೆಭಿತ್ತಿಯಲ್ಲಿ.
ಬಣ್ಣಬಣ್ಣದ ಭಾವ ನೀಡಿ ಮಾತಿಗೆ ಜೀವ
ಹೂವಾಗಿ ಅರಳುವುದು ಕವಿತೆಯಲ್ಲಿ.//
ಸತ್ತಿರುವ ನಿನ್ನೆಯೂ, ಹುಟ್ಟದಿರುವ ನಾಳೆ
ನಡುವೆ ನಡೆದಿದೆ ಒಂಟಿಕಾಲ ಹೆಜ್ಜೆ.
ಬಿಡಲಾಗದೀ ಕಾಲ ಹಿಡಿಯಹೋದರೆ ಮಾಯ
ಕುಣಿದು ಕೆಣಕುತ್ತಿದೆ ಕಾಲಗೆಜ್ಜೆ.//
 
   ಕಾಲ ಕೈ ತಪ್ಪಲು.....
ಬೆಳಗು ಮೂಡಿದೆ ಕಂಡ ನೋಡು ಬಾರಾ
ಹೂವಿಗೂ, ದುಂಬಿಗೂ  , ಹಕ್ಕಿಗೂ, ಹಾಡಿಗೂ.
ಹೊದ್ದು ಮಲಗಿರಲು ಅದೇ ರಾತ್ರಿಯು
ಮನಸಿನ ಒಳಗೂ ಮನೆಯ ಅಂಗಳಕು//
ಮೇಲೆದ್ದಿದೆ ಹೊಂಗಿರಣ ಮೂಡು ದಿಕ್ಕಿನಲ್ಲಿ
ಇಂಪಿನ ಚಿಲಿಪಿಲಿ ಗಾನ ಹಾಡುಹಕ್ಕಿಯಲ್ಲಿ
ಮುತ್ತಾಗಿ ಹೊಳೆದಿದೆ  ಮಂಜಿನ ತೆರೆ ಕರಗಿ
ಎಚ್ಚರಿಸಿ ಕರೆದಿದೆ  ಬೆಳಕು ಕರುಣೆಯಲ್ಲಿ.//
ಹಾದಿಯ ಎಡಬಲದಿ ಮರಗಳ ಸಾಲು
ತೂರಿ ಬಂದಿವೆ ನಡುವೆ ಬೆಳಕಿನ ಕೋಲು.
ನೋಡಲಾಗದು ನಿನಗೆ ತಡವಾಗಿ ಬಂದರೆ
ಕಾಲ ಕೈ ತಪ್ಪಲು ಹಲವಾರು ತೊಂದರೆ.//
ರಾತ್ರಿಯು ಕಳೆದಿದೆ ಹಗಲಿಹುದು ಮುಂದೆ
ದಿಕ್ಕಿಲ್ಲದೆ ಸಾಗಿವೆ ಕುರಿಗಳ ಮಂದೆ.
ಹೊಳೆದಿಹನಲ್ಲಿ ಕೋಟಿ ಸೂರ್ಯ ಪ್ರಭಾಕರ
ನೀ ಮೆಟ್ಟಿ ನಿಂತ ನೆಲ ಸಂಪತ್ತಿನ ಆಗರ //

ಹನಿ ಹನಿ.... ಹನಿ ಹನಿ...
ಹರಿಯಬೇಕು ನೀರು ಹರಿಯಬೇಕು,
ಒರತೆಯಲಿ ನೀರು ಜಿನುಗಬೇಕು.
ಬೆಟ್ಟ ಕೊರಕಲಲಿ, ಇಳಿಜಾರು ತಪ್ಪಲಲಿ
ಹನಿ ಹನಿ ನೀರು ಜಿನುಗಬೇಕು.//
ಹನಿ ಹನಿ ಸೇರಿ ಹಳ್ಳವಾಗುವುದು
ತೆನೆತೆನೆ ಸೇರಿ ಬಳ್ಳವಾಗುವುದು
ಹನಿ ಹನಿ ಸೇರಿ ಹಳ್ಳವಾಗಿ ಹರಿದು
ಕಾನನದಿ ಕಣಿವೆ, ಕೊಳ್ಳವಾಗುವುದು.//
ಹನಿ ಹನಿಯ ಹುಡುಕಿ ಹಾರುವ ದುಂಬಿಗೆ
ಹೊತ್ತೊಯ್ಯಲಾಗುವುದೇ ಹಂಡೆ ತುಂಬ?
ಕಂಪನ್ನು ಹರಡಿ ಕರೆಯುವ ಹೂವು
ಭ್ರಮರಕ್ಕೆ ನೀಡುವುದೇ ಜೇನ ಕುಂಭ?//
ಹನಿ ಹನಿ ಬೀಳುವ ಮಳೆಹನಿಯ ಮೇಲೆ
ಬೀಳಲೆಳೆ ಬಿಸಿಲು ಮುತ್ತು ಹೊಳೆಯುವುದು
ಮುಸುಕಿದ ಮಂಜೆಲ್ಲ ಕರಗಿ ಬೀಳಲು ಅಲ್ಲಿ
ಎಲೆಯ ಮೇಲ್ಹನಿಯ ಚಿತ್ತಾರ ಮೂಡುವುದು..//
ಹನಿ ಹನಿ ಹನಿಸೊಂದು ಸಿಹಿ ಮಾತ ಮೆಲ್ಲಗೆ
ಅರಳುವುದು ಎದೆಗೊಳದಿ ಭಾವಕಮಲ
ಬೇಕೇನು ಬಹು ಮಾತು ಅಬ್ಬರದ ಗದ್ದಲ
ಮೌನದಲಿ ಆಲಿಸು ಜೀವದುಸಿರ //

       ಮನವಿರಲಿ ಅಳಿಲಿನಂತೆ
ಒಲುಮೆ ಕಾಣುವುದೇನು ಉಳುಮೆಗೊಂಡ ನೆಲದಿ
ಬೀಜ ತಾ ಮೊಳಕೆಯೊಡೆಯುವಂತೆ
ಋತು ವಸಂತನು ಬರಲು ಆವ ಸೂಚನೆಯೇನೋ
ಕೋಗಿಲೆಯು ತಾನಾಗಿ ಹಾಡುವಂತೆ//
ಬಿಸಿಲ ಕಾವೇರಲು, ನೆಲವು ಬಾಯಾರಲು
ಹೊಲದಂಚಲಿ ಕಪ್ಪೆ ಕೂಗುವಂತೆ
ಪಡುವಣದಿ ಮುಗಿಲು ಮೇಲೆದ್ದು ಬರಲು
ನೆಗಿಲದು ರೈತನ ಹೆಗಲೇರುವಂತೆ//
ಮೂಡಣಕೆ  ಮುಖಮಾಡಿ ಅರಳಿದ ಕಮಲ
ಪಡುವಣದಿ  ಬಸವಳಿದು ಬಾಡುವಂತೆ
ಹಿಂದೆ ಬಿದ್ದರೂ ನಡಿಗೆಯಲಿ ಒಂದುದಿನ ಶಶಿ
ರವಿಗೆ ಸಮ ಹಗಲಿನಲಿ ಹೆಜ್ಜೆ ಹಾಕುವನಂತೆ! //
ನೀರುಗೊಬ್ಬರವಿತ್ತ ಬೇರಿಗೆ ಹಸಿರೆಲೆ
ಹಣ್ಣಾಗಿ ಬಿದ್ದು ಅಡಿಗೆರಗುವಂತೆ
ಪಡೆದೆಲ್ಲ ಉಪಕೃತಿಗೆ ಅಲ್ಪವಾದರೂ ಕೊಡುಗೆ
ನೀಡುವ ಮನವಿರಲಿ ಅಳಿಲಿನಂತೆ// 
           
        ಮನಸ್ಸು .......
ಮನದ ನಂದನದಲ್ಲಿ ಅರಳದಿರೆ ಹೂವು
ವನದ ಹೂವಿಗೆ ಬಣ್ಣ ಮೂಡುವುದೇ ಹೇಳು?
ಮನದ ಗುಡಿಯೊಳು ಮಿಣುಕು ದೀಪ ಉರಿಯದೆ ಇರಲು
ಬಾನತಾರೆಗೆ ಕಣ್ಣು ಹೊಳೆಯುವುದೆ ಹೇಳು?
ನೀರಾಗಿ ಹರಿಯದೆ ನಿಂತಲ್ಲೆ ಇರುವ ಮನ 
ಹರಿವ ಹೊಳೆಗಳಲಿ ಕಾಣುವುದೇನು ಅಂದ?
ಭಾವಧಾರೆಗೆ ಸಿಗಲಿ ಅಳು ನಗುವಿನ ನಾಲೆ
ದಾರಿ ಸಿಗದ ನುಡಿಗೆ ಇಹುದೇನು ಛಂದ ! 
ಗಂಡೆದೆಯ ಮನಕೆ ಮನೆಯಂಗಳದ ಎದುರು
ಕಾಣುವುದು ಬಾನ ಚುಂಬಿಸುವ ಶಿಖರ
ಎರಲಾಗದ ಭಯಕೆ ಬಳಿಯಲ್ಲೆ ಬೀಳುವುದು 
ದಾಟಲಾಗದ ಆಳ ಭೀಕರ ಕಂದರ !
ಅಹಮಿಕೆಯ ಮಂಜು ಕರಗದಿರೆ ಮನದಲ್ಲಿ 
ಕಾಣುವುದೆ ಇಬ್ಬನಿಯು ಹೂದಳದಲಿ?
ಕೆಸರ ನಿರಿಂದ ತುಸು ಮೇಲೆದ್ದು ಬರದಿರೆ 
ಅರಳುವುದೆ ಕಮಲ ನಿರಿನಾಲದಲ್ಲಿ?.

