Sunday, 19 July 2015

ಗೆಲಿಲಿಯೋ 
-ಗಣೇಶ ಹೆಗಡೆ, ಜ.ನ.ವಿ. ಗಾಳಿಬೀಡು
ದೃಶ್ಯ
ಸೂತ್ರದಾರ- ಹೋಯ್, ಮಾರಾಯ್ರೇ, ನೀವು ಎಲ್ಲಿಗೆ ಹೊರಟದ್ದು?
ದಾರಿಗ- ಇದು ಎಂಥ ಅಪಶಕುನದ ಮಾತು?
ಸೂತ್ರದಾರ-ನೀವು ಎಲ್ಲಿಗೆ ಹೊರಟದ್ದು ಎಂದು ಕೇಳಿದರೆ ಅಪಶಕುನವಾಯ್ತೋ?
 ದಾರಿಗ-ಅಲ್ಲವೇ? ಯಾರಾದರು ಮನೆಯಿಂದ ಹೊರಟಾಗ ಎಲ್ಲಿಗೆ ಎಂದು ಕೇಲಬಾರದು. ತಿಳಿಯಿತೆ?  ನಿನ್ನಡಿಗ ಎರಡನೆಯದು. ಹೋದ ಕೆಲಸ ಆದಂತೆಯೇ!
ಸೂತ್ರದಾರ-ಹೌದೆ, ಮೊದಲನೇ ಅಪಶಕುನ ಯಾವುದು ಅಂತ ಕೇಳಬಹುದೇ?
 ದಾರಿಗ-ಮನೆಯಿಂದ ಅಂಗಳಕ್ಕೆ ಇಳಿದದ್ದೇ ತಡ ಬೆಕ್ಕು ಅಡ್ಡಬಂತು ಮಾರಾಯ್ರೆ
ಸೂತ್ರದಾರ-ಅಂದರೆ ಈಗ ನಾನು  ಬೆಕ್ಕಿಗೆ ಸಮಾನ ಎಂದಾಯ್ತು 
 ದಾರಿಗ-ಹಾಗಂತ ನಾನು ಹೇಳಿದನೆ?
ಸೂತ್ರದಾರ-ಎಂಥದ್ದು ಮಾರಾಯ್ರೇ, ೨೧ನೇ ಶತಮಾನದಲ್ಲೂ ಇಂಥ ಮೂಢ ನಂಬಿಕೆ. ಇದನ್ನೆಲ್ಲಾ ನಿಮಗೆ ಯಾರು ಹೇಳಿದ್ರು?
 ದಾರಿಗ-ನಮ್ಮ ಅಜ್ಜ   ಹೇಳ್ತಾ  ಇದ್ರು
ಸೂತ್ರದಾರ-     ಅಜ್ಜನನ್ನು ನಂಬು ಆದರೆ ಅಂವ ಹೇಳಿದ ಇಂಥ ಮೂಢ ನಂಬಿಕೆಯ ಮಾತನ್ನು ನಂಬಬೇಡ.                
 ದಾರಿಗ-ಇಲ್ಲಪ್ಪ, ನಾನು ನನ್ನ ಹಿರಿಯರ ಮಾತನ್ನು ತೆಗೆದು ಹಾಕುವುದೇ?
ಸೂತ್ರದಾರ-ಹಿರಿಯರನ್ನು ನಂಬುಗೌರವಿಸು. ಆದರೆ ಅವರು ಹೇಳುವ ಎಲ್ಲಾ ಮಾತನ್ನು ನಂಬಬೇಡ. ಅವರ ಮಾತಿನ ಹಿಂದೆ ಸತ್ಯ ಎನ್ನುವುದು ಇದೆಯೋ ಅಂತ ನೋಡು. ಆಮೇಲೆ ಅದರಂತೆ ನಡೆ . ಅಜ್ಜ  ಆಳದ ಮರ ಎಂದು ನೇಣು ಕಾಕ್ಕೊಳ್ಳಕ್ಕೆ ಆಗುತ್ತದೆಯೇ?
 ದಾರಿಗ-   ಓಹೋ ನೀನೊಬ್ಬ ದೊಡ್ಡ  ಸತ್ಯವಾದಿ. ಮೂಢ ನಂಬಿಕೆಯ ವಿರುದ್ಧ ಮಾತಾಡ್ತಿಯಲ್ಲ.  ವಿಜ್ಞಾನಿಯೋ
ಸೂತ್ರದಾರ-ಬಿಡ್ತು ಅನ್ನು ನನ್ನಂಥವರೆಲ್ಲ ವಿಜ್ನಾನಿಯಾಗಿದ್ದಿದ್ರೆ ಜಗತ್ತು ಹೀಗೆ ಇರ್ತಿರಲಿಲ್ಲ.  ಆದರೆ ಒಂದು ಮಾತು, ನನಗೆ ವಿಜ್ಞಾನದ ಬಗ್ಗೆ ಆಸಕ್ತಿಯಿದೆ
ದಾರಿಗ-ನೋಡಿದ್ದೇನೆ ಕಣಯ್ಯ, ನಿನ್ನ ವಿಜ್ಞಾನದ ಪ್ರೀತೀನ. ಎಸ್.ಎಸ್.ಎಲ್.ಸಿ ಯಲ್ಲಿ       ವಿಜ್ಞಾನದಲ್ಲಿ ಫೇಲ್ ಆಗಿದ್ದೀಯ, ಯಾವಾಗ ನೋಡಿದ್ರು  ನಾಟಕ ನಾಟಕ ಅಂತ ಓಡಾದ್ತಿದ್ದೆಅದ್ಯಾವಾಗ್ನಿಂದ    ಬಂತು ವಿಜ್ಞಾನದ    ಪ್ರೀತಿ ?   ವೈಜ್ಞಾನಿಕ ಮನೋಭಾವ.               
ಸೂತ್ರದಾರ- (ಹತ್ತಿರ ಕರೆದು ಗುಟ್ಟಾಗಿ) ಇಂದು ವಿಜ್ಞಾನನಾಟಕಸ್ಪರ್ಧೆ ಇದೆ. ನಮ್ಮೂರಿನ ಮಕ್ಕಳು   ಗೆಲಿಲಿಯೋ ನಾಟಕವನ್ನು ಇಭಿನಯಿಸ್ತಾ ಇದ್ದಾರೆ. ನಾನು ನೋಡೋಲೆ ಹೋಗ್ತಿದ್ದೀನಿ. ನೀನೂ ಬರ್ತಿಯಾ?
 ದಾರಿಗ- ಆಯ್ತಪ್ಪ, ಹೋರಾಟ ಕೆಲಸ ಅಂತೂ ಆಗೋಹಾಗೆ ಕಾಣಿಸ್ತಿಲ್ಲ. ಊರ ಮಕ್ಕಳ ನಾಟಕವನ್ನಾದ್ರೂ ನೋಡೋಣ. ನಡಿ
ದೃಶ್ಯ

(ಗೆಲಿಲಿಯೋ ಒಂದು ಲೋಲಕವನ್ನು ಇಳಿಬಿಟ್ಟು ಪರಿಶೀಲನೆ ಮಾಡ್ತಾ ಇದ್ದಾನೆ. ಆಗ ಆತನ ಮಿತ್ರ ಬರುವನು. )
 ಜಾನ್ - ಹಲ್ಲೋ ಗೆಲಿಲಿಯೋ ಹೇಗಿದ್ದೀಯಾ? (ಗೆಲಿಲಿಯೋ ಪ್ರಯೋಗದಲ್ಲಿ ಮುಳುಗಿದ್ದಾನೆ. ಮಿತ್ರ ಬಂದುದನ್ನು ಗಮನಿಸುವುದಿಲ್ಲ.)  ಹಲ್ಲೋ ಗೆಲಿಲಿಯೋ ಹೇಗಿದ್ದೀಯಾ?
ಗೆಲಿಲಿಯೋ-   ,ಜಾನ್, ಯಾವಾಗ ಬಂದೆ? ನಾನು ಗಮನಿಸಲೇ ಇಲ್ಲ
 ಜಾನ್ - ಈಗಷ್ಟೇ ಬಂದೆ. ನೀನು ಯಾವುದೋ ಪ್ರಯೋಗದಲ್ಲಿ ಮುಳುಗಿ ಮೈ ಮರೆತಿದ್ದೀಯಾ
ಗೆಲಿಲಿಯೋ-ಹೌದು ಜಾನ್ ಲೋಲಕವನ್ನು ನೋಡು, ಇದರ ಚಲನೆಯನ್ನು ಅಭ್ಯಾಸ ಮಾಡ್ತಾ ಇದ್ದೆ. (ಲೋಲಕವನ್ನು ಮಿತ್ರನಿಗೆ ತೋರಿಸುವನು. )
 ಜಾನ್ - ಗೆಲಿಲಿಯೋ, ನಿನ್ನ ಮನೆಯನ್ನೇ ಪ್ರಯೋಗಾಲಯವನ್ನು ಮಾಡಿಕೊಂಡಿರುವೆ. ಆದರೆ ನೀನು ಓದಿರುವುದು ವೈದ್ಯಕೀಯವಲ್ಲವೆ? ನಿನ್ನ ಲೋಲಕ ಅದಕ್ಕೆ ಸಂಬಂಧಪಟ್ಟ ಹಾಗೆ ಕಾಣಿಸುತ್ತಿಲ್ಲ
ಗೆಲಿಲಿಯೋ-ನಿಜ, ಗೆಳೆಯ, ಇದು ಭೌತ ಶಾಸ್ತ್ರಕ್ಕೆ ಸಂಬಂಧಿಸಿದ್ದು. ನನಗೆ ಭೌತ ಶಾಸ್ತ್ರದಲ್ಲೇ ಹೆಚ್ಚು ಆಸಕ್ತಿ
 ಜಾನ್ - ನನಗೆ ಆಶ್ಚರ್ಯ ಆಗ್ತಾ ಇದೆ, ನಿನಗೆ ಚಿಕ್ಕಂದಿನಲ್ಲಿ ವಿಜ್ಞಾನ ಗಣಿತಗಳಲ್ಲಿ ಆಸಕ್ತಿಯೇ ಇರಲಿಲ್ಲ. ವೈಧ್ಯ ವಿಜ್ಞಾನ ಅಭ್ಯಾಸ ಮಾಡಿದೆ. ಈಗ ಭೌತ ಶಾಸ್ತ್ರದಲ್ಲಿ ಪ್ರಯೋಗ ಮಾಡುತ್ತಿರುವೆ.  ನಿನ್ನ ಆಸಕ್ತಿ ಕವಲೊಡೆಯುತ್ತಿದೆ
ಗೆಲಿಲಿಯೋ-ಹೌದು ಹೌದು ಗಿಡಮರಗಳು ಕವಲೊಡೆದ ಹಾಗೆ
 ಜಾನ್ - ಅದಿರಲಿ ನಿನ್ನ ಪ್ರಯೋಗದ ವಿಚಾರವನ್ನು ಸ್ವಲ್ಪ ವಿವರಿಸುವೆಯಾ
ಗೆಲಿಲಿಯೋ-ಆಗಲಿ ಬಾ  , ಇಲ್ಲಿ ನೋಡು, ಉದ್ದವಾಗಿರುವ ಒಂದು ತೆಳ್ಳನೆಯ ದಾರವನ್ನು ತೆಗೆದುಕೊಂಡು ಅದರ ಕೊನೆಗೆ ಒಂದು ಒಂದು ಲೋಹದ ಗುಂಡನ್ನು ಕಟ್ಟಿರುವೆ
 ಜಾನ್ - ಹೌದು, ಸರಿ
ಗೆಲಿಲಿಯೋ- ದಾರದ ಇನ್ನೊಂದು ತುದಿಯನ್ನು ಆಧಾರಕ್ಕೆ ಬಂಧಿಸಿರುವೆ
 ಜಾನ್ - ಹೌದು ಆಮೇಲೆ
ಗೆಲಿಲಿಯೋ-ಲೋಲಕದ ಉದ್ದವನ್ನು ಅಳೆದೆನು
 ಜಾನ್ -  ಆಮೇಲೆ
ಗೆಲಿಲಿಯೋ-ಲೋಲಕದ ಉದ್ದ     ಅಂದರೆ ಗುಂಡನ್ನು ದಾರಕ್ಕೆ ಕಟ್ಟಿರುವ ಬಿಂದುವಿನಿಂದ ಆಧಾರ ಬಿಂದುವಿನ ವರೆಗೆ  ಮತ್ತು ಗುಂಡಿನ ತ್ರಿಜ್ಯ ಅದನ್ನು ಅಳೆದು ಇಂಥ ಲೋಲಕವನ್ನು ತೂಗಾಡಲು ಬಿಟ್ಟೆನು. ಇದರ ಆವರ್ತಕಾಲ ಒಂದೇ ಸಮನಾಗಿರುವುದನ್ನು  ಕಂಡುಹಿಡಿದೆನು.   