     
    ದಾರಿ
ಇದ್ದಂತೆ ಇದೆ ದಾರಿ
ಸದ್ದು ಮಾಡದೆ ಮಲಗಿ
ಮೇಲೆ ಬದುಕಿನ ಪಯಣ
ಚಕ್ರ ಸಂಗಾತಿ//
ಗಾಡಿ ಎತ್ತಿನದಿರಲಿ
ಯಂತ್ರದ್ದೆ ಆಗಿರಲಿ
ಸುಗಮ ಪಯಣಕೆ
ಚಕ್ರ ತಿರುಗುತಿರಲಿ//
ಅವರವರ ದಾರಿ
ಅವರವರ ಗುರಿ
 ದಾರಿ ತುಂಬಾ ಹೂ
ಬಿಸಿಲ ನಗುವಿರಲಿ//
ಹಿಂದೆ ಸಾಗುತ್ತಿರಲಿ
ಮುಂದೆ ಹೋಗುತ್ತಿರಲಿ
ದಾರಿ ತಾ ನಿರ್ಲಿಪ್ತ
ನಿತ್ಯಸಾಕ್ಷಿ//
ಭೇದ ಭಾವದ ಲೆಕ್ಕ
ನರನರಿವಿಗೆ ಬಿಟ್ಟು
ಮೌನ ಸಂಭ್ರಮದಲಿ
ದಾರಿ ಅಂತರ್ಮುಖಿ//
ಮುಂದೆ ಸಾಗಿದ್ದವನು
ತುದಿ ತಲುಪಲಾರದೆ
ಹೊರಟ ಹೆಜ್ಜೆಯನರಸಿ
ಹಿಂದೆ ನಡೆದಿರಬಹುದು//
ಪಡೆದ ಅನುಭವಗಳ
ಪೇರಿಸಿ ಎಳೆದಿಹನು
ಇಳುಹಲು  ತಾಣ
 ಸಿಗದೆ ಇದ್ದಿರಬಹುದು//
ಮುಂದೆ ನಡೆದವ ನಾಳೆ
ಹಿಂದಿರುಗಬಹುದು
ಗುರುತಿರಲಿ ದಾರಿಯದು
ತಾ ಹಿಂದೆ ನಡೆದದ್ದು//
ಹಿಂದೆ ಮುಂದಿನ ಲೆಕ್ಕ
ನಿಂತ ಜಾಗದ ನೋಟ
ಹೋಲಿಸಿದರಷ್ಟೆ
ಅರ್ಥ ಸಿಗುವಂಥದ್ದು//

ಮಣಿದು ನಿಂತಿದೆ ಶಿರವು 
ಯಾರು ಚೆಲ್ಲಿದರಲ್ಲಿ? ಎಂದು ಚೆಲ್ಲಿದರಲ್ಲಿ ?
ಅಗಣಿತದ ತಾರೆಗಳೇ,  ಆಕಾಶದಲ್ಲಿ  
ಒಟ್ಟುಗೂಡಿಸಲಾಗದಂತೆ ನಡೆದಿದೆ ಲೀಲೆ 
ಚೆಲ್ಲಿದವ ತಾ ನಿಂತ ಬೆರಗಿನಲ್ಲಿ
ಎಣಿಸಿ ಸೋತಿದೆ ಕೈ ಮಣಿದು ನಿಂತಿದೆ ಶಿರವು 
ನಿನಗಿರದ ಚಿಂತೆ, ನನಗೇಕೆ ಲೆಕ್ಕ?
ಕನಸಲ್ಲಿ ಬಂದೆನ್ನ ಕರೆದಂತೆ ಭಾಸ 
ಬಂದರಿಹುದೆ ಜಾಗ ನಿನ್ನ ಪಕ್ಕ?
ನೀನಾದರೋ ಅಲ್ಲಿ ನೀಲಿಯಾಗಸದಲ್ಲಿ 
ನಾನಾದರೋ ನೆಲದ ಮಣ್ಣಿನಲ್ಲಿ 
ಸದ್ದಿಲ್ಲದೇ ಬಂದು ಮಿಂಚಿ ಮರೆಯಾಗುವೆ 
ಅಂಬೆಗಾಲಿನ ಕೂಸ ಕಣ್ಣಿನಲ್ಲಿ 
ನೀನು ಕಳುಹಿದ ತೇರೆ ನಮ್ಮ ಕರೆದೊಯ್ಯಲು 
ತೇಲಿಬರುತಿಹನು ಚಂದ್ರಮ 
ಎಷ್ಟು ಕಾಲವು ಬೇಕೋ ಇಲ್ಲಿ ಬಂದಿಳಿಯಲು 
ಕಾಯುತ್ತ ಕರಗುತಿದೆ ಸಂಭ್ರಮ
.
     ನಡೆದಾಡದ ದಾರಿ.
ಇದ್ದಲ್ಲೇ ಇರುವುದು ಸದ್ದು ಮಾಡದೆ ದಾರಿ
ಸಾಗುವುದೆ ದಾರಿಗನ ಜೊತೆಗೆ?
ಮದುವೆಯ ಮೆರವಣಿಗೆ ಮಸಣದ ಕುಣಿಗೆ
ಘಾಸಿಯಾಗದು ದಾರಿಯ ಎದೆಗೆ.//
ಗೆಲುವಿನ ಏರು, ಸೋಲಿನ ಇಳಿವು
ಬಗೆಬಗೆಯ ದಾರಿ ಬದುಕಿಗೆ
ಏರಲಿ, ಇಳಿಯಲಿ ದಾರಿಗನ ಮರ್ಜಿ
ಕಳಕೊಳ್ಳುವುದೇನಿಲ್ಲ  ದಾರಿಗೆ//
ಇರಬಹುದು ಇದ್ದಲ್ಲೇ ಇರುವವನ ಬೇಸರ,
ದಾರಿಗೆ ನಡೆಯಲಾಗದ ನೋವು.
ಚಲಿಸುವ ಬದುಕಿಗೆ ಆಧಾರ ನೀಡಿದ
ಸಾರ್ಥಕ್ಯದಿರುವಿನಾ  ನಲಿವು //
 ಅಂಬೆಗಾಲಿಗೆ ನಾಲ್ಕು  ಎದ್ದು ನಡೆಯಲು ಎರಡು
ಮುಗ್ಗರಿಸಿ ಬಿಳಲು ಮೂರು
ಏಳುಬೀಳಿನ ಲೆಕ್ಕ ಹೇಗಿರಲಿ ಎಂತಿರಲಿ 
ಹಲಗೆಯಲಿ ಬಳಪದ ಗಿರು//

ಇಂದೇ ಹೇಳಿಬಿಡು
ಇಂದೇ  ಹೇಳಿಬಿಡು ಒಂದು  ಮಾತ
ಪಡೆದ ಉಪಕೃತಿಗೆ ಕೃತಜ್ಞತೆಯ
‘ಬಂದೇ ಬರುವುದು ನಾಳೆ ‘ ಎಂಬ ನಿಶ್ಚಯವಿಲ್ಲ
ಉಳಿಸದಿರು ಮನದಲ್ಲಿ ಕೊರೆಯ.//
ಬಂಡು ಹೀರುವ ಧಾವಂತಕ್ಕೆ ಬಿದ್ದು
ಉಂಡು, ಬರಿದೆ ಮರಳಿದರೆ ಹೇಗೆ?
ಬಂದು ನೋಡಲು ನಾಳೆ ಗಿಡದಲ್ಲಿ ಹೂವಿಲ್ಲ
ಬಾಡಿ ಬಿದ್ದಿವೆ ಮಣ್ಣಲ್ಲಿ ಪಕಳೆ//
ದಡವಾಗಿ ನಿಂತು ದಾರಿಯನು ತೋರುವುದು
ಹೊಳೆಯ ಹರಿವಿಗೆ ತೀರಗಳು ಎರಡು.
ಸೇರಿ ಸಾಗರದಲ್ಲಿ ಕರಗಿದ ಮೇಲೆ
ದಡಗಳ ಹುಡುಕುವುದು ಮರುಳು//
ಆಟವಾಡಿದ ಬಯಲು ಪಾಠ ಓದಿದ ಶಾಲೆ
ಇರಬಹುದು ಇಂದಿಗೂ ಇದ್ದಲ್ಲೇ
ಹೋಗಿ ನಿಲ್ಲಲು ನಾವಾಗುವೆವೆ ಮಕ್ಕಳು,
ನವಿರು ಎಳೆಗಳ ನವಿಲು ಗರಿಗಳು?//