 ಜಾನ್ - ಇದರಲ್ಲಿ ನೀನು ಕಂಡುಕೊಂಡ ಸತ್ಯ ಯಾವುದು?
ಗೆಲಿಲಿಯೋ  - ಇಲ್ಲಿ ಆವರ್ತಕಾಲವು ಗುಂಡನ್ನಾಗಲೀ ಕಂಪನ ವಿಸ್ತಾರವನ್ನಾಗಲೀ ಅವಲಂಬಿಸಿರುವುದಿಲ್ಲ. ಆದರೆ ಆವರ್ತಕಾಲವು ಲೋಲಕದ ಉದ್ದವನ್ನು ಅವಲಂಬಿಸಿದೆ. ಲೋಲಕದ ಉದ್ದದ ವರ್ಗಮೂಲಕ್ಕೆ ಅನುಗುಣವಾಗಿ ಆವರ್ತಕಾಲವು ಬದಲಾಗುವುದು
 ಜಾನ್ - ಅಂದರೆ ನೀನು ಹೇಳುವ ಪ್ರಕಾರ ಆವರ್ತಕಾಲವು ಲೋಲಕದ ಉದ್ದವನ್ನು ಅವಲಂಬಿಸಿದೆ
ಗೆಲಿಲಿಯೋ-ಹೌದು ಉದ್ದವನ್ನು ಅವಲಂಬಿಸಿದೆ ಆದರೆ ಗುಂಡಿನ ಭಾರವನ್ನಲ್ಲ. ವಿಶೇಷವೆಂದರೆ ಆವರ್ತಕಾಲದಲ್ಲಿ ಅಂದರೆ ಲೋಲಕವು ಕಡೆ ಕಡೆ ಹೋಗಿಬರುವ ಕಾಲದಲ್ಲಿ ವ್ಯತ್ಯಾಸವಾಗುವುದಿಲ್ಲ
 ಜಾನ್ - ಗೆಲಿಲಿಯೋ ನನ್ನದೊಂದು ಪ್ರಶ್ನೆ ಪ್ರಯೋಗದಿಂದ ಏನಾದರೂ ಉಪಯೋಗ ಇದೆಯೇ
ಗೆಲಿಲಿಯೋ-ಸದ್ಯಕ್ಕಂತೂ ಯಾವುದೇ ಉಪಯೋಗ ಕಾಣಿಸ್ತಾ ಇಲ್ಲ. ಆದರೆ ನನ್ನ ತತ್ವವನ್ನು ಸಮಯವನ್ನು ಅಳೆಯಲು ಜಗತ್ತು ಉಪಯೋಗಿಸಿಕೊಳ್ಳಬಹುದು ಅಂತ ಅನಿಸುತ್ತಿದೆ
 ಜಾನ್ - ನಿನಗೆ ಶುಭವಾಗಲಿ ಗೆಳೆಯ.  ನಿನ್ನ ಪ್ರಯೋಗಗಳು ಯಶಸ್ವಿಯಾಗಲಿ. ನಿನ್ನ ಕೀರ್ತಿ ಅಜರಾಮರವಾಗಲಿ 
ಗೆಲಿಲಿಯೋ-ಮಿತ್ರ ಹೀಗೆಲ್ಲ ಹೊಗಳಬೇಡ. ಇನ್ನೂ ಅನೇಕ ಶೋಧನೆಗಳನ್ನು ಮಾದಬೇಕೆಂದಿರುವೆ. ಅದರ ಯಶಸ್ಸನ್ನು ಕಾಲವೇ ನಿರ್ಣಯಿಸಬೇಕು.  ಅಂದಹಾಗೆ, ನಿನಗೊಂದು ವಿಷಯವನ್ನು ಹೇಳಲು ಮರೆತೆ. ಏನೆಂದರೆ ಪೀಸಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹುದ್ದೆಯ ಸಂದರ್ಶನಕ್ಕೆ ಕರೆಯ ಬಂದಿದೆ. ನಾನು ನಾಳೆಯೇ ಅಲ್ಲಿಗೆ ಹೋಗಬೇಕು.  
 ಜಾನ್ - ಆಯುತು ಗೆಳೆಯ, ನಿನಗೆ ಶುಭವಾಗಲಿ. ವಿಶ್ವವಿದ್ಯಾಲಯವು ನಿನ್ನ ಸಂಶೋಧನೆಗೆ ಬೆಂಗಾವಲಾಗಿ ನಿಲ್ಲಲಿ. ಅಂದಹಾಗೆ, ನೀನು ನಮ್ಮೂರನ್ನು ಬಿಟ್ಟು ಹೋಗುತ್ತಿರುವೆ ಅನ್ನು. ಆದರೆ ಒಂದು ಮಾತು- ನಿನ್ನ ಪ್ರಯೋಗದ ಯಶಸ್ಸುಗಳ ವಿಚಾರವನ್ನು ನನಗೆ ತಿಳಿಸಲು ಮರೆಯಬೇಡ. ನಾನೂ ಹಾಗೂ ನಿನ್ನ ಎಲ್ಲ ಮಿತ್ರರೂ ನಿನ್ನ ಯಶಸ್ಸಿನ ಸುದ್ದಿಯನ್ನು ಕೇಳಲು ಕಾತುರರಾಗಿರುತ್ತೇವೆ ಎಂಬುದನ್ನು ಮರೆಯಬೇಡ
ಗೆಲಿಲಿಯೋ-ಆಯಿತು ಜಾನ್ ಹುಟ್ಟಿದ ಊರನ್ನು ಮರೆಯಲು ಸಾಧ್ಯವೇ? ನಾನು ಏನನ್ನಾದರೂ ಸಾಧನೆ ಮಾಡಿ ಪುನಃ ನಮ್ಮೂರಿಗೆ ಬಂದು ಜನರ ಸೇವೆ ಮಾಡಲು ಬಯಸುವೆನು. (ಇಬ್ಬರೂ ಆಲಂಗಿಸುವರು, ಜಾನ್ ಹೊರಟುಹೋಗುವನು.)
ದೃಶ್ಯ  -೩
(ಪಿಸಾ ವಿಶ್ವವಿದ್ಯಾಲಯ ಅಧ್ಯಾಪಕ ಹುದ್ದೆಯ ಸಂದರ್ಶನಕ್ಕೆ ಬಂದ ಗೆಲಿಲಿಯೋ )
ಕುಲಪತಿ-ತಮ್ಮ ಹೆಸರು?
ಗೆಲಿಲಿಯೋ -ಗೆಲಿಲಿಯೋ
ಕುಲಪತಿ-ತಾವು ಓದಿದ್ದು ?
ಗೆಲಿಲಿಯೋ –ನಾನು ಪ್ಲಾರೆನ್ಸ್ ನಗರದ ಬಳಿ ಇರುವ  ವಾಲಂಬ್ರೋಸ್ ಎಂಬ ಕ್ರೈಸ್ಟ್ ಮಠದಲ್ಲಿ ಓದಿರುವೇನು.
ಕುಲಪತಿ-ಸರಿ ತಮ್ಮ ಉನ್ನತ ವಿದ್ಯಾಭ್ಯಾಸದ ಬಗ್ಗೆ ಹೇಳಿ.
ಗೆಲಿಲಿಯೋ –ಸರ್, ನಾನು ೧೫೮೧ರಲ್ಲಿ ವೈದ್ಯಕೀಯ ವಿದ್ಯಾಭ್ಯಾಸವನ್ನು ಮಾಡಿರುವೆನು.
ಕುಲಪತಿ-ನೀವು ಓದಿದ್ದು ವೈದ್ಯವಿಜ್ಞಾನವಾದರೆ  ವೈದ್ಯರಾಗಿಯೇ ಕೆಲಸ ಮಾಡ ಬಹುದಲ್ಲ. ಅಧ್ಯಾಪಕ ಹುದ್ದೆಯನ್ನು ಬಯಸಿ ಬಂದಿರುವುದು ಏಕೆ?
ಗೆಲಿಲಿಯೋ –ನನಗೆ ಅಧ್ಯಾಪಕ ವ್ರತ್ತಿಯಲ್ಲಿ ಆಸಕ್ತಿ ಇದೆ. ಅಲ್ಲದೆ ನನಗೆ ಭೌತ ಶಾಸ್ತ್ರದಲ್ಲಿ ಹೆಚ್ಚಿನ ಸಂಶೋಧನೆ ಮಾಡಬೇಕೆಂಬ ಆಸೆ ಇದೆ.