      ನೀನು-ನಾನು
ನೀನವನು ಪರಬ್ರಹ್ಮ ಸೃಷ್ಟಿಕರ್ತ
ನಾವಾದರೋ ಮಾಡುವೆವು ಮರುಬಳಕೆ.
ಒಂದಕೆ ಒಂದನು ಕೂಡಲು ಕಳೆಯಲು
ಬರುವ ಉತ್ತರದೆಣಿಕೆ ನಮ್ಮ ಕಲಿಕೆ.//
ಶರಧಿಯಲಿ ನೀರು ಆವಿಯಾಗಿ ಮೇಲೆ
ಮೋಡದ ರೂಪವನ್ನು ತಾಳುವುದು
ಮಳೆಯಾಗಿ ಹರಿದು ಶರಧಿಯನೆ ಸೇರುವುದು
ಜಲಚಕ್ರದ ಪಾಳಿ ನಡೆಯುವುದು//
ನೆಲದ ಸತ್ವವ ಹಿರಿ ನೀರಬಳಸಿ
ಗಾಳಿಯನು ಕುಡಿದು ಬೆಳಕಿಗೆ ಮೈ ತೆರೆದು
ಪಡೆದೆಲ್ಲವನು ತಿರುಳಾಗಿಸಿ ಅದರೊಳಗೆ
ಬೀಜವಿಟ್ಟು ಮರವು ನೆಲಕೆಸೆವುದು//
ನಿನ್ನೆಯನು ಉಂಡ ಇಂದು ನಾಳೆಗಾಹಾರ
ಅನ್ಯರನು ಬಿಟ್ಟಿರದ ಬದುಕು
ಹುಟ್ಟುಸಾವುಗಳೇ ಸರಪಣಿಯ ಕೊಂಡಿ
ಕಳಚಲು ಇನ್ನೆಲ್ಲಿ ಜಗದ ಸೊಗಸು?//
 ನೆನಪಿನ ಬಳ್ಳಿ
ನಿನ್ನ ನೆನಪಿನ ಬಳ್ಳಿ ಎನ್ನ ಕಾಲಿಗೆ ಸಿಲುಕಿ
ಬಿದ್ದೆನಾ ನಡುಬೀದಿಯಲ್ಲಿ
ಎಲ್ಲವನು ಮರೆತು ನಾನಿದ್ದೆ ಶಾಂತಿಯಲಿ
ಬಂದೆಯೇಕೆ ನಡು ಪಯಣದಲ್ಲಿ?//
ಹಾದಿಯ ಎಡಬಲದಿ ಹಚ್ಚನೆಯ ಹಸಿರು
 ಹೂವರಳಿಸಿ ನಿಂತಿದೆ ಹೊಂಗೆ ಮರವು
ಕೋಗಿಲೆಯ ಕಳುಹಿಸಿ ಹಾಡನ್ನು ಹಾಡಿಸಿ
ನೆನಪ ಕೆದಕುವುದ್ಯಾವ ತೆರವು?//
ಸೋನೆಮಳೆ ಸಿಂಚನದಿ ನೆಲದ ಬಯಕೆಯ ಹಸಿರು
ಮೊಳಕೆಯೊಡೆದು ಸುಖದ ನಗೆಯ ಬೀರಿ
ಎಲ್ಲಿಂದ ಕಳುಹಿಸಿದೆ ನವಿಲು ನೃತ್ಯವ ಗಯ್ಯೆ
ಎದೆಗಾಯವಾಯ್ತೆನ್ನ ನೆನಪು ಗೀರಿ//
ಬಾನಿನ ಅಂಗಳಕೆ ಕಾಮನ ಬಿಲ್ಲು
ಬಣ್ಣದ ತೋರಣವ ಕಟ್ಟೆ
ಬಿಟ್ಟವರು ಯಾರೋ ಬಾಣವು ಬಂತು
ಘಾಸಿಯಾಯ್ತು ಎದೆಗೆ ತಾಗಿ//
ಗಂಟು ಗಂಟಿಗೂ ಹೂವು ಅರಳಿದೆ, ಕಂಪನ್ನು
ಹರಡಿತ್ತು ಸುಂದರ ಬಳ್ಳಿ.
ಹಸಿರೆಲ್ಲ ಉದುರಿ, ಹೂವೆಲ್ಲ ಬಾಡಿ
ಬರಿ ಬಳ್ಳಿ ಉಳಿದಿತ್ತು ನರಳಿ//
    - ಗಣೇಶ ಹೆಗಡೆ, ಜನವಿ ಗಾಳಿಬೀಡು.
ಕಥನ ಕವನ
ಕೋತಿಯ ನಾಯಕ ಸೇನಕ 
ಕೋತಿಗಳಿದ್ದವು ಕಾಡಿನಲಿ 
ಸಾವಿರ ಸಂಖ್ಯೆಯ ಲೆಕ್ಕದಲಿ
ಕೋತಿಗಳಾದರೂ ಅವರೆಂದಿಗೂ 
ಜಗಳವ ಮಾಡದೆ ಹೊಂದಿಕೊಂಡು //
ಯೋಚನೆ ಬಂತವಕೆ ಒಂದು ದಿನ 
ಇರಬೇಕು ತಮಗೊಬ್ಬ ನಾಯಕ
ಇರುವೆವು ನಾವೀಗ ಹೊಂದಿಕೊಂಡು 
ಆಗಲಾರವೇ ಜಗಳ ಮುಂದೆಂದು ?//
ನಾಯಕನ ಮಾತನ್ನು ಕೇಳೋಣ 
ತೋರಿದ ಹಾದೀಲಿ ನಡೆಯೋಣ
ನಾಯಕನಿರಲೊಂದು ಧೈರ್ಯ
ಹೆಚ್ಚುವುದು ನಮ್ಮಲ್ಲಿ ಸ್ಥೈರ್ಯ. //
ಎಲ್ಲಿವೆ ಹಣ್ಣಿನ ಮರಗಳು?
ಎಲ್ಲಿವೆ ಸಿಹಿನೀರ ಕೊಳವು?
ಎಲ್ಲಿಲ್ಲ ಪ್ರಾಣಿಯ ಕಾಟ
ನಿಲ್ಲಿಸಲು ನಮ್ಮ ಕಚ್ಚಾಟ //
ನಾಯಕನೊಬ್ಬ ಬೇಕೆಂದು 
ಆರಿಸೆ ಹಿರಿಯ ಕೋತಿಯನು
ಕರೆಯಲದನು ಸೇನಾನಾಯಕ 
ಬರುಬರುತ ಆಯ್ತು ಸೇನಕ. //
ಹಾರುತ ನೆಗೆಯುತ ಹೊರಟಾವು 
ಊರಿನ ಹತ್ತಿರ ಬಂದಾವು 
ಕಂಡವು ನೂರಾರು ಗುಡಿಸಲು 
ಜನರಿಲ್ಲದ ಖಾಲಿ ರಸ್ತೆಗಳು.//
ಹೆಂಗಸರು ಅಡಿಗೆಮನೆಯಲ್ಲಿ 
ಮುದುಕರು ಕಟ್ಟೆಯ ನೆರಳಲ್ಲಿ 
ಮಕ್ಕಳು ಬೀದಿಯ ಕೊನೆಯಲ್ಲಿ 
ಹುಡುಕಾಟ ಹಣ್ಣಿನ ಮರೆವೆಲ್ಲಿ?//
ಕಣ್ಣಿಗೆ ಬಿಟ್ಟು ಸೀಬೆ ಮರ
 ಚಿನ್ನದ ಬಣ್ಣದ ಹಣ್ಣುಗಳ 
ಗೊಂಚಲು ಗೊಂಚಲು ಜೋತಿದ್ದವು 
ಹಣ್ಣಿನ ಕಂಪು ತೇಲಿದ್ದವು.//
ಹಣ್ಣಿನ ಅಂದ ಹಳದಿ ಕೆಂಪು 
ಮೂಗಿಗೆ ಬಡಿಯೆ ಸೀಬೆ ಕಂಪು
ತಿಂದರೆ ಹೊಟ್ಟೆಗೆ ಕಂಪು 
ಸೇರಿತು ಮರಿಕೋತಿ ಗುಂಪು.//
ನೋಡೋಣ ಹಣ್ಣಿನ ರುಚಿಯ 
 ಕೇಳಿತು ಮರಿಕೋತಿ ಅಣ್ಣನ 
ಬೇಡಪ್ಪ ನಮಗಿದು ಹೊಸಜಾಗ 
ಕೇಳೋಣ ಸೇನಕನ ಬೇಗ. //
ಬಂದವು ಸೇನಕನ ಬಳಿಗೆ 
'ಬೇಕು ನಮಗೆ ನಿಮ್ಮ ಒಪ್ಪಿಗೆ'
ಹಣ್ಣಿನ ಗೊಂಚಲು ಮರದ ತುಂಬ 
ತಾಳದ ಹಸಿವು ಹೊಟ್ಟೆತುಂಬ' //. 
ಸೇನಕ ಕೇಳಿದ ಕೋತಿಗಳ
 'ಕಂಡಿಲ್ಲವೆ ಅಲ್ಲಿ ಜನಗಳ?
ಕಾವಲಿಲ್ಲವೇ ತೋಟಕ್ಕೆ?
ಗೊಂಬೆಗಳಿಲ್ಲವೆ ಗೂಟಕ್ಕೆ?'//
'ಗಂಡಸರೆಲ್ಲಾ ಹೊಲದಲ್ಲಿ 
ಹೆಂಗಸರಡಿಗೆ ಮನೆಯಲ್ಲಿ 
ಮಕ್ಕಳ ಆಟ ಬಯಲಲ್ಲಿ 
ಮುದುಕರ ನೋಟ ಪರದಲ್ಲಿ'//
 ಸೇನಕ ಕೇಳಿದ ಕೋತಿಗಳ 
'ಕಟ್ಟಿಲ್ಲವೆ ತಂತಿ ಬೇಲಿಗಳ?'
'ಬೇಲಿಯೂ ಇಲ್ಲ ಮಾಲಿಯೂ ಇಲ್ಲ 
ತೋಟಕ್ಕೆ ನುಗ್ಗುವುದು ಸುಲಭ
ಕೊಡಿರೆಮಗೆ ನಿಮ್ಮ ಒಪ್ಪಿಗೆ 
ತಾಳಲಾರೆವು ಹಸಿವ ಬೇಗೆ'//
ಸೇನಕ ಕೊಟ್ಟ ಉತ್ತರ 
'ಹೋಗದಿರಿ ಮರದ ಹತ್ತಿರ 
ಬೇಲಿಯೂ ಇಲ್ಲ; ಮಾಲಿಯೂ ಇಲ್ಲ,
ಮೋಸವು ಅಡಗಿದೆಯಲ್ಲ!'//
ಬಿಡಲಾರದಾಸೆ ಮರಿಕೊತಿಗೆ 
ಸಲಹೆಯ ನೀಡಿತು ಸೇನಕಗೆ
'ಹಗಲಲ್ಲಿ ದಣಿವ ಜನರು 
ಇರುಳಲ್ಲಿ ನಿದ್ರೆಗೆ ಜಾರುವರು 
ಮೆಲ್ಲಗೆ ಹಣ್ಣ ಕೀಳೋಣ 
ನಿಲ್ಲದೆ ದೂರಕ್ಕೆ ಸಾಗೋಣ'//
ಮರಿಕೋತಿ ಮಾಡಲು ಒತ್ತಾಯ 
ಒಪ್ಪಲೇ ಬೇಕಾಯ್ತು ನಾಯಕ 
ಕಾದವು ನಡುರಾತ್ರಿ ತನಕ 
ಲಗ್ಗೆ ಇಟ್ಟವು ಸೀಬೆ ಮರಕ.//
ಕೂಡಲೆ ಸದ್ದಾಯ್ತು ಗೆಜ್ಜೆಗಳ 
ಡಣ ಡಣ ಡಣ ಕಿರು ಗಂಟೆಗಳ 
ರೆಂಬೆಕೊಂಬೆಗೂ ಗೆಜ್ಜೆಗಳು 
ರೆಂಬೆಕೊಂಬೆಗೂ ಗಂಟೆಗಳು //
ಅರಿವಿಗೆ ಬಂತು ಆಪತ್ತು 
ಕೋತಿಗಳ ಪ್ರಾಣಕ್ಕೆ ಕುತ್ತು 
ತೆರೆದವು ಮನೆಮನೆ ಬಾಗಿಲು 
ಪಂಜು ಹಿಡಿದ ಜನರ ಕೈಗಳು //
ಕೋತಿ ಬಂದಿವೆ ಕೋತಿ ಕೋತಿ 
ತತ್ತಾ ದೊಣ್ಣೆ ತತ್ತಾ 
ತತ್ತಾ ಬಿಲ್ಲು  ತತ್ತಾ 
ತತ್ತಾ ಕವಣೆ  ತತ್ತಾ //
ಕೂಗುತ್ತ ಬಂದ ಜನಗಳು 
ನಡುಗಿ ಹೋದವು ಕೋತಿಗಳು 
ಒಂದನು ಒಂದು ತಬ್ಬಿಕೊಂಡು 
ಕೆಟ್ಟೆವೆಂದು ಗೋಳಾಡಿದವು.//

ಧೈರ್ಯವ ನೀಡಿದ ಸೇನಕ 
ನಾನಿರುವೇನು ನಿಮಗೆ ನಾಯಕ 
ಹೋರಾಡುವೆ ಪ್ರಾಣವನೊಪ್ಪಿಸಿ 
ಕಾದಾಡುವೆ ನಿಮ್ಮನು ರಕ್ಷಿಸಿ.//
ಸುತ್ತಲು ನಿಂತರು ಜನರು 
ಬೆಳಕಿಗೆ ಕೈಯಲ್ಲಿ ಪಂಜು
ಹೊಡೆಯಲು ಕೈಲಿ ದೊಣ್ಣೆ 
ಕೆಲವರ ಕೈಲಿ ಕವಣೆ. //
ಛಂಗನೆ ನೆಗೆದ ಸೇನಕ 
ಕಿತ್ತನೊಂದು ಕೈಯ ಪಂಜ 
ಪಕ್ಕದ ಗುಡಿಸಲಿಗೆ ಹಾರಿ 
ಮಾಡಿನ ಹುಲ್ಲಿಗೆ ಪಂಜನೂರಿ //
ಹೊತ್ತಿತು ಮನೆಗಳಿಗೆ ಬೆಂಕಿ 
ಧಗಧಗ ಉರಿಯುವ ಬೆಂಕಿ 
ಜನರೆಲ್ಲಾ ಬೆಂಕಿಯ ನೋಡಿದರು 
ಬೆಂಕಿಯ ಆರಿಸೆ ಓಡಿದರು//
ಜನರತ್ತ ನೋಡಲು ಇತ್ತ 
ಕೋತಿಯ ಗುಂಪು ಮಾಯಾ 
ನಾಯಕನೆಂದರೆ ನಾಯಕ 
ಕೋತಿಯ ನಾಯಕ ಸೇನಕ //
ಕಷ್ಟದಿ ಕೋತಿಯ ರಕ್ಷಿಸಿದ 
ಕೋತಿಯ ನಾಯಕ ಸೇನಕ 
ಸೇನಕ ಸೇನಾ ನಾಯಕ 
ಸೇನಕ ಸೇನಾ ನಾಯಕ 

ಪುಟ್ಟಜ್ಜಿ ಹೇಳಿದ ಕತೆ *
ಅಜ್ಜಿ ಅಜ್ಜಿ ಪುಟ್ಟಜ್ಜಿ
ಕತೆಯನು ಹೇಳು ಪುಟ್ಟಜ್ಜಿ
ಹಾಡ್ಗತೆಯಾದರು ಆದೀತು
ನಿಳ್ಗತೆಯಾದರು ಆದೀತು//
ಪುಟ್ಟನ  ಕೋರಿಕೆ ಕೇಳಿದಳು
ಕತೆಹೇಳಲು ತಾ ತೊಡಗಿದಳು
“ಬಾ ಮಗ ಹೇಳುವೆ ಕತೆಯೊಂದ
ಆಲಿಸಿ ಪಡೆ ನೀ ಆನಂದ //
ಕಾಡಿನ ನಡುವೆ ಊರೊಂದು
ಪಕ್ಕದಿ ಹರಿಯುವ ಹೊಳೆಯೊಂದು
ಆ ಊರಿನ ಕತೆಯೇ ಈ ಕತೆಯು
ಕೇಳಲು ಸೊಗಸು ಈ ಕತೆಯು//
ಮೊದಲಿಗೆ ಅಲ್ಲಿ ಕಾಡಿತ್ತು
ಕಿಚಿಪಿಚಿ ಹಕ್ಕಿಯ ಹಾಡಿತ್ತು
ಹಳ್ಳವು ಅಲ್ಲಿ ಹರಿದಿತ್ತು.
ನೋಡಲು ತುಂಬಾ ಸೊಗಸಿತ್ತು.//
ಯುವಕನು ಬಂದು ನೋಡಿದನು
ಉಳಿಯುವ ಯೋಚನೆ ಮಾಡಿದನು
ಮನೆಯನು ಅಲ್ಲೇ ಕಟ್ಟಿದನು
ಎದುರಿಗೆ ತೋಟವ ಮಾಡಿದನು//
ಮುಂದಿದೆ ಹರಿಯುವ ಆ  ಹೊಳೆಯು
ಹಿಂದಿದೆ ಬೆಳೆದಿಹ ಆ ಕಾಡು
ಹುಲಿಚಿರತೆ ಪ್ರಾಣಿ ಪಕ್ಷಿಗಳು
ಬಳಿಯಲ್ಲೆ ಮೃಗಗಳ ಬೀಡು.//
ಸುತ್ತಲು ಇರುವ ಕಾಡು ಪ್ರಾಣಿಗಳು
ಯುವಕನಿಗೆ ಭಯ ತರಲಿಲ್ಲ
ನೀರ್ಗುಡಿಯಲು  ಬರುವ ಪ್ರಾಣಿಗಳು
ಅವನ ಸುದ್ದಿಗೆ ಬರಲಿಲ್ಲ//

ಹೀಗಿರಲೊಮ್ಮೆ ಆ ಯುವಕ
ನೋಡಿದನೊಂದ  ಜಿಂಕೆ ಮರಿಯ
 ಭಯದಿಂದಲಿ ಅದು ನಡುಗಿತ್ತು
ಬೇಡುತ ರಕ್ಷಣೆಯ//
ಕೊರಳಲಿ ಗೆಜ್ಜೆ ಕಟ್ಟಿತ್ತು
ಯಾರೋ ಸಾಕಿದ ಗುರುತಿತ್ತು.
ಹಿಂದೆ ಮುಂದೆ ನೋಡುತಲಿ
ಯುವಕನ ಬಳಿಗೆ ಬಂದಿತ್ತು.//
ಯುವಕನು ಕರೆದ ಜಿಂಕೆಯನು
ಅಭಯವ ನೀಡಿದ ಮೈದಡವಿ
“ಹೆದರದಿರು ನೀ, ನಾನಿರುವೆ
ನಿನ್ನಯ ಪ್ರಾಣವ ರಕ್ಷಿಸುವೆ” //
ಧುತ್ತನೆ ಬಂದನು ಹುಲಿರಾಯ
“ಕೊಡು ಜಿಂಕೆಯ ಎನಗಾಹಾರ
ಕೊಡದಿರೆ ನೋಡು ಆಗುವುದು
ಕಾಡಿನ ನಿಯಮಕೆ ಅಪಚಾರ” //
“ದಿಟ್ಟಿಸಿ ನೋಡು ಹುಲಿರಾಯ,
ಇದು ಕಾಡಿನ ಪ್ರಾಣಿಯು ಅಲ್ಲ
ಸಾಕಿದ ಪ್ರಾಣಿಯ ಕೊಲ್ಲಲು
ಅಧಿಕಾರವು ಎಂದಿಗೂ ನಿನಗಿಲ್ಲ//
ನಾನಿದನೆಂದಿಗು ಕೊಡಲಾರೆ”
ಎನ್ನುತ ಹುಲಿಗುತ್ತರ ನೀಡೆ
ಕೋಪದಿ ಗರ್ಜಿಸಿ ಹುಲಿರಾಯ
ನೆಗೆದನು ಯುವಕನ ಮೇಲೆ//
ಮನೆಯೋಳಗಿರಲು ಜಿಂಕೆಗೆ ಹೇಳಿ
ಹೋರಾಡಿದ ಯುವಕ ಹುಲಿಯೊಡನೆ
ಮೈಕೈಗಳನು ಕಚ್ಚಲು ಪರಚಲು
ಗಾಯವು ಆಯಿತು ಯುವಕನಿಗೆ//
ಕಾಡಲಿ ಬೆಳೆದ ಯುವಕನಿಗೆ
ಸಹಜದಿ  ಧೈರ್ಯವು ಸಾಹಸವು
ಸೋಲದ ಯುವಕನಿಗೆಂದಿತು ಹುಲಿಯು  
“ಸಾಕು ನಿನ್ನ ಸಹವಾಸವು”//
ಓಡಿಹೋದನು ಹುಲಿರಾಯ
ಮಾಡಿ ಯುವಕನಿಗೆ ಗಾಯ
ಜಿಂಕೆಯ ಮರಿಯು ನೋಡುತ ನಿಂತಿತು
ದುಃಖದಿ ಸುರಿಸುತ ಕಣ್ಣೀರ //
“ನನ್ನನು ಉಳಿಸಲು ಹೋರಾಡಿ
ಆಯಿತು ನಿನಗೆ ಗಾಯ
ಅರೆದು ಹಚ್ಚುವೆನು ಕಾಡಸೊಪ್ಪನು
 ಕೆಲ ದಿನದಲಿ ಗಾಯವು ಮಾಯ” //
ಯುವಕನ ಮನೆಯಲಿ ಜಿಂಕೆಮರಿ
ವಾಸಿಸತೊಡಗಿತು ಸಂತಸದಿ
ಆದರೂ ಕಂಡಿತು ಯುವಕನಿಗೆ
ಏನೋ ಚಿಂತೆಯು ಆ ಮುಖದಿ //
ಕುಳಿತಿರಲೊಮ್ಮೆ  ಯುವಕ ಅಂ
ಗಳದಲಿ ಏನೋ ಮಾಡುತ್ತ
 ಥಟ್ಟನೆ ನಿಂತಿತು  ಜಿಂಕೆಮರಿ
ಕಿವಿ ನಿಮಿರಿಸಿ ಆಲಿಸುತ//
ಕೇಳಿತು  ಮನೆ ಹತ್ತಿರದಲ್ಲೆಲ್ಲೋ
ಇಂಪಾದೊಂದು ಹೆಣ್ಣುದನಿ
ಆ ದಿಕ್ಕಿಗೆ ಓಡಿತು  ಜಿಂಕೆಮರಿ
ಎಂದೂ ಕಾಣದ ಸಂಭ್ರಮದಿ//
“ಎಲ್ಲಿರುವೆ ಚುಕ್ಕಿ ಎಲ್ಲಿರುವೆ?”
ಜಿಂಕೆಯು ಯುವತಿಯ ದನಿಕೇಳಿ
ಓಡಿ ನಿಂತಿದೆ ಅವಳ ಬಳಿ
ನೆಕ್ಕುತ ಅವಳ ಮೈಕೈ //
ತಬ್ಬಿ ಹಿಡಿದಳು ಜಿಂಕೆಯನಾಕೆ
ಮುಖ ಮುಖ ತಾಗಿಸಿ ಅಳುತ
ಇಬ್ಬರ ಪ್ರೀತಿಯ ನೋಡುತಲಿ
ಬೆರಗಾದನು ಆ ಯುವಕ//