ಕುಲಪತಿ-ಏನು ಸಂಶೋಧನೆಯೇ? ನೀವು ಅಧ್ಯಾಪಕರಾಗಿ ಕೆಲಸ ಮಾಡಬೇಕು. ಹೊರತು ಸಂಶೋಧನೆಯ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.
ಗೆಲಿಲಿಯೋ –ಸರ್, ನನಗೆ ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿಯಿದೆ. ನಿಜ , ಆದರೆ ನಾನು ನನ್ನ ಅಧ್ಯಾಪಕ ವೃತ್ತಿಗೆ ತೊಂದರೆಯಾಗದ ರೀತಿಯಲ್ಲಿ ಸಂಶೋಧನೆಯನ್ನು ಮಾಡುವೆ.
ಕುಲಪತಿ-ಆಯಿತು. ಆದರೆ ನೆನಪಿರಲಿ ಇಲ್ಲಿ ಅಧ್ಯಾಪನಕ್ಕೆ ಮೊದಲ ಆದ್ಯತೆ. ಸಂಶೋಧನೆಯ ಹೆಸರಲ್ಲಿ ಕಾಲಹರಣ ಮಾಡುವ ಹಾಗಿಲ್ಲ.
ಗೆಲಿಲಿಯೋ –ಸರಿ ಸರ್, ತಮ್ಮ ಇಚ್ಚೆಯಂತೆಯೆ ಕೆಲಸ ಮಾಡುವೆ.
ಕುಲಪತಿ-ಆಗಲಿ, ನಾಳೆಯಿಂದ ನಿಮ್ಮ ಅಧ್ಯಾಪನ ವೃತ್ತಿ ಆರಂಭವಾಗಲಿ.
ದೃಶ್ಯ  -೪
ಅಧ್ಯಾಪಕ ೧ – ಅದೇನು ಅಲ್ಲಿ ಗುಂಪುಗೂಡಿದೆ ? ವಿದ್ಯಾರ್ಥಿಗಳೆಲ್ಲ ಜೋರುಜೋರಾಗಿ ಮಾತನಾಡುತ್ತಿದ್ದಾರೆ.
ಅಧ್ಯಾಪಕ  ೨ – ನಿಮಗೆ ಗೊತ್ತಿಲ್ಲವೇ?  ಎರಡು ತಿಂಗಳ ಹಿಂದೆ ಹೊಸದಾಗಿ  ಗೆಲಿಲಿಯೋ ಎಂಬ ಅಧ್ಯಾಪಕರು ಬಂದಿದ್ದರೆ. ವಿದ್ಯಾರ್ಥಿಗಳಿಗೆಲ್ಲ ಅದೇನೋ ಕಾಣೆ. ಅವರೆಂದರೆ ತುಂಬಾ ಇಷ್ಟ. ಅದೇನು ಮೋದಿ ಮಾಡಿದ್ದರೋ ಏನೋ. ಯಾವಾಗಲು ಅವರ ಹಿಂದೆಯೇ ಸುತ್ತುತ್ತಿರುತ್ತಾರೆ.
ಅಧ್ಯಾಪಕ ೧ –ಹೌದು ,ಕೆಲದಿನಗಳಿಂದ ನನಗು ಅನುಭವವಾಗಿದೆ. ಹೆಚ್ಚಿನ ವಿದ್ಯಾರ್ಥಿಗಳೆಲ್ಲ ನಮ್ಮಿಂದ ದೂರವಾಗುತ್ತಿದ್ದರೆ.
ಅಧ್ಯಾಪಕ  ೨ –ಅವರು ಅಧ್ಯಾಪಕರಷ್ಟೇ ಆಗಿದ್ದರೆ ನಾವು ಚಿಂತಿಸುವ ಅಗತ್ಯವಿರಲಿಲ್ಲ. ಅವರು ಸಂಶೋಧಕರಮ್ತೆ. ವಿಜ್ಞಾನಿಗಳಂತೆ. ಅದೇನು ಕಡಿದು ಗುಡ್ಡೆ ಹಾಕುತ್ತಾರೋ, ನೋಡಬೇಕು. ಹೀಗೆಯೇ ನಾವು ಸುಮ್ಮನಿದ್ದರೆ ವಿದ್ಯಾರ್ಥಿಗಳ ದೃಷ್ಟಿಯಿಂದ ಕೀಳಾಗಿ ಹೋಗುತ್ತೇವೆ.
ಅಧ್ಯಾಪಕ ೧ – ಹಾಗಿದ್ದರೆ ನಾವು ಸುಮ್ಮನಿರಕೂಡದು. ಏನಾದರು ಉಪಾಯವನ್ನು ಮಾಡಲೇಬೇಕು. ಇಲ್ಲದಿದ್ದರೆ ನಮ್ಮ ಸ್ಥಾನ ಮಾನಕ್ಕೆ ಕುಂದು ಬರುವುದು. ಏನು ಮಾಡೋಣ? (ಇಬ್ಬರೂ ಯೋಚಿಸುವರು)
ಅಧ್ಯಾಪಕ  ೨ –ಅವರು ಸಂಶೋಧಕರಗಿರುವುದರಿಂದಲೇ ಅಲ್ಲವೇ? ನಮಗೆ ಕುಂದು ಉಂಟಾಗಿರುವುದು. ಅವರ ಸಂಶೋಧನೆಯಲ್ಲೇ ಏನಾದರು ಹುಳುಕನ್ನು ಕಂಡು ಹಿಡಿಯಬೇಕು. ಅವರು ಏನು ಹೊಸದನ್ನು ಹೇಳುತ್ತಿದ್ದಾರೆ ಎಂಬುದನ್ನು ಒಬ್ಬ ವಿದ್ಯಾರ್ಥಿಯನ್ನು ಕರೆದು ವಿಚಾರಿಸೋಣ.
ಅಧ್ಯಾಪಕ ೧ –ಅದೇ ಸರಿ ಸರಿ. (ದೂರದಲ್ಲಿದ್ದ ಒಬ್ಬ ವಿದ್ಯಾರ್ಥಿಯನ್ನು ಉದ್ದೇಶಿಸಿ) ಎ ಹುಡುಗ ಬಾರಪ್ಪ ಇಲ್ಲಿ.
ವಿದ್ಯಾರ್ಥಿ-ನಮಸ್ತೆ ಸರ್, ನನ್ನನ್ನು ಕರೆದಿರಾ?
ಅಧ್ಯಾಪಕ  ೨ –ಹೌದು ನಾವೇ ಕರೆದದ್ದು. ಅಂದ ಹಾಗೆ ಆ ಹೊಸ ಅಧ್ಯಾಪಕರು- ಅವರು  ಗೆಲಿಲಿಯೋ ಅಲ್ಲವೇ ಅವರ ಹೆಸರು-ಅವರು ನಿಮಗೆಲ್ಲ ಹೇಗೆ ಪಾಠ ಮಾಡುತ್ತಾರೆ ? ನಿಮಗೆ ಅದು ಸರಿಯಾಗಿ ಅರ್ಥವಾಗುತ್ತಿದೆಯೇ?
ವಿದ್ಯಾರ್ಥಿ- ಹೌದು ಸರ್, ಅವರು ತುಂಬಾ ಚೆನ್ನಾಗಿ ಪಾಠ ಮಾಡುತ್ತಾರೆ. ಹೊಸ ಹೊಸ ವಿಷಯಗಳನ್ನು ಹೇಳುತ್ತಾರೆ. ನಮಗೆ ಪ್ರಶ್ನೆ ಕೇಳಲು ಅವಕಾಶ ಕೊಡುತ್ತಾರೆ. ಅವರೊಬ್ಬ ಸಂಶೋಧಕ-ವಿಜ್ಞಾನಿಗಳು
ಅಧ್ಯಾಪಕ ೧ – ಅವರು ನಿಮಗೆ ಏನು ಹೊಸದನ್ನು ಹೇಳಿದ್ದರೆ, ಹೇಳು ನೋಡೋಣ ?
ವಿದ್ಯಾರ್ಥಿ- ಇತ್ತೀಚಿಗೆ, ಅವರು ಹೊಸದೊಂದು ಸಿದ್ಧಾಂತವನ್ನು ಕಂಡು ಹಿಡಿದಿದ್ದಾರೆ. ಹಳೆಯ  ಸಿದ್ಧಾಂತವನ್ನು ಸುಳ್ಳು ಎಂದು ನಿರೂಪಿಸಿದ್ದಾರೆ. 
ಅಧ್ಯಾಪಕ  ೨ –(ಆಶ್ಚರ್ಯದಿಂದ) ಏನು ಹಳೆ ಸಿದ್ಧಾಂತವನ್ನು ಸುಳ್ಳು ಎಂದು ಹೇಳುತ್ತಿದ್ದರೋ?ಅದೇನೆಂದು ಸ್ವಲ್ಪ ಬಿಡಿಸಿ ಹೇಳು?
ವಿದ್ಯಾರ್ಥಿ- ಸರ್, ಅವರು ಅರಿಸ್ಟಾಟಲ್ ಮಹಾಶಯರು ಹೇಳಿದ ಸಿದ್ಧಾಂತವನ್ನು ಅಲ್ಲಗಳೆದಿದ್ದಾರೆ. ಏತರದಿಂದ ಬೇಳುವ ವಸ್ತುಗಳ ಕುರಿತಾದ ಅರಿಸ್ಟಾಟಲ್ ರ ಅಭಿಪ್ರಾಯವನ್ನು ತಪ್ಪೆಂದು ಪ್ರಯೋಗದ ಮೂಲಕ ನಿರೂಪಿಸಿದ್ದಾರೆ.
ಅಧ್ಯಾಪಕ ೧ –ಏನದು, ಆ ಹೊಸ ಸಿದ್ಧಾಂತ ?
ವಿದ್ಯಾರ್ಥಿ- ಅರಿಸ್ಟಾಟಲ್ ಮಹಾಶಯನ ಸಿದ್ಧಾಂತವೇನೆಂದರೆ ಮೇಲಿನಿಂದ ಎರಡು ವಸ್ತುಗಳನ್ನು ಬೀಳಿಸಿದರೆ, ಹಗುರವಾದ ವಸ್ತುವಿಗಿಂತ ಭಾರವಾದ ವಸ್ತು ಬೇಗ ಭೂಮಿಗೆ ಬಂದು ಅಪ್ಪಳಿಸುತ್ತದೆ ಎಂಬುದು. ಆದರೆ ಗೆಲಿಲಿಯೋ ಅದನ್ನು ತಪ್ಪೆಂದು ನಿರೂಪಿಸಿದ್ದಾರೆ.