ಯುವತಿಯು ಹೇಳಿದಳಾಗ
 “ಇದು ನಾ ಸಾಕಿದ ಜಿಂಕೆ
ಮೈ ಮೇಲಿನ ಚುಕ್ಕಿಯ ನೋಡಿ
ಹೆಸರಿಟ್ಟೆವು ಇದ ನಾವಿದಕೆ //
ಕೆಲದಿನಗಳ ಹಿಂದೆ ಈ ಜಿಂಕೆ
ಕಳೆದು ಹೋಯಿತು ಕಾಡಲ್ಲಿ
ಹುಡುಕುತಲಿದ್ದೆ ದಿನದಿನವು
ಕಂಡೆನು ಇದನಾ ಇಲ್ಲಿ” //
ಯುವಕನು ಹೇಳಿದ ಯುವತಿಗೆ
ಚುಕ್ಕಿಯನುಳಿಸಿದ ಕತೆಯನ್ನು
ತೋರಿದ ಹುಲಿಜೊತೆ ಹೋರಾಡಿ
ತನಗಾಗಿದ್ದ ಗಾಯವನು//
“ಇದೆ ಈ ನಿನ್ನ ಜಿಂಕೆಮರಿ
ಅರೆದು ಹಚ್ಚಲು ಸೊಪ್ಪುಸದೆ
ಮಾಯಿತು ಗಾಯ ಬಲುಬೇಗ
ಪ್ರೀತಿಯಲೊಂದು ಶಕ್ತಿಯಿದೆ”//
“ಬಿಟ್ಟಿರಲಾರೆವು ಇದನು ನಾವ್
ಚಿಕ್ಕಂದಿನಲೇ ಸಾಕಿದೆವು
ನಿನ್ನುಪಕಾರವನು ಮರೆಯುನು
ಮನೆಗೊಯ್ಯುವೆನು ಇದನು”//
ಯುವತಿಯ ಮಾತನು ಕೇಳಿದ ಜಿಂಕೆ
ಓಡಿತು ಯುವಕನ ಮನೆಯೊಳಗೆ
‘ಯುವಕನ ಬಿಟ್ಟು ಬರುವುದು ಹೇಗೆ?’
ಚಿಂತೆಯು ಜಿಂಕೆಯ ಮನದೊಳಗೆ//
“ಹುಲಿಬಾಯಿಂದ ರಕ್ಷಿಸಿದೆ
ಇದನೆಂದಿಗು ನಾ ಕೊಡಲಾರೆ”
ಯುವಕನ ಮಾತಿಗೆ ಯುವತಿಯೆಂದಳು
“ಇದಬಿಟ್ಟು ನಾ ಇರಲಾರೆ.//
ಇರುವೆನು ಚುಕ್ಕಿಯ ಜೊತೆ ಇಲ್ಲೇ
ಇರುವುದೆ  ನಿನಗೆ ತೊಂದರೆ?”
“ತೊಂದರೆಯೇನು ಚುಕ್ಕಿಯ ಬೆಳೆಸಲು
ಒಬ್ಬರ ಬದಲು ಇಬ್ಬರಾದರೆ?”//
ಎನ್ನಲು ಯುವತಿಯು ಒಳಹೋಗಿ
ಚುಕ್ಕಿಯನಪ್ಪಿಕೊಂಡಳು.
ಚುಕ್ಕಿಯ ಕಾರಣದಿಂದ ಯುವಕನು
ಯುವತಿಯನೊಪ್ಪಿಕೊಂಡನು //
ಯುವಕ ಯುವತಿ ಕೂಡಿದರು
 ಜಿಂಕೆಯ ಮುದ್ದಲಿ ಬೆಳೆಸಿದರು
ಕಾಲವು ಕಳೆಯಲು ಅಕ್ಕಪಕ್ಕದಿ
ಸಾಲುಮನೆಗಳು ಬೆಳೆದವು//
ಹೊಳೆದಂಡೆಯ ಮೇಲೊಂದು
ಚಂದದ ಊರೇ ಬೆಳೆಯಿತು
ಮಾನವನೂಡ ಪ್ರಾಣಿಯ ಬಾಳ್ವೆ
ಊರಿಗೆ ಸೊಗಸನು ತಂದಿತು.//
(ನಾ ಡಿಸೋಜ ಅವರ ಕತೆಯನ್ನು ಆಧರಿಸಿ ಬರೆದದ್ದು)
       ಓದಿ ಕೆಟ್ಟಿತು ದುಂಬಿ
ಮನೆಯ ಕಿಟಕಿಯ ಮೇಲೆ ಚಿಕ್ಕ ಗೂಡಿತ್ತು
ಅದರೊಳಗೆ ದುಂಬಿಯು ವಾಸವಾಗಿತ್ತು
ಹಗಲು ಹೊರಗೆಲ್ಲ ಹಾರಾಡಿ ಬಂದು
ಹೂಗಳ ಪರಾಗವನು ಹೀರುತಿತ್ತು.
ರಾತ್ರಿ  ಗೂಡಿಗೆ ಮರಳಿ ಮಲಗುತಿತ್ತು.//
ಆ ಮನೆಯ ಮೇಲೆ ಅದಕೆ ಪ್ರೀತಿ
ಒಳಗೆಲ್ಲ ಓಡಾಟ ಅದರ ರೀತಿ
ಮನೆಯಲ್ಲವದು ‘ಚಿಂತಕರ ಮಹಲು’
ಕವಿಗಳ, ದಾರ್ಶನಿಕರ ಬುದ್ಧಿಜೀವಿಗಳ
ಓಡಾಟವಿತ್ತು ಹಗಲು ಇರುಳು .//
ಮೆಲ್ಲಮೆಲ್ಲನೆ ದುಂಬಿ ಓದಲು ಕಲಿತು
ಗ್ರಂಥಗಳ ನಡುವೆಯೇ ಇರತೊಡಗಿತು
ಉಳಿದ ದುಂಬಿಯ ಕಂಡು ಅದಕೆ
ತಾತ್ಸಾರಭಾವ ಹೆಚ್ಚಾಗ ತೊಡಗಿತು
ತನ್ನ ಬಗೆಗೆ ಜಂಬ ಬರತೊಡಗಿತು//
ಓದಿತು ಓದಿತು ಓದುತ್ತ ಹೋಯಿತು
 ಪುಸ್ತಕದ ಹುಳುವೆ ತಾನಾಯಿತು.
ಹೊರಗೆಲ್ಲೂ ಹೋಗದೆ ಮನೆಯೊಳಗೇ ಇದ್ದೂ
ಹೂಬನದ ಹಾರಾಟ ಮರೆತ್ಹೋಯಿತು
ರೆಕ್ಕೆ ಬಡಿಯದೇ ದಿನ ಬಹಳಾಯಿತು//
“ಉಡ್ಡಯನ ಶಾಸ್ತ್ರ “ ಪುಸ್ತಕದ ಹೆಸರು
ದುಂಬಿ ಓದಿತು ಬಿಗಿಹಿಡಿದು ಉಸಿರು
ಬರೆದಿತ್ತು ಅಲ್ಲಿ ಹಾರಾಟದ ನಿಯಮ
‘ಮೈಭಾರದ ದುಂಬಿಗೆ ರೆಕ್ಕೆ ಚಿಕ್ಕದು
ನಿಯಮದಂತೆ ಅದಕೆ ಹಾರಲು ಆಗದು’//
ಶಾಸ್ತ್ರದಲಿ ಬರೆದಿಹುದು ಸುಳ್ಳಾಗದು
ವಿಜ್ಞಾನಿಗಳ ಮಾತು ಜಳ್ಳಾಗದು
ನಿಯಮಗಳ ವಿರುದ್ಧ ಹೋಗಲಾದೀತೆ?
ಗೂಡಿನವರೆಗಾದರೂ  ಹಾರಲಾದೀತೆ?
ಚಿಂತೆ ಹತ್ತಿತು ಮನದಿ ಹುಳವ ಬಿಟ್ಟಂತೆ !//
ತೆವಳುತ್ತ ಬಂತು ತನ್ನೊಂದು ಗೂಡಿಗೆ
ಕಿವಿಯ ತೆರೆದಿತ್ತು ದುಂಬಿಯ ಹಾಡಿಗೆ
ಹೌದಲ್ಲ! ದುಂಬಿಗಳಿನ್ನು   ಹಾರುತ್ತಲೇ ಇವೆ 
ನಿಯಮದ ವಿರುದ್ಧ ಸಾರುತ್ತಲೇ ಇವೆ
ಹಾಗಿದ್ದರೆ ವಿಜ್ಞಾನ ಹೇಳುವುದು ಸುಳ್ಳೇ?//
ಮರೆತು ಹೋಯಿತು ಈ ದುಂಬಿಗೆ ಹಾರುವುದು
ತೆವಳುತ್ತ ತೆವಳುತ್ತ ದಿನವೆಲ್ಲ ಸಾಗುವುದು
ಹಾರುವ ದುಂಬಿಗಳ ಕಂಡು ಇದಕೆ
ಕನಿಕರವು ಮೂಡುವುದು ‘ಓದದೇ ಬರೆಯದೆ
ಸುಮ್ಮನೆ ಇರುವ ಬದುಕೊಂದು ಬದುಕೇ?’//
 ಅಂತಿರಲು ರಭಸದಲಿ ಹಕ್ಕಿಯೊಂದು
ಹಾರಿ ತಾಗಿತು ಈ ದುಂಬಿಯ ಗೂಡಿಗೆ
ಭಯಗೊಂಡ ದುಂಬಿ ಛಂಗನೆ ನೆಗೆದು
ಹಾರಿ ತಲುಪಿತು ಚಿಕ್ಕ ಹೊದರ ಒಳಗೆ
ಆಶ್ಚರ್ಯ! “ತಾನೀಗ ಹಾರಿ ಬಂದೆನೆ? //
ಮೊದಲೆಲ್ಲ ಹಾರಿದ್ದೆ; ಈಗಲೂ ಹಾರಿದೆ
ನಡುವೆ ಒಂದಿಷ್ಟು ಶಾಸ್ತ್ರವನ್ನು ಓದಿದೆ
ತರ್ಕವು ಕಸಿಯಿತು ಸಹಜ ಶಕ್ತಿಯನು
ವಿಚಾರವು ಅಳಿಸಿತು ವಿಶ್ವಾಸವನ್ನು
ಒಪ್ಪಿಕೊಳಬೇಕೇಕೆ ಇಂಥ ವಿದ್ಯೆಯನ್ನು ?//
ಇರಲೆಲ್ಲ ಓದು ಮಾನವ ಜೀವಿಗೆ
ಇರಲಿ ಸಹಜದ ಬದುಕು ಹಾರಾಟ ನಮಗೆ” 
ಮತ್ತೆಂದೂ ಓದದ ದುಂಬಿ
ಕೆಡಲಿಲ್ಲ ತರ್ಕವ  ನಂಬಿ
ಉತ್ಸಾಹ ಚೆಲ್ಲಿತು  ತುಂಬಿ//
           -ಗಣೇಶ ಹೆಗಡೆ, ಜನವಿ ಗಾಳಿಬೀಡು.

  

        ಸತ್ಯದ ಪ್ರತೀಕ
ಭಾರತದ ಕೊನೆಯಲ್ಲಿ ಬರುವ ಕಥೆಯೇ ಇದು
ಪಾಂಡವರು ಸ್ವರ್ಗಾರೋಹಣಕೆ ಹೊರಟ ಕಥೆಯಿದು
ಒಬ್ಬರ ಹಿಂದೊಬ್ಬರು ಹಿಮಗಿರಿಯ ತಪ್ಪಲಲಿ
ಏರಿಳಿಯುತಾ ಹೊರಟ ಧೀರ ಪಯಣವಿದು!//
ಸಾಗಲಾಗದೆ ಹೋದರು ಬಹುದೂರ ಪಯಣದಲಿ
ಒಬ್ಬಬ್ಬನೂ ತತ್ತರಿಸಿ ಬೀಳ ತೊಡಗಿದನು
ಕುಸಿದು ಬಿದ್ದರು, ಕರಗಿ ನೀರಾಗಿ ಹೋದರು
ಉಳಿದನೊಬ್ಬನೆ ಧೀರ ಯುಧಿಷ್ಠಿರನು//
ಹಿಂದೆ ನೋಡಲು ಅಲ್ಲಿ ನಾಯಿಯೊಂದಿತ್ತು
ಮುಂದೆ ನಡೆದಂತವನ ಹಿಂದೆಯೇ ಬಂದಿತ್ತು
ಸತ್ಯದೊಡನವನ ಸಾಂಗತ್ಯದಂತೆ
ಒಬ್ಬರನೊಬ್ಬರು ಬಿಡದ ನಿಷ್ಥೆಯಲ್ಲಿತ್ತು!
‘ನಡುವೆ ಜೊತೆಬಿಟ್ಟರು ತಮ್ಮಂದಿರು
ದಣಿದು ಬಿದ್ದಳು ಧರ್ಮಪತ್ನಿ ದ್ರೌಪದಿ 
ಕಾಲುಸೋಲದ ಕಾಲನಂತೆ ಈ ನಾಯಿ
ಸಂದೇಹಗೊಳದೆ ಸವೆಸಿತ್ತು ಹಾದಿ.//
ಬಾರದೇ ಹೋದರು ಬರಲೇ ಬೇಕಾದವರು
ಬಾ ಎಂದು  ಕರೆಯದಲೇ  ತಾ  ಬಂದುದು
ಬರಲೆನ್ನ ಜೊತೆ ನಾಯಿ ನಾ ನಡೆವತನಕ
ಇರಲೆನ್ನ ಜೊತೆಗಿದು ಸತ್ಯದ ಪ್ರತೀಕ.//
ಹೋಗಿ ನಿಂತರು ಸ್ವರ್ಗದ ಬಾಗಿಲ ಬಳಿ
ತೆರೆಯಿತದು ತೋರಿ ಧರ್ಮಜಗೆ ಸ್ವಾಗತ
“ಬನ್ನಿ ಒಳಬನ್ನಿ” ಕರೆದ  ದ್ವಾರಪಾಲಕ
“ಬರಬಹುದು ಇಲ್ಲಿ  ಕಷ್ಟ ಪಟ್ಟ ನರ ಮಾತ್ರ!//
ಇದೇನು ಬಂದಿದೆ ನಿಮ್ಮ ಹಿಂದೆ ನಾಯಿ?
ಇದಕೆಲ್ಲ ಇಲ್ಲಿ ಇಲ್ಲ ಜಾಗ
ಕಳುಹಬಿಡಿ ಅದನು ಹಿಂದಕೆ, ಹೋಗಲಿ
ಬಂದುದೆಲ್ಲಿಂದಲೋ ಅಲ್ಲಿಗೀಗ  //
ಉತ್ತರಿಸಿದ  ಧರ್ಮಜ ಹೆಜ್ಜೆ ಮುಂದಿಡದೆ
, “ನಾ ಬಂದುದೆಲ್ಲಿಂದಲೋ ಅಲ್ಲಿಂದಲೇ
ಬಂದಿದೆ ಈ ನಾಯಿ. ನಡುವೆ ಬಂದವರೆಲ್ಲ
ಕೈ ಬಿಟ್ಟರೆನ್ನನು ನಡುವಿಂದಲೇ! “ //
ಬರಲಾರೆ ನಾನೊಳಗೆ ಇದನು ಬಿಟ್ಟು
ಅಳಿದು ಹೋದರು ಸೋದರರು ಹೆಂಡತಿಯು
ಬಾಳಿನುದ್ದಕೂ ಕಂಡೂ ಕಾಣದಂತೆ
ಅನುಸರಿಸಿ ಬಂತೆನ್ನ ಈ ನಾಯಿಯು!//
ಬೇಡವೆನಗೆ ಬೇಡ ಇದನುಳಿದು  ಸ್ವರ್ಗ
ತುಳಿಯಲಾರೆನು ನಂಬಿಕೆ ಬಿಟ್ಟ ಮಾರ್ಗ
ಒಡನಾಟವಿತ್ತಿದಕೆ  ಒಡನಾಡಿಯಾಗದಿರೆ
ನಾ ನಡೆದ ಧರ್ಮಕ್ಕೆ ಯಾವ ಅರ್ಥ?//
ಮುಚ್ಚಿಕೊಳಲಿ ನಿಮ್ಮ ಸ್ವರ್ಗದ ಬಾಗಿಲು
ಇದರ ಜೊತೆಗಿರುವುದೆನಗೆ ಅದಕು ಮಿಗಿಲು
ಬರುವೆನೆಂದರು ನಾ ಬರಲಾರೆನಿನ್ನೊಮ್ಮೆ
ಎನುತ ಧರ್ಮಜ ಹಿಂದಿರುಗಿ ನೋಡಿದನು//
ಕೇಕೆ ಹಾಕಿತು ಸ್ವರ್ಗ! ಬಂದ ದೇವತೆಗಳು
ಸೇರಿ ನಿಂದರು ಧರ್ಮಜನ ಸ್ವಾಗತಕ್ಕೆ
ನಾಯಿಯ ಬದಲಿಗೆ ನಾರಾಯಣ ನಿಂತಿದ್ದ
ಮೆಚ್ಚಿ ಧರ್ಮಜನ ಸತ್ಯಪಥಕೆ!//
ಕಲಿತಿದ್ದನಂದು ಧರ್ಮಜನು ಬಾಲ್ಯದಲಿ
ಒಂದನೇ ಪಾಠ ಅದು ‘ಸತ್ಯದ ಪಾಠ’
ಬಾಳ ಪಯಣಕೆ ಸಾಕೊಂದೆ ಈ ಪಾಠ
ಮತ್ತೆ ತೆರೆಯಲಿಲ್ಲಾತ ಎರಡನೆಯ ಪುಟ!//
ತುರುಕ ಬೇಕಿಲ್ಲ ಹೊರೆಹೊರೆಯ ತಲೆಯೊಳಗೆ
ಮರುಗಬೇಕಿಲ್ಲ ತಾ ಕಲಿತುದು ಅಲ್ಪ.
ಕಲಿತುದನು ಜೀವನದಿ ಅಳವಡಿಸಿ ನಡೆದರೆ
ಎನಿಸುವನು ಅವನೇ ಶ್ರೇಷ್ಠ.!//
           -ಗಣೇಶ ಹೆಗಡೆ, ಜನವಿ ಗಾಳಿಬೀಡು.