ಅಧ್ಯಾಪಕ  ೨ –ಅದು ಹೇಗೆ?
ವಿದ್ಯಾರ್ಥಿ- ಪೀಸಾದ ವಾಲುಗೊಪುರದಿಂದ ಒಂದು ೧೦ ಪೌಂಡ್ ತೂಕದ ಇನ್ನೊಂದು ೧ ಪೌಂಡ್ ತೂಕದ ಎರಡು ಫಿರಂಗಿ ಗುಂಡುಗಳನ್ನು ಏಕ ಕಾಲದಲ್ಲಿ ಕೆಳಗೆ ಹಾಕಿದರೂ, ಇವುಗಳ ತೂಕದಲ್ಲಿ ವ್ಯತ್ಯಾಸ ಹೊಂದಿದ್ದರೂ ಸಹಾ ಆ ಗುಂಡು ಗಳು ಭೂಮಿಯನ್ನು ಒಂದೇ ಸಮಯದಲ್ಲಿ ಸೇರಿದವು.
ಅಧ್ಯಾಪಕ ೧ –ಸರಿ. ಸರಿ. ಅರ್ಥವಾಯಿತಪ್ಪ, ನೀನಿನ್ನೂ ಹೋಗು.
ಅಧ್ಯಾಪಕ  ೨ – ಏನು ಅರ್ಥವಾಯಿತು?
ಅಧ್ಯಾಪಕ ೧ - ಗೆಲಿಲಿಯೋನನ್ನು ಹೊರಹಾಕುವುದು ಹೇಗೆ ಎಂದು ಅರ್ಥವಾಯಿತು.
ಅಧ್ಯಾಪಕ  ೨ –ಅದು ಹೇಗೆ?
ಅಧ್ಯಾಪಕ ೧ –ಬಾ, ಈಗಲೇ, ವಿಶ್ವವಿದ್ಯಾಲಯದ ಕುಲಪತಿಗಳನ್ನು ಭೇಟಿಯಾಗೋಣ.(ಇಬ್ಬರು ಕುಲಪತಿಯ ಬಳಿಗೆ ಹೋಗುವರು)
ದೃಶ್ಯ  -೫
ಕುಲಪತಿಯವರ್ ಕೊನೆ. ಅಲ್ಲಿ ಅವರು ಆಸೀನರಾಗಿದ್ದರೆ.
ಅದ್ಯಾಪಕ-೧ – ಗೌರವಾನ್ವಿತ ಕುಲಪತಿಯವರಿಗೆ,ವಂದನೆಗಳು. ನಾವು ಒಳಗೆ ಬರಬಹುದೇ?
ಕುಲಪತಿ-ಓಹೋಹೋ. ಬನ್ನಿ ಬನ್ನಿ, ಅಧ್ಯಾಪಕಧ್ವಯರು. ಒಟ್ಟಾಗಿ ಇತ್ತ ಚಿತ್ತೈಸಿದ್ದೀರಿ. ಕುಶಲವೇ? ಕ್ಷೇಮವೇ?
ಅಧ್ಯಾಪಕ ೨- ಕುಲಪಥಿಯವರೇ, ನಾವು ಕ್ಷೇಮವಾಗಿದ್ದೇವೆ. ಆದರೆ, ವಿಶ್ವವಿಧ್ಯಾಲಯದ ಕ್ಷೇಮಕ್ಕೆ ಭಂಗವುನ್ತಾಗುವ ಕಾಲ ಬಂದಿದೆ.
ಕುಲಪತಿ- ಏನ್ರಯ್ಯ? ಅದೇನು ನೀವು ಹೇಳುತ್ತಿರುವುದು. ವಿಶ್ವವಿಧ್ಯಾಲಯದ ಆಗು ಹೋಗುಗಳ ಬಗ್ಗೆ, ಕುಲಪೋಅತಿಯಾದ ನನಗೆ ಗೊತ್ತಿಲ್ಲದಿರುವುದು, ನಿಮಗೇನು ತಿಳಿದಿದೆ?
ಅಧ್ಯಾಪಕ ೧- ವಿಷಯವಿದೆ ಮಹಾಸ್ವಾಮಿ ವಿಷಯವಿದೆ. ಉತ್ಸವಮೂರ್ತಿಯ ಹಾಗೆ, ಗರ್ಭಗುಡಿಯಲ್ಲಿ ಕುಳಿತವರಿಗೆ, ಊರ ವಿಚಾರ ಹೇಗೆ ತಿಳಿಯುವುದು?
ಕುಲಪತಿ- ವ್ಯಂಗ್ಯದ ಮಾತು ಸಾಕು ಮಾಡಿ. ನಾನು ಕುಲಪತಿಯೇಮ್ಬುದು ನಿಮ್ಮ ಗಮನದಲ್ಲಿರಲಿ. ಅನುಚಿತ ಮಾತನಾಡಿದ ಹಿನ್ನೆಲೆಯಲ್ಲಿ ನಿಮ್ಮನ್ನು ವ್ರುತ್ತಿಯಿನಿದ ವಜಾ ಮಾಡಬಲ್ಲೆ.
ಅಧ್ಯಾಪಕ ೨-  ಆ ಕೆಲಸವನ್ನು ನೀವು ಗೆಲಿಲಿಯೋಗೆ ಮಾಡಬೇಕಿದೆ ಸ್ವಾಮಿ.
ಕುಲಪತಿ- ಗೆಲಿಲಿಯೋ? ಆತ  ಏನು ಮಾಡಿದ?
ಅಧ್ಯಾಪಕ ೧- ಅದಕ್ಕೆಂದೇ, ನಾವು ನಿಮ್ಮನ್ನು ಗರ್ಭಗುಡಿಯಲ್ಲಿ ಕುಳಿತ ಉತ್ಸವಮೂರ್ತಿಯೆಂದು ಹೇಳಿದ್ದು. ಪಾಪ ನಿಮಗೇನು ಗೊತ್ತಿಲ್ಲ.
ಕುಲಪತಿ- ಸಾಕು ನಿಲ್ಲಿಸಿ ನಿಮ್ಮ ಕೊಂಕು. ಏನು ನಡೆಯಿತು ಎಂಬುದನ್ನು ಬಿಡಿಸಿ ಹೇಳಿ?
ಅಧ್ಯಾಪಕ ೨ – ಗೆಲಿಲಿಯೋ ಅರಿಸ್ಟಾಟಲ್ ಮಹಾಶಯನ ಸಿದ್ಧಾಂತವನ್ನು ಅಲ್ಲಗಳೆಯುತ್ತಿದ್ದಾನೆ. ಗ್ರೀಸ್ ಇಟಲಿ ಮುಂತಾದ ನಾಡಿನ ಪೂರ್ವಸೂರಿಗಳ  ಸಿದ್ಧಾಮ್ತವನ್ನೆಲ್ಲ ಅಲ್ಲಗಳೆದು ವಿದ್ಯಾರ್ಥಿಗಳಲ್ಲಿ ಬಂಡೇಳುವ ಮನೋಭಾವವನ್ನು ಬೆಳೆಸುತ್ತಿದ್ದಾನೆ. ಯುವ ವಿದ್ಯಾರ್ಥಿಗಳೆಲ್ಲ ಆ ಹುದುಗುಬುದ್ಧಿಯ ಗೆಲಿಲ್ಯೋ ನ ಕಡೆ ವಾಲುತ್ತಿದ್ದಾರೆ. ನೀವು ಸುಮ್ಮನಿದ್ದಲ್ಲಿ ಆ ಗೆಲಿಲಿಯೋ ನಿಮ್ಮ ಕುರ್ಚಿಯಲ್ಲಿ ಬಂದು ಕುಲಿತುಕೊಲ್ಲುವನು ಇದು ನಾವು ನಿಮಗೆ ಕೊಡುತ್ತಿರುವ ಪೂರ್ವ ಸೂಚನೆ. ಇನ್ನು ನೀವು ಉಂಟು ; ನಿಮ್ಮ ವಿಶ್ವವಿದ್ಯಾಲಯ ಉಂಟು. ನಾವಿನ್ನು ಬರುತ್ತೇವೆ. (ಅಧ್ಯಾಪಕರು ಹೋಗುವರು)     
ಕುಲಪತಿ- ಯಾರಲ್ಲಿ? ಬನ್ನಿ ಇಲ್ಲಿ. (ಗುಮಾಸ್ತನನ್ನು ಕರೆಯುವರು.)ಹೋಗಿ ಈ  ಕೂಡಲೇ ಗೆಲಿಲಿಯೋ ನನ್ನು ನನ್ನ ಕೋಣೆಗೆ ಬರಹೇಳಿ. 
ಗುಮಾಸ್ತ – ಆಯಿತು ಸ್ವಾಮಿ, (ಹೋಗುವನು)
(ಕುಲಪತಿ, ಯೋಚಿಸುತ್ತಾ ಕುಲಳಿತಿರುವರು.)
ಗೆಲಿಲ್ಯೋ- ಸರ್, ನಾನು ಒಳಗೆ ಬರಬಹುದೇ?
ಕುಲಪತಿ- ಹುಂ ಬಾ. (ಸಿಟ್ಟಿನಿಂದ ) ಗೆಲಿಲ್ಯೋ ನಾನು ನಿಮಗೆ ಹೇಳಿರುವುದೇನು  , ನೀನು ಮಾಡುತ್ತಿರುವುದೇನು?
ಗೆಲಿಲ್ಯೋ- ಸರ್, ನಾನು ನೀವು ಹೇಳಿರುವುದನ್ನೇ ಮಾಡುತ್ತಿರುವೆ. ನನ್ನ ಪಾಠ ಪ್ರವಚನದಲ್ಲಿ ಏನಾದರೂ .... ?
ಕುಲಪತಿ- ನಿನ್ನ ಪಾಠ ಪ್ರವಚನದ ಮನೆ ಹಾಳಾಯಿತು. ನೀನು ಈ ವಿಶ್ವವಿದ್ಯಾಲಯದ ಬುಡಕ್ಕೆ ಕೈ ಹಾಕುತ್ತಿರುವೆ.