  
ದೇವನ ಕೊನೆಯ ನಿರ್ಮಾಣ
ಬಹಳ ಹಿಂದಿನ ಮಾತು, ದೇವನು
ನಿರ್ಮಿಸಿದ ಪಶು, ಪಕ್ಷಿ, ಕ್ರಿಮಿ, ಕೀಟಗಳನು
ಮತ್ತೆ,  ‘ಗಿಡ ಮರ ಬಳ್ಳಿ ಹೂವು ಹಣ್ಣು
ನದಿ ಬೆಟ್ಟ ಕಣಿವೆ ಪರ್ವತ’ ಗಳನು
ಕೊನೆಯಲ್ಲಿ ನಿರ್ಮಿಸಿದ ನರನನು.
ಸುಸ್ತಾಗಿ ಹೋಯಿತು ದೇವನಿಗೆ
ಬಹುದೊಡ್ಡ ಕಾರ್ಯ; ಸಮಯ ಹಿಡಿಯಿತು,
ಆದರೂ ಅವನಿಗೆ ಸಂತೃಪ್ತಿ.
ನಿರ್ಮಿಸಬೇಕಾದದ್ದನ್ನು ನಿರ್ಮಿಸಿಯಾಯಿತು.
ನಿರ್ಮಿಸಲು ಏನೊಂದೂ ಉಳಿಯದಾಯ್ತು.
ಎಲ್ಲಾ ರಚನೆಗಳಿಗೆ ಜೀವಕೊಟ್ಟ.
ನಿರ್ಜೀವಗಳಿಗೆಲ್ಲ  ಜಾಗ  ಕೊಟ್ಟ.
ಸ್ಥಾನ ಮಾನಗಳನು ನಿರ್ಧರಿಸಿ ಉರುಳಿಬಿಟ್ಟ.
“ಆಟ ಶುರುವಾಗಲಿ” ಎಂದುಬಿಟ್ಟ.
ನೋಡಿ ಆನಂದಿಸಲು ಎಲ್ಲೋ ಅಡಗಿಬಿಟ್ಟ!
ತುಸು ಸಮಯ ಕಳೆಯೆ ನರನು ಹುಡುಕಿ ಬಂದ
 ನಿವೇದಿಸಿದ ದೇವನಿಗೆ , “ನಾನಾಗಿಹೆ  ಒಂಟಿ,
ಜೀವನ ಬೇಸರ, ಬೇಕೊಂದು ಜೊತೆ.
ಒಂದಿಷ್ಟು ಸುಖ-ದುಃಖ, ಮಾತು-ಕತೆ”
  ಅರ್ಥಾವಾಯ್ತು ದೇವನಿಗೆ ಅವನ ಬೇಸರ,
ಮೂಡಿತವನಲಿ ಒಂದಿಷ್ಟು ಕನಿಕರ
ಆದರೂ  “ಮಾಡುವುದೇನು ಈಗ?
 ನಿರ್ಮಿಸಲು ಏನೊಂದೂ ಉಳಿದಿಲ್ಲವಲ್ಲ?”
ಸುಮ್ಮನೆ ಕಳುಹಿಸಲು ಮನಸು ಒಪ್ಪುವುದಿಲ್ಲ !
ಇರು, ಸ್ವಲ್ಪ ತಾಳು ಎಂದ ದೇವ
ಹೆಣ್ಣನ್ನು ನಿರ್ಮಿಸಲು ಯೋಚಿಸಿದ.
ಪಶು-ಪಕ್ಷಿ, ಗಿಡ-ಮರ- ಬಳ್ಳಿಗಳ ಬೇಡಿದ,
ಇಷ್ಟಿಷ್ಟು ಕೊಡಿರಿ ನಿಮ್ಮ ಗುಣಗಳನು ‘ ಎಂದ
ಚಂದ್ರನಿಂದ ಹೊಳಪು, ನವಿಲಿಂದ ಒನಪು,
ಹಂಸನಿಂದ ನಡೆಯ, ಹಾವಿಂದ ಜಡೆಯ,
ಗಿಳಿಯಿಂದ ಮಾತು, ಪಾರಿವಾಳದ ಗೋಣು
ನದಿಯ ಚಂಚಲತೆ ಹೂವಿಂದ ಕೋಮಲತೆ
ತಿರುಪೆ ಎತ್ತಿದ ದೇವ ತಾ ಕೊಟ್ಟುದುದನೆ
ಪಡೆಯಲು, ಮಾತಿಗೆ ತಪ್ಪದಂತೆ ನಡೆಯಲು.
 ಬಲು ಸುಂದರ ಅವನ ಕೊನೆಯ ನಿರ್ಮಾಣ
ನರನ ಜೊತೆಮಾಡಿ  ಕಳುಹಿದ ನಾರಾಯಣ.
    ಕಳೆದಿರಲಿಲ್ಲ ಒಂದು ವಾರ ಕೂಡಾ
ನರನಳುತ ಬಂದ, “ನಾರಾಯಣಾ,
ಏನಂತ  ನಿರ್ಮಿಸಿದ ಈ ಹೆಣ್ಣ?
ತಾಳಲಾರೆನು ಇವಳ ಉಪಟಳವನ್ನ
ಜೊತೆಗಾರ ಬೇಕೆಂದು ಕೇಳಿ ಬಂದೆ
ಪಿಶಾಚಿಯ ಜೊತೆಮಾಡಿ ಕಳುಹಿಬಿಟ್ಟೆ
 ಗಿಳಿಯಂತೆ ಮಾತೇನೋ ಮಧುರ
ಆಡುತ್ತ ನೀಡುವಳು ಉಪದ್ರವ
ಸಲುಗೆಯಿಂದಿರುವಾಗ ಸುಂದರ
ಕೋಪವೇರಲು ರೂಪ ಘನಘೋರ!
ಎಲ್ಲ ವಿರೋಧಾಭಾಸಗಳ ಗಣಿ ಇವಳು
ಬಲು ಕಷ್ಟ ಇವಳನ್ನು ಸಂಭಾಳಿಸಲು
ನಿನ್ನ ಬಳಿಯೇ  ಇರಲಿ ಇವಳು
ಒಂಟಿ ಬಾಳೇ ಇದಕಿಂತ ಮೇಲು”.
     ದೇವ ಕರುಣಾಮಯಿ.  “ಆಯ್ತು” ಎಂದ.
ಹೆಣ್ಣನ್ನು ತನ್ನಲ್ಲೇ ಉಳಿಸಿಕೊಂಡ.
ವಾರ ಕಳೆಯಲು ತಿರುಗಿ ಬಂದ. ನರನ
“ಹೊಸದು ಬೇಡಿಕೆಯೇನೋ”  ಹೆದರಿಕೊಂಡ!
  “ದೇವ ಮನ್ನಿಸು ನಾ ತಿರುಗಿ ಬಂದಿರುವೆ,
ಅವಳಿಲ್ಲದೆ ವಾರಪೂರ್ತಿ ನೊಂದಿರುವೆ.
ಕಾಟ ಕೊಟ್ಟಳು ತುಂಬನಿಜ.ಆದರೂ
  ನೆನಪಾಗಿ ಕಾಡುವಳು ಎಲ್ಲಿಗೆ ಹೋದರೂ!
ಇಲ್ಲವಾಗಿದೆ ಊಟ, ನಿದ್ದೆ ವಾರಪೂರ್ತಿ
ಕಳುಹಿಬಿಡು ಅವಳನ್ನು ಇನ್ನೊಂದು ಸರ್ತಿ”
ಬೇಕೆಂದಾಗ ದೇವ ಕಳುಹಿಕೊಟ್ಟ,
ಬೇಡವೆನ್ನಲು ಬಳಿಯೆ ಇಟ್ಟುಕೊಂಡ.
ಹೆಣ್ಣನ್ನು ನಿರ್ಮಿಸಿದ ತಪ್ಪಿಗೆ ದೇವ
ತನ್ನ ತಲೆಯನೆ ತಾನು ಚಚ್ಚಿಕೊಂಡ!
   ಇಲ್ಲವಾಯ್ತು ದೇವಗೀಗ ಕರುಣೆ
ದೂರವಾಯ್ತವನಲ್ಲಿ  ಎಂದಿನ ತಾಳ್ಮೆ ,
ಇನ್ನು ಕೇಳುವುದೆಂತು  ನರನ ಗೋಳು?
“ಮಾಡುವೆನು ಇರು, ಸ್ವಲ್ಪತಾಳು
ನಿನ್ನ ಬೇಡಿಕೆಯಂತೆ ನಿರ್ಮಿಸಿದೆ ಇವಳನ್ನ
ಬೇಡವೆಂದರೆ ಹೇಗೆ ಈಗ ಇವಳು?
ಇನ್ನು ನೀ ಬರಬೇಡ ನನ್ನ ಬಳಿಗೆ
ನನ್ನ ತಿರ್ಮಾನವಿದು. ನಿನ್ನದು ನಿನಗೆ!”
  ದೂರವಿರೆ ಕಾತರ, ಜೊತೆಯಲಿರೆ ಬೇಸರ
ಹೀಗೆ ಸಾಗಿದೆ ‘ನರನ  ಜೊತೆ ನಾರಿ’
ಕರೆದು ‘ದಾರಿಯ ಮಾರಿ’ಯನು ಸುಮ್ಮನೆ
ಕಷ್ಟಕ್ಕೀಡಾದ  ಮೂರ್ಖನ ಪರಿ! 
        -ಗಣೇಶ ಹೆಗಡೆ, ಜನವಿ ಗಾಳಿಬೀಡು.







ಒಳಮುಖದಿ ಕೇಂದ್ರ
ಇರುಳ ಕತ್ತಲಿನಲ್ಲಿ ಕಣ್ಣು ಕುರುಡು
ಕಲ್ಪನೆಗೋ ಮುಕ್ತ ಸ್ವಾತಂತ್ರ್ಯ.
ಹರಿವನಕ ಹರಿಯಲಿ, ಇಲ್ಲ ಅಡೆತಡೆ ಬೇಲಿ
ಕಲ್ಪನೆಗೆ ಕತ್ತಲೆಯ ಸಾಂಗತ್ಯ!
ಹಗಲಲ್ಲಿ ರವಿಕಿರಣ ಬೆಳಗಿದೆ ಜಗವ
ಮೂಡಿಸಿ ಮನದೊಳಗೆ ಬಿಂಬ
ಕಣ್ಣೆದುರ ಬಗೆಯ ಬಣ್ಣಗಳ ಆಚೆಗಿಹ
ಬಣ್ಣವಿಲ್ಲದ ಬಯಲನ್ನು ನಂಬ!
ಹೊರಗಣ್ಣ ತುಂಬೆಲ್ಲ ಜಗವೇ ತುಂಬಿಹುದು
ಒಳಗಣ್ಣಪಟಲ  ಖಾಲಿ ಖಾಲಿ
ಕಾರ್ಯ ಹಿಂದಿರುವ ಕಾರಣವ ಹುಡುಕುತ್ತ
ಹೊರಡುವನು ಪ್ರತಿಭಾಶಾಲಿ!
ಪರಿಧಿಯ ಒಳಮುಖದಿ ಕೇಂದ್ರವಿಹುದು
ಆಗಿಹುದು ಅಲ್ಲೊಂದು ಶೂನ್ಯ
ಹೊರಮುಖದಿ ಹೊಮ್ಮಿದ ಕೋಟಿಕಿರಣಗಳಿಂದ
ರವಿಯು ತಾನಾಗಿಹನು ಲೋಕಮಾನ್ಯ.!
        -ಗಣೇಶ ಹೆಗಡೆ, ಜನವಿ ಗಾಳಿಬೀಡು.