ಗೆಲಿಲಿಯೋ – ಸರ್, ತಮ್ಮ ಮಾತು ನನಗೆ ಅರ್ಥವಾಗಲಿಲ್ಲ. ನಾನೇನು ತಪ್ಪು ಮಾಡಿದೆ ಎಂಬುದನ್ನು ಸ್ವಲ್ಪ ಬಿಡಿಸಿ ಹೇಳಬಹುದಲ್ಲ
ಕುಲಪತಿ- ನೀನು ಅರಿಸ್ಟಾಟಲ್ ಮಹಾಶಯನ ಸಿದ್ಧಾಂತವನ್ನು ಅಲ್ಲಗಳೆಯುತ್ತಿರುವಿಯಂತೆ! ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಹೊಸ ಸಿದ್ಧಾಂತವನ್ನು ಸಾಬೀತು ಪಡಿಸುತ್ತಿದ್ದೀಯಂತೆ!ನಾನು ನಿನಗೆ ಮೊದಲೇ ಹೇಳಿದ್ದೆ ಕೇವಲ ಪಾಠ ಮಾಡಿಕೊಂಡು ಇದ್ದಾರೆ ಸಾಕೆಂದು. ಆದರೆ ನೀನು ಬಲು ಅಪಾಯಕಾರಿ ವ್ಯಕ್ತಿ. ಎಷ್ಟು ವರ್ಷಗಲಿನ್ ದ ನಡೆದುಕೊಂಡುಬಂದಿರುವ ಸಿದ್ಧಾಂತಗಳನ್ನೆಲ್ಲಾ ಅಲ್ಲಗಳೆದು ಯುವ ಜನರ ದಾರಿ ತಪ್ಪಿಸುತ್ತಿದ್ದೀಯಾ. ನಿನಗಿಲ್ಲಿ ಜಾಗವಿಲ್ಲ. ನೀನಿನ್ನೂ ಹೊರಡಬಹುದು.
ಗೆಲಿಲಿಯೋ – ಅರ್ಥವಾಯಿತು ಸರ್, ವಿಶ್ವವಿದ್ಯಾಲಯದಲ್ಲಿ ಜಾಗವಿಲ್ಲದಿರುವುದು ನನಿಗಲ್ಲ! ಸತ್ಯಕ್ಕೆ ಜಾಗವಿಲ್ಲ!ನಾನಿನ್ನು ಬರುವೆ.

ದೃಶ್ಯ – ೬

(ವೆನಿಸ್ ನಗರ-ವೈಜ್ಞಾನಿಕ ಸಂಘವೊಂದರ ಉದ್ಘಾಟನೆ- ಯುವಕರು ಸಂಘದ ಉದ್ಘಾಟನೆಗೆ ಗೆಲಿಲಿಯೋನನ್ನು ಆಹ್ವಾನಿಸಿದ್ದರು )
ಯುವಕ- ಸ್ನೇಹಿತರೆ ಇಂದು ನಮ್ಮ ಈ ವೆನಿಸ್ ನಗರದ ಈ ಸಂಘದ ಉದ್ಘಾಟನೆಗೆ ಯುವಕರೆಲ್ಲ ಸೇರಿ ವೈಜ್ಞಾನಿಕ ಸಂಘವೊಂದನ್ನು ರಚಿಸಿದ್ದೇವೆ. ಉದ್ಘಾಟನೆಗೆ ಪ್ರಸಿದ್ಧ ಸಂಶೋಧಕರಾದ ಮಾನ್ಯ ಗೆಲಿಲಿಯೋ ಅವರು ಬಂದಿದ್ದಾರೆ. ಇವರ ಪರಿಚಯವನ್ನು ನನ್ನ ಯುವ ಮಿತ್ರನು ನಿಮಗೆ ಮಾಡಿಕೊಡುತ್ತಾನೆ.
ಯುವ ಮಿತ್ರ – ಮಾನ್ಯ ಗೆಲಿಲಿಯೋ ಅವರಿಗೆ ವೆನಿಸ್ ನಗರದ ಯುವಕರಿಂದ ಹೃತ್ಪೂರ್ವಕ ಸ್ವಾಗತ. ಮಿತ್ರತೆ, ಗೆಲಿಲಿಯೋ, ಇವರು ಈ ಮೊದಲು ಪೀಸಾ ವಿಶ್ವವಿದ್ಯಾಲಯದಲ್ಲಿ ಪ್ರಧ್ಯಾಪಕರಾಗಿದ್ದವರು ಕಾರಣಾಂತರಗಳಿಂದ ವಿಶ್ವವಿಧ್ಯಲಯವನ್ನು ಬಿಟ್ಟು ಬಂದಿದ್ದಾರೆ. ಈಗ ಪಾಡ್ವ ವಿಶ್ವವಿದ್ಯಲದಲ್ಲಿ ಗಣಿತಜ್ನರಾಗಿ ಸೇರಿಕೊಂಡು ತಮ್ಮ ನೆಚ್ಚಿನ ಸಂಶೋಧನೆಗಳನ್ನು ಮುಂದುವರೆಸಿದ್ದಾರೆ. ಈಗ ವೆನಿಸ್ ನಗರದ ವಿಜ್ಞಾನದಲ್ಲಿ ಆಸಕ್ತರಾದ ಯುವಕರಿಗೆ ಮಾರ್ಗದರ್ಶನ ನೀಡಲಿದ್ದಾರೆ. ತಮ್ಮಲ್ಲಿ ವಿಜ್ನಾನಕ್ಕೆ ಪ್ರಶ್ನೆಗಳಿದ್ದರೆ ನಂತರ ಕೇಳಬಹುದು. ಈಗ ಜ್ಯೋತಿ ಬೆಳಗುವುದರಿಂದ ವಿಜ್ಞಾನ ಸಂಘದ ಉದ್ಘಾಟನೆ
(ದೀಪ ಬೆಳಗಿಸಿ ಉದ್ಘಾಟನೆ ನಡೆಯುವುದು)
ಯುವಕ-ಈಗ ಏನಾದರೂ ಪ್ರಶ್ನೆಗಳಿದ್ದರೆ ಕೇಳಬಹುದು.
ಸಭಿಕ: ಮಾನ್ಯ ಗೆಲಿಲಿಯೋ ಅವರೇ ನಾನು ಗಾಜಿನ ವಸ್ತುಗಳನ್ನು ಮಾಡಿ ಮಾರಾಟ ಮಾಡುವವನು. ಅರ್ಧ ಚಂದ್ರಾಕೃತಿಯಲ್ಲಿ ಎರಡು ಮೈ ಉಬ್ಬಿರುವ (ಪೀನ ಮಸೂರ) ಹಾಗು ಅರ್ಧ ಚಂದ್ರಾಕೃತಿಯಲ್ಲಿ ತಗ್ಗಗಿರುವ (ನಿಮ್ನ ಮಸೂರ) ಗಾಜುಗಳನ್ನು, ಒಟ್ಟಿಗೆ ಇತ್ತು ನೋಡಿದಾಗ ದೂರದ ವಸ್ತುಗಳು ಹತ್ತಿರವಾದಂತೆ ತೋರುತ್ತದೆಯಲ್ಲ. ಇದು ಏಕೆ?
ಗೆಲಿಲಿಯೋ-(ಆಶ್ಚರ್ಯದಿಂದ) ಏನು, ನೀನು ಹೇಳುತ್ತಿರುವುದು? ಹಾಗೆ ದಾರದ ವಸ್ತುಗಳು ಹತ್ತಿರವಾಗಿ ದೊಡ್ಡದಾಗಿ ಕಾಣಲು ಸಾಧ್ಯವೇ?
ಸಭಿಕ- ಹೌದು ಗೆಲಿಲಿಯೋ ಅವರೇ, ನಾನು ಹಲವಾರು ಬಾರಿ ಇದನ್ನು ಗಮನಿಸಿದ್ದೇನೆ, ತಾವು ನಮ್ಮ ಮನೆಗೆ ಬಂದರೆ ತೋರಿಸುತ್ತೇನೆ.
ಗೆಲಿಲಿಯೋ-ಆಶ್ಚರಆರ್ಯ. ಪರಮಾಶ್ಚರ್ಯ. ಇದು ನಿಜವೇ, ಆದಲ್ಲಿ, ನಾವಿಬ್ಬರು ಸೇರಿ, ಒಂದು ಸಾಧನವನ್ನು ರೂಪಿಸೋಣ. ಅದಕ್ಕೆ ಊರದರ್ಶಕ ಎಂಬ ಹೆಸರಿಡೋಣ.
ಸಭಿಕ-ಇದಕರಿಂದ ಏನು ಪ್ರಯೋಜನ?
ಗೆಲಿಲಿಯೋ-ಇದರಿಂದ ಬಹುದೊಡ್ಡ ಪ್ರಯೋಜನ ಇದೆ. ದೂರದೂರದ ಗ್ರಹ ನಕ್ಷತ್ರಗಳನ್ನು ಹತ್ತಿರದಲ್ಲಿರುವಂತೆ ದೊಡ್ದದಾಗಿರುವಂತೆಯೂ ನೋಡಬಹುದು. ಆಗ ಆಕಾಶ ಕಾಯಗಳ ಸ್ವರೂಪ ಮತ್ತು ಚಲನೆಯು ಅಭ್ಯಾಸ ಮಾಡಬಹುದು. ಶೀಘ್ರದಲ್ಲೇ ನಾವು ಈ ಯಂತ್ರವನ್ನು ನಿರ್ಮಿಸಿ ಸಾರ್ವಜನಿಕವಾಗಿ ಪ್ರದರ್ಶಿಸೋಣ. ವಿಜ್ಞಾನದ ಮಹಿಮೆಯನ್ನು ಜನರಿಗೆ ತಿಳಿಸೋಣ. ನಿಮ್ಮಂತಹ ಯುವಕರ ಸಹಕಾರವನ್ನು ನಾನು ಬಯಸುತ್ತೇನೆ. ಮಿತ್ರನೇ ನಾಳೆಯಿಂದಲೇ ನಿಮ್ಮ ಕಾರ್ಯ ಪ್ರಾರಂಭವಾಗಲಿ.
ಯುವಕ-ಸ್ನೇಹಿತರೆ, ನಿಮ್ಮ ವಿಜ್ಞಾನ ಸಂಘದ ಉದ್ಘಾಟನೆ ಹೊಸ ಸಂಶೋಧನೆಗೆ ನಾಂದಿ ಹಾಡಿತು. ಇಂದಿನ ಸಭೆ ಮುಗಿಯಿತು. ಎಲ್ಲರಿಗೂ ಶುಭವಾಗಲಿ.

ದೃಶ್ಯ-೭

(ಗೆಲಿಲಿಯೋ ರೂಪಿಸಿದ ದೂರದರ್ಶಕದ ಸಾರ್ವಜನಿಕ ಪ್ರದರ್ಶನ ಎತ್ತರದ ಕಟ್ಟೆಯ ಮೇಲೆ ಇಡಲಾಗಿದೆ.)

ಗೆಲಿಲಿಯೋ-ವೆನಿಸ್ ನಗರದ ನಿವಾಸಿಗಳೇ, ಇಂದು ಈ ನನ್ನ ಮಿತ್ರನೋಡಗೂಡಿ ರೂಪಿಸಿದ ದೂರದರ್ಶಕದ ಸಾರ್ವಜನಿಕ ಪ್ರದರ್ಶನವನ್ನು ಏರ್ಪಡಿಸಿದ್ದೇನೆ. ಈ ಬಗ್ಗೆ ಅನೇಕರು ಕುಹುಕದ, ಅಪಹಾಸ್ಯದ ಮಾತನಾಡಿದ್ದಾರೆ. ನನಗೇನು ಬೇಸರವಿಲ್ಲ. ಎಲ್ಲ ಸಂಶೋಧನೆಗಳ ಪ್ರಾರಂಭದ ಸ್ಥಿತಿ ಇದೆ ಆಗಿರುವುದು. ಈ ದೂರದರ್ಶಕವು ದೂರದ ವಸ್ತುಗಳನ್ನು ಹತ್ತಿರದಲ್ಲಿರುವಂತೆ ತೋರಿಸುತ್ತದೆ. ಸರದಿಯಂತೆ ಬಂದು ನೋಡಿರಿ. (ಒಬ್ಬೊಬ್ಬರಾಗಿ ಬಂದು ನೋಡುವರು. ಆಶ್ಚರ್ಯದಿಂದ ಮೂಕವಿಸ್ಮಿತರಾಗುವರು.
ಒಬ್ಬ-ಆಹಾ ದೂರದ ಗುಡ್ಡ ಬೆಟ್ಟಗಳು ಇಲ್ಲಿಯೇ ಹತ್ತಿರದಲ್ಲಿರುವಂತೆ ಕಾಣುತ್ತದೆ. ಆಶ್ಚರ್ಯ, ಆಶ್ಚರ್ಯ.
ಇನ್ನೊಬ್ಬ-ಹೌದು ಹೌದು. ಗೊದ್ದದ ತುದಿಯಲ್ಲಿರುವ ಚರ್ಚ್ ಕೂಡ ಕಾಣುತ್ತದೆ.
ಮೂರನೆಯವ-ನೋಡಿ ನೋಡಿ ದೂರದ ಮನೆಗಳು ಎಷ್ಟು ದೊಡ್ಡದಾಗಿ ಕಾಣಿಸುತ್ತದೆ.
ಎಲ್ಲರು-ಗೆಲಿಲಿಯೋ ಅವರೇ, ನಾವೆಲ್ಲ ಮೊದಲು ನಿಮ್ಮ ಮಾತನ್ನು ನಂಬಿರಲಿಲ್ಲ. ನೀವು ನಿಜವಾಗಿಯೂ ಅದ್ಭುತವಾದ ಯಂತ್ರವನ್ನು ರೂಪಿಸಿದ್ದೀರಿ.
ಗೆಲಿಲಿಯೋ-ನಿಮಗೆಲ್ಲ ಧನ್ಯವಾದಗಳು. ಈಗ ಹಗಲು. ನೀವು ರಾತ್ರಿ ವೇಳೆ ಬಂದರೆ ಗ್ರಹ ತಾರೆಗಳು ಹತ್ತಿರದಲ್ಲಿದ್ದಂತೆ ನೋಡಬಹುದು. ನಿಮಗೆ ಬಿಡುವಾದಾಗ ಬಂದು ನೋಡಿಹೋಗಿ.
ಜನರು-ಗೆಲಿಲಿಯೋ ಅವರಿಗೆ ಜಯವಾಗಲಿ.... ಗೆಲಿಲಿಯೋ ಅವರಿಗೆ ಜಯವಾಗಲಿ.....
(ಎಲ್ಲರು ಹೊರಡುವರು)

ದೃಶ್ಯ-೮

(ಫ್ಲಾರೆನ್ಸ್ ನಗರದ ರಾಜ ಎರಡನೇ ಕಾಸಿಮೋ ನ ರಾಜಸಭೆ ರಾಜ ಸಿಂಹಾಸನದಲ್ಲಿ ಆಸೀನಾಗಿದ್ದರೆ)
ಹೋಗಲು ಭಟ್ಟರು-ಎರಡನೇ ಕಾಸಿಮೋ ಅವರಿಗೆ ಜಯವಾಗಲಿ. ಫ್ಲಾರೆನ್ಸ್ ನಗರದ ರಾಜರಿಗೆ ಜಯವಾಗಲಿ.
ರಾಜದೂತ-ಸಭಾಸದರೆ ಪಾಡ್ವ ವಿಶ್ವವಿದ್ಯಾಲಯದ ಮುಖ್ಯ ಪ್ರಾಧ್ಯಾಪಕರು, ನನ್ನ ಗುರುಗಳು ಆದ ಗೆಲಿಲಿಯೋ ಅವರು, ಸಭೆಗೆ ಆಗಮಿಸುತ್ತಿದ್ದಾರೆ. ಎಲ್ಲರೂ ಎದ್ದು ನಿಂತು ಗೌರವಿಸಿ. (ಎಲ್ಲರೂ ಎದ್ದು ನಿಲ್ಲುವರು)
ಸಭಿಕರು-ಗೆಲಿಲಿಯೋ ಅವರಿಗೆ ಸ್ವಾಗತ, ಸುಸ್ವಾಗತ
ದೊರೆ-ಗುರುಗಳೇ ಈ ಶಿಷ್ಯನ ಪುಟ್ಟ ರಾಜನ ಸಭೆಗೆ ಹಾರ್ದಿಕ ಸ್ವಾಗತ. ಆಸೀನರಾಗಿರಿ.
ಗೆಲಿಲಿಯೋ- ಪ್ರಿಯ ಶಿಷ್ಯ ಕಾಸಿಮೋ ನಿನ್ನ ಆದರದ ಸ್ವಾಗತ ನನಗೆ ಸಂತೋಷ ತಂದಿದೆ. ನಿನಗೆ ಶುಭವಾಗಲಿ.
ರಾಜ- ಗುರುಗಳೇ, ನೀವು ದೂರದರ್ಶಕವನ್ನು ನಿರ್ಮಿಸಿ ಲೋಕ ವಿಖ್ಯಾತರಾಗಿಬಿಟ್ಟಿರಿ. ನಗರದೆಲ್ಲಾ ನಿಮ್ಮ ಪ್ರಶಂಸೆಗಳೇ ಕೇಳಿಬರುತ್ತವೆ. ಆ ಕುರಿತು ಸಭಾಸದರ ಎದುರು, ಎರಡು ಮಾತನಾಡಿರಿ.
ಗೆಲಿಲಿಯೋ- ಧನ್ಯವಾದಗಳು. ನಾನು ಹೇಳಬೇಕಾದುದು ಏನೂ ಇಲ್ಲ. ಈ ಸಂಶೋಧನೆಯ ವಿಚಾರವಾಗಿ, ನಾನು ಕಂಡುಕೊಂಡ ವಿಚಾರಗಳ ವೈಜ್ಞಾನಿಕ ಸತ್ಯಗಳ ವಿಚಾರವಾಗಿ “ದಿ ಮೆಸ್ಸೆಂಜರ್ ಆಫ್ ದಿ ಸ್ಟಾರ್ಸ್ ” ಎಂಬ ಹೊತ್ತಗೆಯನ್ನ್ಯ್ ಬರೆದಿದ್ದೇನೆ. ಸಭೆಯಲ್ಲಿದ್ದ ವಿದ್ವಜ್ಜನರು ಅದನ್ನು ಓದಿದರೆ ನಾನು ಧನ್ಯ. ಈ ಗ್ರಂಥವನ್ನು ಫ್ಲಾರೆನ್ಸ್ ನಗರದ ರಾಜನಿಗೆ ಅರ್ಪಿಸುತ್ತಿದ್ದೇನೆ. (ಗ್ರಂಥವನ್ನು ರಾಜನಿಗೆ ಕೊಡುವನು)
ರಾಜ-( ) ಧನ್ಯವಾದ ಗುರುವರ್ಯ. ಧರಮಾಧಿಕಾರಿಯವರೇ ಮೊದಲನೆಯವರಾಗಿ ನೀವು ಓದಿ, ನಿಮ್ಮ ಅಭಿಪ್ರಾಯವನ್ನು ಮುಂದಿನ ಸಭೆಯಲ್ಲಿ ನನಗೆ ತಿಳಿಸಿ.
ಧರ್ಮಾಧಿಕಾರಿ- (  ) ಹಾಗೆಯೇ ಆಗಲಿ ರಾಜ.
ರಾಜ-ಗುರುವರ್ಯರಿಗೆ ನಿಮ್ಮೆಲ್ಲರ ಪರವಾಗಿ ಮತ್ತೊಮ್ಮೆ ವಂದಿಸುತ್ತಾ ಈ ಸಭೆಯನ್ನು ಮುಗಿಸುತ್ತಿದ್ದೇವೆ. (ಸಭೆ ಮುಗಿಯುವುದು)

ದೃಶ್ಯ-೯

(ಎರಡನೇ ಕಾಸಿಮೋ ರಾಜನ ಸಭೆ)
ಹೋಗಲು ಭಟ್ಟರು-ಕಾಸಿಮೋ ರಾಜರಿಗೆ ಜಯವಾಗಲಿ.  ಕಾಸಿಮೋ ರಾಜರಿಗೆ ಜಯವಾಗಲಿ.
ರಾಜ-ಈ ದಿನ ಸಭೆಯನ್ನು ಪ್ರಾರಂಭಿಸೋಣ. ವಿದ್ವಜ್ಜನರೆ ಈ ದಿನ ಚರ್ಚಿಸತಕ್ಕ ವಿಷಯ ಯಾವುದು?
ಧರ್ಮಾಧಿಕಾರಿ-ರಾಜರೆ, ತಮ್ಮ ಅಭ್ಯಂತರವೇನೂ ಇಲ್ಲದಿದ್ದರೆ ತಮ್ಮ ಗುರುಗಳಾದ ಗೆಲಿಲಿಯೋ ಅವರು ನೀಡಿ ಹೋದ ಪುಸ್ತಕದ ಬಗ್ಗೆ ಚರ್ಚಿಸೋಣ.
ರಾಜ- ಧರ್ಮಾಧಿಕಾರಿಗಳೇ, ಗುರುವರ್ಯರ ಈ ಗ್ರಂಥ ಹೇಗಿದೆ? ಚೆನ್ನಾಗಿದೆಯೇ?