     ಪಾಪ ಪುಣ್ಯದ ಹೊದಿಕೆ
ಈ ಕತೆಯ ನೀವು ಕೇಳಿರಲು ಬಹುದು
ಈ ಕತೆಯನೀತಿಯ  ತಿಳಿದಿರಲು ಬಹುದು//
ಇದ್ದನೊಬ್ಬ ರಾಜ ಬಹಳ ಹಿಂದೆ
ಹೊಗಳುಭಟ್ಟರು ಅವನ ಹಿಂದೆ ಮುಂದೆ
ಅಧಿಕಾರ ಅಂತಸ್ತು ಸೇನೆಯಾದಿ
ಇರಳವಗೆ ಯಾವ ಕೊರತೆಯೆಂಬೆ?//
ಇರಲಿಲ್ಲ ಅವನಿಗೆ ಬೇಟೆಯ ಹುಚ್ಚು
ಇರಲಿಲ್ಲ ಆಕ್ರಮಣ ಅವಗೆ ಮೆಚ್ಚು
ಇತ್ತವಗೆ ಒಂದೇ ಒಂದು ಖಯಾಲಿ
ಚೆಂದದುಡಿಗೆಯಲಿ ಹೊರಡಬೇಕು ಸವಾರಿ.//
ಪ್ರಜೆಗಳಿಗೆ ತಿಳಿದಿತ್ತು ರಾಜನ ಇಷ್ಟ
ಕಪ್ಪಕಾಣಿಕೆಗಳು ಬರಿಯ ಅಂದದ ವಸ್ತ್ರ.
ಚೆಂದ ಚೆಂದದ ಬಣ್ಣ ಬಣ್ಣದ ವಸ್ತ್ರ
ಉಟ್ಟು ರಾಜ ಮೆರೆಯುತಿದ್ದ ಸರ್ವತ್ರ.//
ಅಂತಿರಲು ಒಂದು ದಿನ ರಾಜ ಸಭೆಗೆ
ಬಂದರು ದೂರದೂರಿನ ನೇಕಾರರು
‘ನೆಯುವೆವು ನಾವು ವಿಶೇಷ ಉಡುಪು
ಕಂಡಿಲ್ಲ ನೀವೆಂದು ಇದರ ಸೊಬಗು,//
ಪುಣ್ಯವಂತರು ಮಾತ್ರ ಕಾಣಬಲ್ಲರು ಇದನು 
ಪಾಪಿಷ್ಟರಿಗೆ ಪಾಪ ಆಗೋಚರವು
ಕಂಡಿಲ್ಲ ಕೇಳಿಲ್ಲ ಜಗದೊಳು ಅಚ್ಚರಿ ಇದು
ನಿಮಗಾಗಿ ಇಲ್ಲಿದ್ದು ನೆಯುವೆವು ನಾವು’//
ಎನಲು ರಾಜಗಚ್ಚರಿ, ಸಂತಸವೂ ಆಯ್ತು
‘ಆಗಲಿಲ್ಲಿ ಹೊಸಬಟ್ಟೆಯ ನೇಯ್ಗೆ’
ಕರೆದು ಮಂತ್ರಿಗೆ ಬೇಸಸಿದ ‘ ಮಾಡಿರಿ
ಅವರಿಗೆ ಬೇಕಾದ ಎಲ್ಲ ವ್ಯವಸ್ಥೆ’//
ಉಳಿಯಲು ಅವರಿಗೆ ಮನೆಯ ನೀಡಿದರು
ಊಟೋಪಚಾರ ಅನುಕೂಲ ಮಾಡಿದರು,
ಒಂದು ಕೇಳಲು ಎರಡನ್ನು ಕೊಟ್ಟು
ನೇಕಾರರನು  ಸಂತುಷ್ಟ ಗೊಳಿಸಿದರು.//
ಸುದ್ದಿ ಹರಡಿತು ಆ ನಗರದ ತುಂಬ
ಜನರಲ್ಲಿ ಮೂಡಿತು ಅಚ್ಚರಿಯ ಬಿಂಬ
ಹೊಸಬಗೆಯ ಬಟ್ಟೆ ತೊಡುವನು ರಾಜ
ತಪ್ಪದೆ ತಾವೆಲ್ಲ ನೋಡಬೇಕೆಂಬ //
ಆದರೂ ಮುದಿತವರೆದೆಯಲ್ಲಿ ಅಳುಕು
ಪುಣ್ಯವಂತರಿಗಷ್ಟೇ ಕಾಣುವುದು ಉಡುಪು
ಕಾಣದಿದ್ದರೆ ತಾವು ಪಾಪಿಯಾದೇವೆಂದು
ಹೇಳಬೇಕೆಂದರು, ‘ತಾವು ಕಂಡೆವೆಂದು’//
ವಾರ ಕಳೆಯಿತು ಒಂದು ಎರಡು ಮೂರು
ಸಿದ್ಧವಾಯಿತು ರಾಜನ ವಸ್ತ್ರವೆಂದು
ಹೇಳಿದ  ನೇಕಾರರಿಗೆ ರಾಜನಿತ್ತ
ಬಗೆಬಗೆಯ ಬಹುಮಾನ ಪಡೆದುಕೊಂಡು //
ಹೊರಟರು ನೆಕ್ಕರರು ಮುಂದಿನ ಊರಿಗೆ
ಸಜ್ಜುಗೊಂಡಿತು ನಗರ ರಾಜನ ಪೇರಿಗೆ
ಜನರೆಲ್ಲಾ ಸೇರಿ ರಾಜಬಿದಿಯಲಿ
ಪುಳಕಗೊಂಡರು ಒಡೆಯನ ಕಾಣ್ವ ಆಸೆಯಲಿ.//
ಮತ್ತೆ ಎದೆಗುದಿಯಿತ್ತು ಮನದ ಒಳಗೆ
‘ರಾಜ ಉಡುಪು ಕಾಣದಿದ್ದರೆ ಹೇಗೆ?
 ಕಾದು ನೋಡೋಣ ಜನರಿರುವರು ಬಹಳ
ಆಗುವುದು ಎಲ್ಲರಿಗೂ ಹೇಗೋ ಹಾಗೆ’//
  ಬಂತು ಬೀದಿಯಲಿ ರಾಜನ ಮೆರವಣಿಗೆ
ಕೈಬೀಸುತರಾಜ ರಥದ ಒಳಗೆ
ಕಣ್ಣುಜ್ಜಿ ನೋಡಿದರು ಮತ್ತೆ ಮತ್ತೆ
ರಾಜ ತೊಟ್ಟಿರುವ ಉಡುಪಿನೆಡೆಗೆ//
ಇರಲಿಲ್ಲ ರಾಜನ ಮೈಮೇಲೆ ವಸ್ತ್ರ
ಇಣುಕಿತ್ತು ತುಂಡು ಒಳಚೆಡ್ಡಿ ಮಾತ್ರ
 ರಾಜನ ವಿಚಾರ! ಬಿಡಲಿಲ್ಲ ಬಾಯಿ
ಪಾಪಿಗಳಾಗಲಿಲ್ಲ ಸತ್ಯವನು ಹೇಳಿ.//
ಅಮ್ಮನ ಜೊತೆಬಂದ ಪುಟ್ಟ ಮಗುವೊಂದಿತ್ತು
ಎಲ್ಲರಿಗೂ ಕೇಳ್ವಂತೆ ಜೋರಾಗಿ ನಕ್ಕಿತು
“ರಾಜನ ಮೈ ಮೇಲೆ ಇಲ್ಲ ಬಟ್ಟೆ,
ರಾಜನೊಳ ಚೆಡ್ಡಿಯ ಕಂಡುಬಿಟ್ಟೆ”//
ಕೇಳಿ ರಾಜನಿಗಾಯ್ತು  ಇರುಸು ಮುರುಸು
ತೋರಲಾಗದೆ ಬಾಲನ ಮೇಲೆ ಮುನಿಸು
‘ಸತ್ಯ ನುಡಿದಿರಬಹುದೆ ಪುಟ್ಟ ಮಗುವೂ?
ಮೋಸ ಮಾಡಿರಬಹುದೇ ನೆಕಾರನು?’//
ಪಾಪದ ಭೀತಿ ರಾಜನಿಗೂ ಇತ್ತು
ತೊಡದ ಬಟ್ಟೆಯ ಮೇಲೆ ಅನುಮಾನವಿತ್ತು
ಕಾಣದ ಬಟ್ಟೆಯ ಬಗೆಗೆ ಮಾತನಾಡಿದರೆ
ತಾನೇ ಪಾಪಿಯಾಗುವ ಭಯವು ಇತ್ತು.//
ಪಾಪ ಪುಣ್ಯದ ಹೊದಿಕೆ ಹೊದ್ದ ಸತ್ಯ
ಬಯಲಾಯ್ತು ಬಾಲಕನ ಮಾತಿನಿಂದ
ನಂಬಿಕೆಯ ಮುಂದಿಟ್ಟು ನಡೆವ ಜಗದಲ್ಲಿ
ಲಾಭ ಪಡೆವರು ಕೆಲರು ಮೋಸದಿಂದ.//
        -ಗಣೇಶ ಹೆಗಡೆ, ಜನವಿ ಗಾಳಿಬೀಡು.

  
ರಚನೆ -    -ಗಣೇಶ ಹೆಗಡೆ,ನವೋದಯ ವಿದ್ಯಾಲಯ, ಗಾಳಿಬೀಡು




































No comments:

Post a Comment