ಧರ್ಮಾಧಿಕಾರಿ-ರಾಜರೆ, ನಾನೊಬ್ಬ ಧರ್ಮಾಧಿಕಾರಿ. ಎಲ್ಲದಕ್ಕಿಂತಲೂ ಮಿಗಿಲಾದುದು ಧರ್ಮವೇ ಆಗಿದೆ. ಜನರೆಲ್ಲಾ ಆಸ್ತಿಕರಗಿರಬೇಕದುದು ಅವಶ್ಯಕತೆ ಆಗಿದೆ.
ರಾಜ-ಧರ್ಮಾಧಿಕಾರಿಗಳೇ ತಾವು ಈ ಮಾತನ್ನು ಒತ್ತಿ ಒತ್ತಿ ಏಕೆ ಹೇಳುತ್ತಿದ್ದೀರಾ ಎಂದು ಕೇಳಬಹುದೇ?
ಧರ್ಮಾಧಿಕಾರಿ-ಖಂಡಿತವಾಗಿ, ಮಹಾರಾಜರೇ, ತಮ್ಮ ಗುರುವರ್ಯರ ಗ್ರಂಥ ನೂರಕ್ಕೆ ನೂರು ಧರ್ಮವಿರೋಧಿಯಾಗಿದೆ, ಮತ್ತೆ ಕಾನೂನಿನ ಪ್ರಕಾರ ದಂಡನೆಗೆ ಅರ್ಹರು.
ರಾಜ-ಏನು ಹಾಗೆಂದರೆ? ನೀವೆನ್ನುತ್ತಿರುವುದೇನು?
ಧರ್ಮಾಧಿಕಾರಿ-ನಿಜ ಮಹಾಪ್ರಭು. ಇರುವ ವಿಚಾರವನ್ನೇ ಹೇಳುತ್ತಿರುವೆ.
ರಾಜ-ಹಾಗಿರುವುದೇ ಆದಲ್ಲಿ ಸ್ವಲ್ಪ ವಿವರಿಸಿ ಹೇಳೋಣವಾಗಲಿ.
ಧರ್ಮಾಧಿಕಾರಿ-ರಾಜರೆ, ಅನಾದಿಕಾಲದಿಂದಲೂ ನಂಬಿಕೊಂಡು ಬಂದಿದ್ದ ಸಂಗತಿಗಳನ್ನೆಲ್ಲಾ ಗೆಲಿಲಿಯೋ ಅಲ್ಲಗಳೆಯುತ್ತಿದ್ದಾರೆ. ಸ್ವತಃ ಅರಿಸ್ಟಾಟಲ್ ಮಹಾಶಯನ ಸಿದ್ಧಾಂತವನ್ನು ತಪ್ಪೆನ್ನುತ್ತಿದ್ದಾರೆ. ದೇವತೆಗಳಾದ ಸೂರ್ಯ ಚಂದ್ರರನ್ನು ಕೇವಲ ಆಕಾಶಕಾಯಗಲೆನ್ನುವ ಪಾಪ ಮಾಡುತ್ತಿದ್ದಾರೆ.
ರಾಜ-ಧರ್ಮಾಧಿಕಾರಿಗಳೇ, ಇದನ್ನು ನಂಬುವುದು ಕಷ್ಟ.ಅವರು ನನ್ನ ಗುರು. ಗೌರವವಷ್ಟೇ ಅಲ್ಲ. ವಾಸ್ತವವಾಗಿ ಅವರೊಬ್ಬ ಶ್ರೇಷ್ಠ ಸಂಶೋಧಕ.
ಧರ್ಮಾಧಿಕಾರಿ-ಆದರೆ ಅವರ ಸಂಶೋಧನೆ ಧರ್ಮ ವಿರೋಧಿ ನಾಸ್ತಿಕತೆಯನ್ನು ಪ್ರಚಾರ ಮಾಡುವುದು. ಸುಮ್ಮನೆ ಬಿಟ್ಟರೆ ಜನ ಮೊದಲು ಧರ್ಮ ವಿರೋಧಿಯಾಗುವರು.
ರಾಜ-ಹಾಗಾದರೆ ಈಗೇನು ಮಾಡುವುದು?
ಧರ್ಮಾಧಿಕಾರಿ-ಅವರನ್ನು ಧರ್ಮಾಧಿಕಾರಿಗಳ ಎದುರು ವಿಚಾರಣೆಗೆ ಕರೆಯಬೇಕು. ಅಲ್ಲಿ ಅವರು ಅಲ್ಲರ ಎದುರು ಕ್ಷಮೆ ಕೋರಬೇಕು ಹಾಗು ತಮ್ಮ ಅಭಿಪ್ರಾಯವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಮತ್ತವರಿಗೆ, ಕಠಿಣವಾದ ಎಚ್ಚರಿಕೆಯನ್ನು ಕೊಡುವುದೂ ಅನಿವಾರ್ಯ.
ರಾಜ-ಯಾರೇ ಧರ್ಮ ವಿರೋಧಿಯದರೂ ನಾವದನ್ನು ಸಹಿಸೆವು. ಗುರುಗಳಾದ ಗೆಲಿಲಿಯೋ ಅವರ ವಿಚಾರಣೆ ನಡೆಯಲಿ. ಆಯ್ತು. ಇನ್ನೇನಾದರೂ ವಿಚಾರವಿಲ್ಲದಿದ್ದಲ್ಲಿ ಇಂದಿನ ಸಭೆ ಮುಕ್ತಾಯವಾಗಲಿ. (ಸಭೆ ಮುಕ್ತಾಯವಾಗುವುದು)

ದೃಶ್ಯ-೧೦
(ಧರ್ಮಾಧಿಕಾರಿಗಳ ಸಭೆ)
ಧರ್ಮಾಧಿಕಾರಿಗಳು-ನ್ಯಾಯ ವಿಚಾರಣಾ ಸಭೆಯಲ್ಲಿ ಸೇರಿದ ಆಸ್ತಿಕ ನಾಗರಿಕರೆ, ಇಂದು, ೧೬೧೬ ನೆ ಸಾಲಿನ ಮಾರ್ಚ ೨೬, ನೇ ತಾರೀಖು. ಈ  ದಿನ ನಾವು, ಧರ್ಮ ವಿರೋಧಿ ಅಭಿಪ್ರಾಯಗಳನ್ನು ಜನರಲ್ಲಿ ಹರಡಿ ಧರ್ಮ ಹಾಗು ರಾಜ ಪ್ರಭುತ್ವದ ಬಗ್ಗೆ ಈಗಾಗಲೇ ಇರುವ ನಂಬುಗೆಯನ್ನು ಹಾಲು ಮಾಡಲು ಯತ್ನಿಸುತ್ತಿರುವ ಗೆಲಿಲಿಯೋ ಎಂಬ ಠಕ್ಕು ವಿಜ್ಞಾನಿಯ ವಿಚಾರಣೆ ನಡೆಯಲಿದೆ. ಆರೋಪಿಯನ್ನು ನಮ್ಮೆದುರು ತಂದು ನಿಲ್ಲಿಸಿ.   
(ಗೆಲಿಲಿಯೋ ತಾವೇ ಸ್ವತಃ ಬಂದು ನಿಲ್ಲುವರು)
ಧರ್ಮಾಧಿಕಾರಿ-ಗೆಲಿಲಿಯೋ ಅವರೇ, ತಮ್ಮ ಗ್ರಂಥ “ದಿ ಮೆಸ್ಸೆಂಜರ್ ಆಫ್ ದಿ ಸ್ಟಾರ್ಸ್”ನ್ನು ನಾವೆಲ್ಲಾ ಓದಿದ್ದೇನೆ. ತಮಗೆ ದೇವರಲ್ಲಿ ನಂಬಿಕೆ ಇದೆಯೇ?
ಗೆಲಿಲಿಯೋ-ಹೌದು ನಂಬಿಕೆಯಿದೆ.
ಧರ್ಮಾಧಿಕಾರಿ-ತಾವು ದೇವರಿಗಿಂತ ದೊಡ್ದವರೇ?ಅಲ್ಲ
ಗೆಲಿಲಿಯೋ-ಅಲ. ನಾನು ದೇವರಿಗಿಂತ ದೊಡ್ಡವರಲ್ಲ
ಧರ್ಮಾಧಿಕಾರಿ-ಹಾಗಿದ್ದರೆ, ದೇವರಾದ ಸೂರ್ಯ, ಚಂದ್ರರನ್ನು ತಾವು ಕೇವಲ ಆಕಾಶಕಾಯಗಲೆಂದು ಹೇಳುವ ಉದ್ಧಟತನವನ್ನು ಏಕೆ ಮಾಡಿದಿರಿ?
ಗೆಲಿಲಿಯೋ-ಅವು ಕೇವಲ ಆಕಾಶಕಾಯಗಳಾಗಿದ್ದರಿಂದ ಹಾಗೆ ಹೇಳಬೇಕಾಯಿತು.
ಧರ್ಮಾಧಿಕಾರಿ-ನೀವು ಹಾಗೆ ಹೇಳುವ ಮೂಲಕ ಜನರ ನಂಬಿಕೆಯನ್ನು ನಾಶಮಾಡುತ್ತಿದ್ದಿರಿ.
ಗೆಲಿಲಿಯೋ-ಇಲ್ಲ ನಾನು ಜನರಲ್ಲಿ ಮೂಢ ನಂಬಿಕೆಯನ್ನು ಹೋಗಲಾಡಿಸುತ್ತಿದ್ದೇನೆ
ಧರ್ಮಾಧಿಕಾರಿ-ನೇವು ಅರಿಸ್ಟಾಟಲ್ ಮಹಾಶಯರಿಗಿಂತ ದೊಡ್ದವರೇ? ನೀವು ಅವರನ್ನೇ ವಿರೋಧಿಸುತ್ತಿರುವಿರಿ.
ಗೆಲಿಲಿಯೋ-ನಾನು ಅವರನ್ನು ಗೌರವಿಸುತ್ತೇನೆ, ಆದರೆ ಅವರು ಹೇಳಿದ ಕೆಲವು ಮಿಥ್ಯೆಯನ್ನು ಅಲ್ಲಗಳೆಯುತ್ತೇನೆ.
ಧರ್ಮಾಧಿಕಾರಿ-ತಲತಲಾಂತರಗಳಿಂದ ಬಂದ ನಂಬಿಕೆಯನ್ನು ಹಾಳು ಮಾಡಿ ಜನರಲ್ಲಿ ಕ್ಷೋಭೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದೀರಿ. ಈ ಸಭೆಯಲ್ಲಿ ನೀವು ನಿಮ್ಮ ಅಭಿಪ್ರಾಯವನ್ನು ಹಿಂತೆಗೆದುಕೊಳ್ಳಬೇಕು. ಹಾಗು ಸಭೆಯ ಕ್ಷಮೆ ಕೇಳಬೇಕು.
ಸಭೆಯಲ್ಲಿ ಸೇರಿದ್ದ ಜನ-ಹೌದು ಹೌದು ಗೆಲಿಲಿಯೋ ಕ್ಷಮೆ ಕೇಳಬೇಕು. ಕ್ಷಮೆ ಕೇಳಲೇ ಬೇಕು.
ಧರ್ಮಾಧಿಕಾರಿ- ಗೆಲಿಲಿಯೋ ನೀನು ಇದಕ್ಕೆ ಎನೆನ್ನುವಿ? ನೀವೀಗ ಕ್ಷಮೆ ಕೇಳಲೇ ಬೇಕು. ತಮ್ಮ ಅಭಿಪ್ರಾಯವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು.
ಗೆಲಿಲಿಯೋ-(ಬೇಸರದಿಂದ)ಜನರೇ, ಈ ಧರ್ಮ ಸಭೆಯಲ್ಲಿ ನಿರ್ಣಯಿಸಿದಂತೆ ನಾನು ನನ್ನ ಧರ್ಮ ವಿರೋಧಿ ಹೇಳಿಕೆಯನ್ನು ಹಿಂಪಡೆಯುವೆ, ನಿಮ್ಮೆಲ್ಲರಲ್ಲಿ ಕ್ಷಮೆ ಕೋರುವೆ.
ಜನ- ಧರ್ಮಕ್ಕೆ ಜಯವಾಗಲಿ. ಧರ್ಮ ವಿರೋಧಿಗೆ ಧಿಕ್ಕಾರ........

ದೃಶ್ಯ-೧೧

(ರೋಮಿನ ಜೈಲು. ವಯಸ್ಸಾದ ಕಣ್ಣು ಕಾಣದ ಗೆಲಿಲಿಯೋ, ಕೈದಿಯಾಗಿ ಕುಳಿತಿದ್ದಾನೆ)
ಜೈಲರ್-ಗೆಲಿಲಿಯೋ ನಿನ್ನನ್ನು ನೋಡಲು ಯಾರೋ ಬಂದಿದ್ದಾರೆ.
ಗೆಲಿಲಿಯೋ-ಜೈಲರ್ ಸಾಹಬ್, ಈ ಮುಡಿ ಮುಡಿ ಜೀವವನ್ನು ನೋಡಲು, ಯಾರು ಬರುತ್ತಾರಪ್ಪ? ಅವರ ಹೆಸರೇನು?
ಜೈಲರ್-ಜಾನ್
ಗೆಲಿಲಿಯೋ-ಯಾರು? ಜಾನ್! ನನ್ನಬಾಲ್ಯದ ಗೆಳೆಯ. ಬೇಗ ಕಳುಹಿಸು.
(ಜೈಲರ್ ಹೋಗಿ ಜಾನನನ್ನು ಕಳುಹಿಸುವನು)
ಜಾನ್-ಮಿತ್ರ ಗೆಲಿಲಿಯೋ, ನಾನು ಜಾನ್, ಬಂದಿದ್ದೇನೆ.
ಗೆಲಿಲಿಯೋ-ಜಾನ್ ಜಾನ್ ಇಷ್ಟು ವರ್ಷ ಎಲ್ಲಿದ್ದಿಯೋ?ನನ್ನ ನೆನಪಾಗಲಿಲ್ಲವೇ?ಮರೆ ಧರೆಗುರುಳುವ ಹೊತ್ತಲ್ಲಿ ಬಂದ್ಯಲ್ಲೋ? ಎಲ್ಲಿ ನಿನ್ನ ಕೈ ಕೊಡು ಮುಟ್ಟಿ ನೋಡುವೆ
ಜಾನ್-ಗೆಲಿಲಿಯೋ, ನಿನಗೆ ಕಣ್ಣು ಕಾಣುವುದಿಲ್ಲವೇ?
ಗೆಲಿಲಿಯೋ-ಇಲ್ಲ. ಮುದಿ ಜೀವ ಯಾರಿಗೆ ಬೇಕು? ದೃಷ್ಟಿಯೂ ಕೈ ಕೊಟ್ಟಿ ಹೋಯಿತು
ಜಾನ್-ಹಾಗೆನ್ನಬೇಡ ಗೆಳೆಯ. ನೋಡು ನಾನು ನಿನ್ನ ಜೀವದ ಗೆಳೆಯ ಬಂದಿದ್ದೇನೆ. ನಿನಗೆ ಈ ಅವಸ್ಥೆ ಏಕೆ ಬಂತು?
ಗೆಲಿಲಿಯೋ-ಗೆಳೆಯಾ, ನಾನೊಬ್ಬ ವಿಜ್ಞಾನಿ, ವ್ಯವಹಾರಸ್ಥನಲ್ಲ, ಸತ್ಯವನ್ನು ನಂಬಿದವ. ಸತ್ಯವನ್ನು ಬಿದಲಾರದವ. ಇದೆ ನನಗೆ ಮುಳುವಾಯಿತು.
ಜಾನ್- ಜೈಲಿಗೆ ಬರುವಂತ ತಪ್ಪನ್ನು ಏನು ಮಾಡಿದೆ?
ಗೆಲಿಲಿಯೋ- ನಾನು ಪ್ರಯೋಗದಿಂದ ಏನನ್ನು ಕಂಡುಹಿಡಿದೇನೋ, ಅದನ್ನೇ ಜಗತ್ತಿಗೆ ಹೇಳಿದೆ. ಸೂರ್ಯ ಚಂದ್ರರನ್ನು ಆಕಾಶಕಾಯಗಳೆಂದೆ, ಭೂಮಿ ಸೂರ್ಯನ ಸುತ್ತ ಸುತ್ತುವುದು ಎಂದೇ, ಈ ಬಗ್ಗೆ ನಾಲ್ಕಾರು ಗ್ರಂಥಗಳನ್ನೂ ಬರೆದೆ. ಇದೇ ಧರ್ಮ ವಿರೋಧಿಯಾಯಿತು. ಧರ್ಮಾಧಿಕಾರಿಗಳ ನ್ಯಾಯಾಲಯ ಒಮ್ಮೆ ನನ್ನ ಎಚ್ಚರಿಸಿ ಹಾಗೆಯೇ ಬಿಟ್ಟಿತು. ಆದರೆ ನಾನೇನು ಮಾಡಲಿ ? ಸಂಶೋಧನೆಯೇ ನನ್ನ ಸಂಗಾತಿ. ನನ್ನ ಕುಟುಂಬ. ಎಲ್ಲವು. ಗುಟ್ಟಾಗಿ ಸಂಶೋಧನೆಯನ್ನು ಮುಂದುವರೆಸಿದೆ. ವಿಷಯ ತಿಳಿದ ಧರ್ಮಾಧಿಕಾರಿಗಳು ಆಗ ನನಗೆ ಮರಣದಂಡನೆಯನ್ನೇ ವಿಧಿಸಿದರು. ಅದ್ಯಾಕೋ ಏನೋ  ಮತ್ತೆ ಅವರು ನನ್ನನ್ನು ಕ್ಷಮಿಸಿ ಈ ಕತ್ತಲ ಕೊನೆಗೆ ದೂಡಿಬಿಟ್ಟರು. ಇಲ್ಲಿ ಬೆಳಕಿದ್ದಿದ್ದರೆ ನನಗೆ ಕಣ್ಣು ಕಾನಿಸುತ್ತಿರಲಿಲ್ಲವೆನ್ನು
ಜಾನ್- ಮಿತ್ರಾ ಎದೆಗುಂದಬೇಡ ನಾನಿನದ್ದೇನೆ. ಹೇಳು, ನಾನೀಗ ಏನು ಮಾಡಲಿ?
ಗೆಲಿಲಿಯೋ- ಜಾನ್  ನೀನು ನನ್ನನು ಹುಡುಕಿ ಬಂದೆಯಲ್ಲ ಅಷ್ಟೇ ಸಾಕು, ನಿನ್ನ ಒಂದು ಸ್ಪರ್ಶಕ್ಕಾಗಿ ನನ್ನ ಜೀವ ಕಾದಿತ್ತೋ ಏನೋ? ಕಾಲ ತೀರುತ್ತಾ ಬಂದಿದೆ. ಕೊನೆಯದಾಗಿ ನನಗೊಂದು ಸಹಾಯ ಮಾಡುವೆಯ?
ಜಾನ್-ಖಂಡಿತ ಮಾಡುವೆ. ಏನು  ಹೇಳು?
ಗೆಲಿಲಿಯೋ-ಮಿತ್ರ. ನಾನು ಗುಟ್ಟಾಗಿ ಬರೆದು ಈ ಜೈಲಿನಲ್ಲಿ ಅಡಗಿಸಿಟ್ಟಿದ್ದ ಕೆಲವು ಸಂಶೋಧನಾ ಬರಹಗಳಿವೆ. ಕಣ್ಣು ಹೋಗುವ ಮುನ್ನ ಬರೆದದ್ದು. ಇದನ್ನು ನಿನಗೆ ಒಪ್ಪಿಸುವೆ. ಪುಸ್ತಕ ರೂಪದಲ್ಲಿ ಅಚ್ಚು ಹಾಕಿಸಿಬಿದೆ (ಜೈಲೆರ್ ನ ಹೆಜ್ಜೆ ಸಪ್ಪಳ ) ಅಗೋ ಜೈಲರ್ ಬಂದ ಹಾಗಿದೆ. ನೀನೀಗ ಹೊರಡು.
ಜಾನ್- ಗೆಲಿಲಿಯೋ ನಾನು ಹೋಗಿ ಬರುವೆ.
(ಗೆಲಿಲಿಯೋ ಕೊಟ್ಟ ಪುಸ್ತವನ್ನು ತೆಗೆದುಕೊಳ್ಳುವನು )
ಗೆಲಿಲಿಯೋ-ಬರುವೆನೆನ್ನಬೇಡ. ನೀ ಬಂದರೂ ಆ ವೇಳೆಗೆ ನಾನಿರುವುದಿಲ್ಲ. ಮಿತ್ರಾ ನಿನಗೆ ದೇವರು ಒಳ್ಳೆಯದು ಮಾಡಲಿ.  
-ಗಣೇಶ ಹೆಗಡೆ, ಜ.ನ.ವಿ. ಗಾಳಿಬೀಡು